fbpx
ಬಿಗ್ ಬಾಸ್

‘ನನಗೆ ತುಂಬಾ ಹೊಟ್ಟೆ ಹಸಿವಾದಾಗ ಊಟ ಹಾಕಿದ ಮೊದಲ ವ್ಯಕ್ತಿ ಅಂಬರೀಶ್’ ಎಂದು ಹೇಳಿ ಬಿಗ್ ಬಾಸ್ ಮನೆಯಲ್ಲಿ ಅಂಬಿ ಅಗಲಿಕೆಗೆ ಕಣ್ಣೀರಿಟ್ಟ ಸೋನು

ರೆಬೆಲ್ ಸ್ಟಾರ್ ಅಂಬರೀಶ್ ರವರ ಸಾವಿನ ಸುದ್ದಿಯನ್ನು ಬಿಗ್ ಬಾಸ್ ಮನೆ ಮಂದಿಗಳಿಗೆ ಶನಿವಾರ ತಿಳಿಸಲಾಗಿತ್ತು. ವಿಷಯ ತಿಳಿದು ಮನೆಯಲ್ಲಿನ ಬಹಳಷ್ಟು ಮಂದಿ ಆಘಾತಕ್ಕೆ ಒಳಗಾದರು. ಹೀಗಿರುವಾಗ ಅಂಬರೀಶ್ ರವರಿಗೆ ನುಡಿ ನಮನ ಸಲ್ಲಿಸುವಂತೆ ಬಿಗ್ ಬಾಸ್ ಸ್ಪರ್ದಿಗಳಿಗೆ ಬಿಗ್ ಬಾಸ್ ಆದೇಶಿಸಿದ್ದರು. ಹಾಗಾಗಿ ಭಾನುವಾರದ ಸಂಚಿಕೆಯಲ್ಲಿ ದಿವಂಗತ ಅಂಬರೀಶ್ ಅವರಿಗೆ ಬಿಗ್‍ಬಾಸ್ ಸ್ಪರ್ಧಿಗಳು ಹಾಡುಗಳನ್ನು ಹೇಳುವ ಮೂಲಕ ಅವರ ಅಗಲಿಕೆಗೆ ಸಂತಾಪ ಸೂಚಿಸಿದರು.

ಅದರಂತೆ ಈ ಸಂದರ್ಭದಲ್ಲಿ ಅಲ್ಲಿದ್ದ ಕೆಲವರು ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ರವರ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಅದರಲ್ಲಿ ಸೋನು ಪಾಟೀಲ್ ರವರು ಹೇಳಿದ ಘಟನೆ ಮನಮಿಡಿಯುವಂತಿತ್ತು.

ಸೋನು ಪಾಟೀಲ್ ರವರು ಮಾತುಗಳನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ :

ಈಗಾಗಲೇ ನಾನು ಬೆಂಗಳೂರಿಗೆ ಬಂದು ತುಂಬಾ ಕಷ್ಟ ಪಟ್ಟಿದ್ದೀನಿ ಅಂತ ನಿಮೆಲ್ಲರಿಗೂ ಗೊತ್ತಿದೆ. ನಾನು ಬೆಂಗಳೂರಿಗೆ ಬಂದು ಅಂಬರೀಶ್ ಅವರ ಮನೆಯಲ್ಲಿ ಹೊಟ್ಟೆ ತುಂಬಾ ಊಟ ಮಾಡಿದ್ದೇನೆ. ನಾನು ನಗರಕ್ಕೆ ಬಂದಾಗ ಹಣ ಮತ್ತು ತಿನ್ನಲೂ ಊಟವೂ ಇರಲಿಲ್ಲ. ಕೆಲಸಕ್ಕಾಗಿ ಅಲೆದಾಡುತ್ತಿದ್ದೆ. ಆಗ ಜೆ.ಪಿ ನಗರದಲ್ಲಿ ಯಾವುದೋ ಕೆಲಸ ಇದೆ ಎಂದು ಹೇಳಿದಾಗ ನಾನು ಅಲ್ಲಿಗೆ ಹೋಗಿದ್ದೆ.

ನಮ್ಮ ತಾಯಿ ಅಂಬರೀಶ್ ಅವರ ಅಭಿಮಾನಿ. ಆದ್ದರಿಂದ ನಾನು ಒಮ್ಮೆ ಅಂಬರೀಶ್ ಅವರನ್ನು ಭೇಟಿ ಮಾಡಬೇಕು ಎಂದು ಅವರ ಮನೆಗೆ ಹೋಗಿದ್ದೆ. ನಾವು ಉತ್ತರ ಕರ್ನಾಟಕದವರು, ನಮ್ಮ ತಂದೆ ಒಬ್ಬ ರೈತರು, ಈಗ ಅವರಿಗೆ ಹೃದಯ ಕಸಿಮಾಡಿಸಬೇಕು ಎಂದು ಹೇಳಿಕೊಂಡೆ. ನಾನು ಉತ್ತರ ಕರ್ನಾಟಕ ಎಂದಾಕ್ಷಣ, ಅವರು ನೀವು ಕಲಾವಿದರಿಗೆ ಬಹಳ ಗೌರವ ಕೊಡುತ್ತೀರಿ. ನಿಮ್ಮನ್ನು ಗೌರವಿಸಬೇಕಾದುದ್ದು ನಮ್ಮ ಕರ್ತವ್ಯ ಎಂದು ಕೂರಿಸಿಕೊಂಡು ಮಾತನಾಡಿಸಿದರು.

ಅವರು ನೀನು ಊಟ ಮಾಡಿ ಬಹಳ ದಿನವಾಗಿದೆ ಅನ್ನಿಸುತ್ತಿದೆ, ಊಟ ಮಾಡು ಎಂದು ಹೇಳಿದರು. ನಿಜ ಹೇಳಬೇಕು ಅಂದರೆ ನನಗೆ ತುಂಬಾ ಹೊಟ್ಟೆ ಹಸಿವಾಗುತ್ತಿತ್ತು. ಕೊನೆಗೆ ಅವರ ಪಕ್ಕದಲ್ಲಿಯೇ ಕೂರಿಸಿಕೊಂಡು ಊಟ ಹಾಕಿದರು. ಅದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಯಾಕೆಂದರೆ ತುಂಬಾ ಹೊಟ್ಟೆ ಹಸಿವಾದಾಗ ನನಗೆ ಊಟ ಹಾಕಿದ ಮೊದಲ ವ್ಯಕ್ತಿ ಅವರಾಗಿದ್ದಾರೆ. ಇಂದು ಅವರು ನಮ್ಮ ಮಧ್ಯೆ ಇಲ್ಲ. ಆದರೆ ನಮ್ಮ ಮನಸ್ಸಿನಲ್ಲಿ ಸದಾ ಇರುತ್ತಾರೆ. ಮತ್ತೆ ಈ ಕನ್ನಡನಾಡಿನಲ್ಲಿ ಅವರು ಹುಟ್ಟಿ ಬರಬೇಕು ಎಂದು ಹಿರಿಯ ನಟ ಅಂಬರೀಶ್ ರವರೊಂದಿಗೆ ಸೋನು ಪಾಟೀಲ್ ರವರು ಕಳೆದ ಕ್ಷಣಗಳನ್ನ ಕಣ್ಣೀರಾಕುತ್ತ ಹೇಳಿಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top