fbpx
ಸಮಾಚಾರ

ವಿಷ್ಣು ಸ್ಮಾರಕ ಮೈಸೂರಲ್ಲೇ ನಿರ್ಮಾಣವಾಗಬೇಕೆಂದು ಪಟ್ಟು ಹಿಡಿದ ಮಂಡ್ಯ ವಿಷ್ಣು ಸೇನಾ ಸದಸ್ಯರು

ಕಳೆದ 9 ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ವಿಷ್ಣು ಸ್ಮಾರಕ ವಿಚಾರ, ಈಗ ಮತ್ತೆ ತಲೆಯೆತ್ತಿ ನಿಂತಿದೆ . ಮೊದಲಿನಿಂದಲೂ ಸ್ಮಾರಕ ನಿರ್ಮಾಣ ಕಾರ್ಯ ಎಲ್ಲಿ ನಡೆಯಬೇಕು ಅನ್ನುವ ಚರ್ಚೆಗೆ ಸರಿಯಾದ ಉತ್ತರ ಸಿಗದೇ ಹೋಗಿದ್ದು, ಅಂಬಿ ನಿಧನದ ನಂತರ ವಿಷ್ಣು ಸ್ಮಾರಕ ಚರ್ಚೆ ಮತ್ತಷ್ಟು ಸ್ವರೂಪ ಪಡೆದ್ದಿದ್ದು ವಿಷ್ಣು ಸ್ಮಾರಕ ಕಂಠೀರವ ಸ್ಟುಡಿಯೋ ದಲ್ಲಿ ನಡೆಯ ಬೇಕೋ, ಮೈಸೂರಿನಲ್ಲಿ ನಡೆಯಬೇಕೋ ಅಥವಾ ಅಭಿಮಾನ್ ಸ್ಟುಡಿಯೋ ದಲ್ಲೇ ನಡೆಯಬೇಕೋ ಅನ್ನೋ ಗೊಂದಲಗಳಿಗೆ ಪರಿಹಾರ ಹುಡುಕಬೇಕಾದ ಅನಿವಾರ್ಯತೆ ಎದುರಾಗಿದೆ. ಇದರ ಕುರಿತಾದ ಬಿಸಿಬಿಸಿ ಚರ್ಚೆ ಎಲ್ಲೆಡೆ ನಡೆಯುತ್ತಿರುವಾಗಲೇ ಕೆಲ ವಿಷ್ಣು ಅಭಿಮಾನಿಗಳು ಮೈಸೂರಿನಲ್ಲೇ ವಿಷ್ಣು ಸ್ಮಾರಕ ಜರುಗಬೇಕು ಎಂದು ಪಟ್ಟು ಹಿಡಿದ್ದಾರೆ.

ಹೌದು, ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ರಸ್ತೆಯಲ್ಲಿನ ಹಾಲಾಳು ಗ್ರಾಮದ ಬಳಿ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲು ಗುರುತಿಸಲಾಗಿದ್ದ ವಿವಾದಿತ ಜಾಗದಲ್ಲಿ ಮಂಡ್ಯದ ವಿಷ್ಣು ಸೇನಾ ಸಂಘದ ಕಾರ್ಯಕರ್ತರು ಬಂದು ಅಲ್ಲಿ ಬೆಳೆದು ನಿಂತಿದ್ದ ಗಿಡ ಗಂಟಿಗಳನ್ನು ಕಿತ್ತು ಹಾಕಿ ಶುಚಿಗೊಳಿಸಿ, ಹೋಮಕುಂಡ ಸರಿಪಡಿಸಿ ಪೂಜೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಭಾನುವಾರ ಸಂಜೆ ಮಂಡ್ಯದಿಂದ ಬಂದ ವಿಷ್ಣು ಸೇನಾ ಸಂಘದ ಕಾರ್ಯಕರ್ತರು ವಿವಾದಿತ ಜಾಗದಲ್ಲೇ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಮಾಡಬೇಕೆಂದು ಆಗ್ರಹಿಸುವುದರೊಂದಿಗೆ ಆ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ಶಂಕು ಸ್ಥಾಪನೆ ಕೂಡ ನೆರವೇರಿಸಿ ಪೂಜೆ ಸಲ್ಲಿಸಿದ್ದಾರೆ.

ಮಂಡ್ಯದ ವಿಷ್ಣು ಸೇನಾ ಸಂಘದ ಕಾರ್ಯಕರ್ತರು ವಿಷ್ಣು ಸ್ಮಾರಕ ನಿರ್ಮಾಣ ಆಗುವವರೆಗೆ ಆ ಸ್ಥಳದಲ್ಲಿ ಹೋರಾಟ ಮಾಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಸ್ಮಾರಕ ನಿರ್ಮಾಣ ಮಾಡಲು ಸರ್ಕಾರಕ್ಕೆ ವಿಷ್ಣು ಅಭಿಮಾನಿಗಳು ಗಡುವು ಕೊಟ್ಟಿದ್ದು . ಡಿಸೆಂಬರ್ 30 ವಿಷ್ಣುವರ್ಧನ್ ಪುಣ್ಯ ಸ್ಮರಣೆ ಹೊತ್ತಿಗೆ ಸ್ಮಾರಕ ಜಾಗದಲ್ಲಿ ಗುದ್ದಲಿ ಪೂಜೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಸರ್ಕಾರವು ಅಭಿಮಾನ್ ಸ್ಟುಡಿಯೋ ದಲ್ಲಿ ಸ್ಮಾರಕ ನಿರ್ಮಾಣ ಮಾಡಲು ಹೋದಾಗ ಉಂಟಾದ ತೊಂದರೆಗಳಿಂದ ಹಾಲಾಳು ಗ್ರಾಮದ ಬಳಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಮಾಡಲು ಜಾಗ ನೀಡಿತ್ತು. ಆದರೆ ಸ್ಥಳೀಯ ರೈತರು ಈ ಜಾಗ ತಮ್ಮದು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಹೀಗಾಗಿ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ತಡೆ ಬಿದ್ದಿದೆ. ಈಗ ಇದೇ ಸ್ಥಳಕ್ಕೆ ಬಂದ ಮಂಡ್ಯದ ವಿಷ್ಣುಸೇನಾ ಸಂಘಟನೆ ಕಾರ್ಯಕರ್ತರು ವಿವಾದಿತ ಜಾಗವನ್ನು ಶುಚಿಗೊಳಿಸಿ ಬಾಳೆ ಕಂಬ, ಹೂ, ಇಟ್ಟಿಗೆ ಇಟ್ಟು ತಮ್ಮ ನೆಚ್ಚಿನ ನಟನಿಗೆ ಪೂಜೆ ಸಲ್ಲಿಸಿದ್ದಾರೆ.

ದಿನದಿಂದ ದಿನಕ್ಕೆ ವಿಷ್ಣು ಸ್ಮಾರಕ ವಿಚಾರ ಹೊಸ-ಹೊಸ ಆಯಾಮ ಪಡೆದುಕೊಳ್ಳುತ್ತಿದ್ದು, ಸರ್ಕಾರದ ಮೇಲೆ ವಿಷ್ಣು ಸ್ಮಾರಕ ಮಾಡಲೇಬೇಕೆಂಬ ಒತ್ತಾಯ ಹೇರಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸರ್ಕಾರ ಈ ನಿಟ್ಟಿನಲ್ಲಿ ಯಾವ ನಿರ್ಣಯ ಕೈಗೊಳ್ಳುತ್ತದೋ ಕಾದು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top