ಸಮಾಚಾರ

ವಂಚನೆ ಆರೋಪ- ‘ದಿ ವಿಲನ್’ ಸಿನಿಮಾ ನಿರ್ಮಾಪಕನ ಮೇಲೆ ಎಫ್ಐಆರ್.

ತಪ್ಪು ವಿಳಾಸ, ನಕಲಿ ಬಿಲ್ ಸಲ್ಲಿಸಿ ವಂಚನೆ ಎಸಗಿದ ಆರೋಪದ ಮೇಲೆ ‘ದಿ ವಿಲನ್’ ಚಿತ್ರದ ನಿರ್ಮಾಪಕ ಸಿ.ಆರ್ ಮನೋಹರ್ ಸೇರಿ ಒಟ್ಟು 8 ಮಂದಿ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಸರ್ಕಾರಕ್ಕೆ ವಂಚಿಸಿದ್ದ ಆರೋಪಗಳಡಿ ವಿಧಾನಪರಿಷತ್‌ನ ಏಳು ಹಾಲಿ ಸದಸ್ಯರು ಹಾಗೂ ಒಬ್ಬರು ಮಾಜಿ ಸದಸ್ಯರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ವಿಧಾನಪರಿಷತ್ ಸದಸ್ಯರಾದ ಸಿ.ಆರ್.ಮನೋಹರ್, ಬೋಸರಾಜ್, ಲಕ್ಷ್ಮಿನಾರಾಯಣ್, ಅಲ್ಲಂ ವೀರಭದ್ರಪ್ಪ, ಅಪ್ಪಾಜಿಗೌಡ, ಎಸ್.ರವಿ, ಆರ್.ಬಿ.ತಿಮ್ಮಾಪುರ, ಹಾಗೂ ರಘು ಆಚಾರ್ ಅವರುಗಳು ಕಾಂಗ್ರೆಸ್ ಅಭ್ಯರ್ಥಿಯನ್ನು ಮೇಯರ್ ಅನ್ನಾಗಿ ಆಯ್ಕೆ ಮಾಡುವ ಸಲುವಾಗಿ ತಮ್ಮ ವಿಳಾಸಗಳನ್ನು ಬೆಂಗಳೂರಿಗೆ ವರ್ಗಾಯಿಸಿಕೊಂಡು ಮತ ಚಲಾಯಿಸಿದ್ದರು. ಆದರೆ, ಸರ್ಕಾರದಿಂದ ಪಡೆಯುವ ಟಿಎ, ಡಿಎಗೋಸ್ಕರ ವಿಧಾನಸೌಧದಲ್ಲಿ ತಮ್ಮ ಸ್ವಕ್ಷೇತ್ರದಿಂದಲೇ ಬೆಂಗಳೂರಿಗೆ ಪ್ರಯಾಣ ಮಾಡುತ್ತಿರುವುದಾಗಿ ವಂಚಿಸಿ ಲಕ್ಷಾಂತರ ರೂ.ಗಳನ್ನು ವಂಚಿಸಿದ್ದರು ಎಂದು ಆರೋಪಿಸಲಾಗಿದೆ.

 

 

 

ಆರ್.ಜೆ.ಹೆಚ್. ರಾಮಣ್ಣ ಎಂಬುವರು ವಿಶೇಷ ನ್ಯಾಯಾಲಯದಲ್ಲಿ ಮೊಕದ್ದಮೆ ಹಾಕಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್, ಕಾನೂನು ರೀತಿ ಕ್ರಮ ಜರುಗಿಸುವಂತೆ ವಿಧಾನಸೌಧ ಪೊಲೀಸರಿಗೆ ಸೂಚಿಸಿತ್ತು. ಕೋರ್ಟ್ ನಿರ್ದೇಶನದ ಮೇರೆಗೆ 8 ಹಾಲಿ ಮತ್ತು ಮಾಜಿ ಶಾಸಕರ ವಿರುದ್ದ ವಿಧಾನಸೌಧ ಠಾಣೆ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಎಂಟು ಮಂದಿಯ ವಿರುದ್ಧ ಐಪಿಸಿ, 420(ವಂಚನೆ), 177(ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುವುದು), 149(ಅಪರಾದದ ಉದ್ದೇಶದಿಂದ ಗುಂಪುಗೂಡುವುದು) ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯಡಿ ದೂರು ದಾಖಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top