fbpx
ದೇವರು

ಅತಿ ಶ್ರೇಷ್ಠವಾದ ಮಾರ್ಗಶಿರ ಮಾಸದ ವಿಶೇಷತೆ ಏನು,ಈ ಮಾಸವನ್ನು ಹೇಗೆ ಆಚರಣೆ ಮಾಡಿದ್ರೆ ವಿಶೇಷ ಫಲ ಸಿಗುತ್ತೆ ಗೊತ್ತಾ

ಮಾರ್ಗಶಿರ ಮಾಸದ ವಿಶೇಷತೆ ಏನು ?ಮಾರ್ಗಶಿರ ಮಾಸವನ್ನು ಹೇಗೆ ಆಚರಿಸಬೇಕು ? ಇದರಿಂದ ಯಾವೆಲ್ಲಾ ಪಲಗಳು ಲಭಿಸುತ್ತವೆ.
ಮಾರ್ಗಶಿರ ಮಾಸದಲ್ಲಿ ಎಲ್ಲೆಲ್ಲೂ ಮೈಕೊರೆಯುವ ಚಳಿ. ಭಗವಂತನ ಪೂಜೆಗಿದು ಪರ್ವಕಾಲ. ಕೊರೆಯುವ ಚಳಿಯಲ್ಲಿ ಪ್ರಾತಃಕಾಲದಲ್ಲಿ ಎದ್ದು ಭಗವಂತನನ್ನು ಪೂಜಿಸಿದರೆ ಭಗವಂತನ ಸಂಪೂರ್ಣ ಅನುಗ್ರಹ ನಮಗೆ ಪ್ರಾಪ್ತಿಯಾಗುತ್ತದೆ. ಇಂದೂ ಸಂಸ್ಕೃತಿಯಲ್ಲಿ ಒಂದೊಂದು ಮಾಸಕ್ಕೂ ಒಂದೊಂದು ವಿಶೇಷತೆಯಿದೆ. ನಾವೆಲ್ಲ ಈಗ ಕಾರ್ತಿಕ ಮಾಸ ಮುಗಿಸಿ ಮಾರ್ಗಶಿರ ಮಾಸಕ್ಕೆ ಕಾಲಿಟ್ಟಿದ್ದೇವೆ. ಪಂಚಾಂಗದ ಪ್ರಕಾರ ಹುಣ್ಣಿಮೆಯ ದಿನ ಚಂದ್ರ ಮೃಗಶಿರ ನಕ್ಷತ್ರದ ಜೊತೆ ಇರುವುದರಿಂದ ಈ ಮಾಸವನ್ನು ಮಾರ್ಗಶಿರ ಮಾಸ ಎಂದು ಕರೆಯಲಾಗುತ್ತದೆ. ಮಾರ್ಗಶಿರ ಮಾಸದ ಬಗ್ಗೆ ಸಾಕ್ಷಾತ್ ಭಗವಂತನೇ ಹೇಳಿರುವ ಹಾಗೆ ಭಗವಂತನಿಗೆ ಅತ್ಯಂತ ಪ್ರಿಯವಾದ ಮಾಸ ಎಂದು ಹೇಳಿದ್ದಾನೆ. ಈ ಬಗ್ಗೆ ಸ್ಕಂದ ಪುರಾಣದಲ್ಲಿಯೂ ಕೂಡ ಉಲ್ಲೇಖವಿದೆ.

ಒಂದೊಂದು ಮಾಸಕ್ಕೆ ಒಂದು ದೇವತೆಯನ್ನು ಆರಾಧನೆ ಮಾಡುವ ಪದ್ಧತಿ ಇದೆ. ಹಾಗೆ ಮಾರ್ಗಶಿರ ಮಾಸದ ನಿಯಾಮಕ ದೇವರು ಕೇಶವ. ಹೀಗಾಗಿ ಈ ಮಾಸದಲ್ಲಿ ವಿಷ್ಣು ಸಹಸ್ರನಾಮ ಪಠಣೆ ಹಾಗೂ ವಿಷ್ಣು ದೇಗುಲಗಳಿಗೆ ಭೇಟಿ ನೀಡುವುದು ಅತ್ಯಂತ ಪುಣ್ಯಪ್ರದ.ಮಾರ್ಗಶಿರ ಮಾಸದಲ್ಲಿ ಭಗವಂತನ ಆರಾಧನೆಗೆ ಅರುಣೋದಯ ಕಾಲ ಅತ್ಯಂತ ಶ್ರೇಷ್ಠ. ಮಾರ್ಗಶಿರ ಮಾಸಕ್ಕೆ ಮಹಾಭಾರತದ ನಂಟು ಕೂಡ ಇದೆ. ಗೋಪಿಕೆಯರು ಶ್ರೀ ಕೃಷ್ಣನ ತಂಗಿಯಾದ ನಂದಗೋಪನ ಜೊತೆ ಮಾರ್ಗಶಿರ ಮಾಸದ ಬ್ರಾಹ್ಮೀ ಮುಹೂರ್ತದಲ್ಲಿ ಭಗವಂತನ ಆರಾಧನೆಯನ್ನು ಮಾಡಿದ್ದರಂತೆ ಇದರಿಂದ ಭಗವಂತನ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದರು ಎನ್ನಲಾಗುತ್ತದೆ. ಮಾರ್ಗಶಿರ ಮಾಸದಲ್ಲಿ ವಿಶೇಷವಾಗಿ ಹಲವು ವ್ರಥ ಮತ್ತು ಪೂಜೆಗಳನ್ನು ಮಾಡಲಾಗುತ್ತದೆ.

 

 

 

ಸುಬ್ರಹ್ಮಣ್ಯ ಷಷ್ಠಿ:ಮಾರ್ಗಶಿರ ಮಾಸದ ಷಷ್ಠಿಯನ್ನು ಚಂಪ ಷಷ್ಟಿ , ಸ್ಕಂದ ಷಷ್ಠಿ ಎಂದು ಕೂಡ ಕರೆಯಲಾಗುತ್ತದೆ. ಈ ದಿನ ಹತ್ತು ವರ್ಷದೊಳಗಿನ ಬಾಲಕರು ಅಂದರೆ ಬಾಲ ಬ್ರಹ್ಮಚಾರಿಗಳನ್ನು ಪೂಜಿಸಿ ಅವರ ಆಶೀರ್ವಾದವನ್ನು ಪಡೆದರೆ ವಿಶೇಷ ಫಲ ಪ್ರಾಪ್ತಿಯಾಗುತ್ತದೆ.ಬಾಲ ಬ್ರಹ್ಮಚಾರಿಗಳ ಪೂಜೆಯಿಂದ ಸುಬ್ರಮಣ್ಯನ ವಿಶೇಷ ಅನುಗ್ರಹ ಪ್ರಾಪ್ತಿಯಾಗಿ ಸಂತಾನವಿಲ್ಲದವರಿಗೆ ಸಂತಾನವಾಗುತ್ತದೆ . ಅಷ್ಟೇ ಅಲ್ಲ ಸರ್ಪದೋಷ ,ಚರ್ಮರೋಗಗಳು ಪರಿಹಾರವಾಗುತ್ತವೆ ಎನ್ನುವ ನಂಬಿಕೆ ಇದೆ.
ಗೀತಾ ಜಯಂತಿ:ಮಾರ್ಗಶಿರ ಮಾಸದ ಶುಕ್ಲ ಏಕಾದಶಿ ಗೀತಾ ಜಯಂತಿ ಎಂದು ಮತ್ತು ಈ ದಿನವನ್ನು ಮೋಕ್ಷದ ಏಕಾದಶಿ ಎಂದು ಕರೆಯಲಾಗುತ್ತದೆ. ಶ್ರೀ ಕೃಷ್ಣ ಅರ್ಜುನರನ್ನು ಉದ್ದೇಶಿಸಿ ಜಗತ್ತಿಗೆ ಸಂದೇಶ ಕೊಟ್ಟ ವಿಶೇಷ ಮಾಸವಿದು. ಸ್ವತಹ ಭಗವಂತನೇ ಜಗತ್ತನ್ನು ಉದ್ದೇಶಿಸಿ ಜೀವನ ಪಾಠ ಹೇಳುವ ಕಥೆ ಭಗವದ್ಗೀತೆ. ಭಗವದ್ಗೀತೆ ಎಂದರೆ ಕೇವಲ ಭಾರತೀಯರಿಗಷ್ಟೇ ಸೀಮಿತವಾಗಿಲ್ಲ. ಈ ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬ ಮನುಷ್ಯ ಕೂಡ ಇದರ ಸಾರವನ್ನು ಅರ್ಥ ಮಾಡಿಕೊಳ್ಳಲೇಬೇಕು. ಯಾಕೆಂದರೆ ಇದು ಇಂದೂಗಳ ಧರ್ಮ ಗ್ರಂಥವಾದ ಜಗತ್ತಿನ ಪ್ರತಿಯೊಬ್ಬರಿಗೂ ಅನ್ವಯಿಸುವಂಥದ್ದು. ಮಾರ್ಗಶಿರ ಮಾಸದಲ್ಲಿ ಭಗವದ್ಗೀತೆಯ ಮಹತ್ವ ಅರಿತು ನಡೆದರೆ ಜೀವನ ಅರ್ಥ ಪೂರ್ಣವಾಗಿರುತ್ತದೆ.

 

ಹನುಮದ್ ವ್ರತ:ಮಾರ್ಗಶಿರ ಮಾಸ ಶುಕ್ಲ ಪಕ್ಷದ ತ್ರಯೋದಶಿಯಂದು ಹನುಮದ್ವ್ರತ. ಈ ದಿನ ವಿಶೇಷವಾಗಿ ರಾಮ ಮತ್ತು ಹನುಮನನ್ನು ಪೂಜಿಸಬೇಕು. ಇದರಿಂದ ಧೈರ್ಯವಂತಿಕೆ, ಶಕ್ತಿ, ಯಶಸ್ಸು, ಕೀರ್ತಿ, ಬುದ್ಧಿ , ಸಂಪತ್ತು, ಆರೋಗ್ಯ ಭಾಗ್ಯ ಮತ್ತು ಒಳ್ಳೆಯ ಮಾತುಗಾರಿಕೆಯ ಕಲೆಯನ್ನು ಹನುಮಂತ ಕರುಣಿಸುತ್ತಾನೆ.
ಧನುರ್ಮಾಸ ಆರಂಭ:ಮಾರ್ಗಶಿರ ಮಾಸದಲ್ಲಿ ಸೂರ್ಯ ಧನಸ್ಸು ರಾಶಿಯನ್ನು ಪ್ರವೇಶಿಸುವುದರಿಂದ ಧನುರ್ಮಾಸವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಮಾಡುವ ಭಗವಂತನ ಪೂಜೆ ಅತ್ಯಂತ ಶ್ರೇಷ್ಠ. ಈ ಮಾಸದಲ್ಲಿ ಸೂರ್ಯೋದಯಕ್ಕೆ ಮುನ್ನ ಯಾರು ಲಕ್ಷ್ಮೀಯನ್ನು ಪೂಜಿಸುತ್ತಾರೆ, ಅವರ ಮನೆಯಲ್ಲಿ ಸಂಪತ್ತಿನ ಹೊಳೆಯೇ ಹರಿಯುತ್ತದೆ ಎನ್ನುವ ಪ್ರತೀತಿ ಇದೆ.
ವೈಕುಂಠ ಏಕಾದಶಿ:
ಧನುರ್ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ವೈಕುಂಠ ಏಕಾದಶಿ ಎಂದು ಆಚರಣೆ ಮಾಡಲಾಗುತ್ತದೆ. ಏಕಾದಶಿಗಳಲ್ಲಿ ವೈಕುಂಠ ಏಕಾದಶಿ ಅತ್ಯಂತ ವಿಶೇಷವಾದ ದಿನ. ಈ ದಿನ ಸ್ವರ್ಗದ ಬಾಗಿಲು ತೆರೆಯುತ್ತದೆ ಎನ್ನುವ ನಂಬಿಕೆ ಅನಾದಿ ಕಾಲದಿಂದಲೂ ಇದೆ. ಈ ದಿನ ತಿಮ್ಮಪ್ಪನ ದರ್ಶನ ಮಾಡುವುದರಿಂದ ವಿಶೇಷ ಫಲಗಳು ಪ್ರಾಪ್ತಿಯಾಗುತ್ತವೆ ಎನ್ನುವ ನಂಬಿಕೆ ಇದೆ. ಹೀಗಾಗಿ ವೈಕುಂಠ ಏಕಾದಶಿಯಂದು ತಿಮ್ಮಪ್ಪನ ದರ್ಶನಕ್ಕೆ ಜನ ಮುಗಿಬೀಳುತ್ತಾರೆ.

 

ದತ್ತಾತ್ರೇಯ ಜನಿಸಿದ ಮಾಸವಿದು:ಮಾರ್ಗಶಿರ ಮಾಸದ ಹುಣ್ಣಿಮೆಯ ಸಾಯಂಕಾಲ ದತ್ತನ ಜನನ ವಾಗಿರುವುದು. ಆದ್ದರಿಂದ ಈ ದಿನವನ್ನು ದತ್ತ ಜಯಂತಿಯೆಂದು ಆಚರಿಸಲಾಗುತ್ತದೆ. ದತ್ತಾತ್ರೇಯ ಎಂದರೆ ತ್ರಿಮೂರ್ತಿಗಳ ಸ್ವರೂಪ. ಗಾಣಗಾಪುರ ಕ್ಷೇತ್ರ ಗುರು ದತ್ತಾತ್ರೇಯರ ಪರಮಪವಿತ್ರ ಕ್ಷೇತ್ರ. ದತ್ತ ಜಯಂತಿಯ ದಿನ ಸಂಗಮದಲ್ಲಿ ಸ್ನಾನಮಾಡಿ ಔದುಂಬರ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಬೇಕು. ನಂತರ ಸಾಧುಗಳ ದರ್ಶನ ಪಡೆದು ಭಕ್ತಿಯಿಂದ ಬೇಡಿದರೆ ಗುರು ಒಲಿಯುವುದರಲ್ಲಿ ಸಂಶಯವಿಲ್ಲ. ಜ್ಞಾನ , ಕರುಣೆಯ ಪ್ರತೀಕವಾಗಿರುವ ಗುರುವಿನ ಬಲದಿಂದ ಸಕಲ ಕಷ್ಟಗಳು ಕೂಡ ನಿವಾರಣೆಯಾಗುತ್ತವೆ. ಜನ್ಮಾಂತರಗಳ ಪಾಪ ಕಳೆದು ಗುರುವಿನಿಂದ ಜನ್ಮ ಸಾರ್ಥಕ ಮಾಡಿಕೊಳ್ಳಲು ಈ ದಿನ ಸುದಿನ. ದ್ವಾದಶ ಮಾಸದಲ್ಲಿ ಮಾರ್ಗಶಿರ ಮಾಸಕ್ಕೆ ವಿಶೇಷ ಸ್ಥಾನವಿದೆ.ಈ ಮಾಸ ಅತ್ಯಂತ ಶ್ರೇಷ್ಠವಾದ ಮಾಸ. ಈ ಮಾಸದಲ್ಲಿ ಮುಂಜಾನೆ ಎದ್ದು ಭಗವಂತನನ್ನು ಭಕ್ತಿಯಿಂದ ಪೂಜಿಸಿ ಪ್ರಾರ್ಥಿಸಿದರೆ ಅವನ ಅನನ್ಯ ಪ್ರೀತಿ ನಮ್ಮ ಮೇಲೆ ಇರುವುದರಲ್ಲಿ ಸಂಶಯವಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top