fbpx
ದೇವರು

ಲಿಂಗ ಸ್ವರೂಪದಲ್ಲಿ ಬ್ರಹ್ಮ ,ವಿಷ್ಣು ಮಹೇಶ್ವರರಾದ ತ್ರಿಮೂರ್ತಿಗಳು ನೆಲೆಸಿರುವ ಪುಣ್ಯ ಕ್ಷೇತ್ರವಿದು.ಈ ಕ್ಷೇತ್ರಕ್ಕೆ ಹೋದರೆ ನಿಮ್ಮ ಸಕಲ ಇಷ್ಟಾರ್ಥ ಸಿದ್ಧಿಯಾಗುವುದು ಖಂಡಿತವಂತೆ

ಅದೊಂದು ಶಕ್ತಿ ತುಂಬಿದ ಕ್ಷೇತ್ರ. ಆ ದೇವಾಲಯದೊಳಗೆ ಕಾಲಿಡುತ್ತಿದ್ದಂತೆಯೇ ಮನದಲ್ಲಿ ಭಕ್ತಿ ಪ್ರಹರಿಸುತ್ತದೆ. ತ್ರಿಮೂರ್ತಿಗಳು ಒಟ್ಟಾಗಿ ದರ್ಶನ ನೀಡುತ್ತಾ ಭಕ್ತರ ಬಾಳನ್ನು ಬೆಳಗುತ್ತಿರುವ ಮಹಿಮಾನ್ವಿತ ಕ್ಷೇತ್ರವಿದು. ಆ ಕ್ಷೇತ್ರದಲ್ಲಿ ಸ್ಥಿತಗೊಂಡಿರುವ ದೇವಾನು ದೇವತೆಗಳನ್ನು ಕಣ್ತುಂಬಿಕೊಂಡರು ಸಾಕು,ಬದುಕು ಧನ್ಯವಾಗುತ್ತದೆ. ನಿತ್ಯವೂ ನಾನಾ ಕೋರಿಕೆಗಳನ್ನು ಹೊತ್ತು ನೂರಾರು ಜನ ಈ ಕ್ಷೇತ್ರಕ್ಕೆ ಬರುವುದನ್ನು ನಾವು ಇಲ್ಲಿ ಕಾಣಬಹುದು. ಇಲ್ಲಿ ನೆಲೆ ನಿಂತಿರುವ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಸಮರ್ಪಿತವಾದ ಕ್ಷೇತ್ರ. ಪ್ರಪಂಚದ ಇನ್ನೆಲ್ಲೂ ತ್ರಿಮೂರ್ತಿಗಳು ಲಿಂಗ ಸ್ವರೂಪದಲ್ಲಿ ಕಾಣಸಿಗುವುದಿಲ್ಲ. ಆದರೆ ಈ ಪುಣ್ಯ ದೇವಾಲಯದಲ್ಲಿ ಬ್ರಹ್ಮ, ವಿಷ್ಣು , ಮಹೇಶ್ವರರು ಲಿಂಗರೂಪಿಯಾಗಿ ನೆಲೆಗೊಂಡು ಬೇಡಿ ಬಂದವರ ಇಷ್ಟಾರ್ಥಗಳನ್ನು ನೆರವೇರಿಸುತ್ತಿರುವುದು ಈ ಕ್ಷೇತ್ರದ ವೈಶಿಷ್ಟ್ಯತೆ.

ಇಲ್ಲಿ ಶಕ್ತಿ ಸ್ವರೂಪಿಗಳು ಒಂದೇ ಕ್ಷೇತ್ರದಲ್ಲಿ ಆರಾಧಿಸಲ್ಪಡುತ್ತಿರುವಕ್ಕೆ ಒಂದು ಪೌರಾಣಿಕ ಕಥೆ ಇದೆ. ಅದೇನೆಂದರೆ ಈ ಪ್ರದೇಶದಲ್ಲಿ ಮಾನಂಗಿ ಎನ್ನುವ ಮಹರ್ಷಿಗಳು ಒಬ್ಬರು ತಪಸ್ಸನ್ನು ಆಚರಿಸುತ್ತಾ ತನ್ನಲ್ಲಿಗೆ ಬರುವ ಜನಸಾಮಾನ್ಯರಿಗೆ ಉತ್ತಮ ಸಲಹೆಗಳನ್ನು ನೀಡುತ್ತಿದ್ದರು. ಅಲ್ಲಿನ ಗ್ರಾಮಸ್ಥರಿಗೆ ತೊಂದರೆ ಉಂಟಾದರೂ ಅವರು ಪರಿಹಾರ ಬೇಡಿಕೊಂಡು ಆ ಋಷಿಗಳ ಬಳಿ ಹೋಗುತ್ತಿದ್ದರು. ಹೀಗಿರುವಾಗ ಒಂದು ಸಾವಿರ ವರ್ಷಗಳ ಹಿಂದೆ ಒಂದು ದಿನ ರಾತ್ರಿ ಆ ಮಹರ್ಷಿಗಳ ಕನಸಲ್ಲಿ ಇಲ್ಲಿನ ಗ್ರಾಮದೇವತೆಯಾಗಿದ್ದ ವ್ಯಾಘ್ರ ಚಾಮುಂಡಿ ಬಂದು ಹೀಗೆ ಹೇಳಿದಳು. ಈ ಊರಿನ ಸಮೀಪದಲ್ಲಿರುವ ನದಿಯೊಂದರಲ್ಲಿ ತ್ರಿಮೂರ್ತಿಗಳು ಲಿಂಗ ರೂಪಿಯಾಗಿ ನೆಲೆಸಿದ್ದಾರೆ. ಅವರನ್ನು ನದಿಯ ಆಳದಿಂದ ನಾನು ದಡಕ್ಕೆ ತಲುಪಿಸುತ್ತೇನೆ. ಆ ಲಿಂಗಗಳನ್ನು ಊರಿನೊಳಗೆ ತೆಗೆದುಕೊಂಡು ಬಾ ಎಂದು ದೇವಿ ಕಾನಂಗಿ ಮಹರ್ಷಿಗಳಿಗೆ ಆಜ್ಞಾಪಿಸಿದ್ದಳು.ವ್ಯಾಘ್ರ ಚಾಮುಂಡಿ ಆದೇಶದಂತೆ ಮಹರ್ಷಿಗಳು ನದಿಯ ತಟದಿಂದ ತ್ರಿಮೂರ್ತಿಗಳ ಲಿಂಗಗಳನ್ನು ಒಂದು ಬುಟ್ಟಿಯಲ್ಲಿ ಇರಿಸಿ, ಊರ ಒಳಗೆ ಹೊತ್ತು ತರುತ್ತಾರೆ. ಹೀಗೆ ತಂದ ಲಿಂಗಗಳನ್ನು ಒಂದು ದಿವ್ಯ ಮುಹೂರ್ತದಲ್ಲಿ ಒಂದು ಸ್ಥಳದಲ್ಲಿ ಪುಟ್ಟದಾದ ಗುಡಿಸಲನ್ನು ಕಟ್ಟಿ ಪ್ರತಿಷ್ಠಾಪನೆ ಮಾಡಿ ಪೂಜಿಸಲು ಆರಂಭಿಸಿದರು. ಅಂದಿನಿಂದ ಇಂದಿನವರೆಗೂ ಈ ಕ್ಷೇತ್ರದಲ್ಲಿ ತ್ರಿಮೂರ್ತಿಗಳಿಗೆ ವಿಧಿವತ್ತಾದ ಪೂಜೆಗಳು ನಡೆಯುತ್ತಲೇ ಬಂದಿವೆ.

 

 

 

ತ್ರಿಮೂರ್ತಿಗಳಲ್ಲಿ ಒಬ್ಬ ಈ ಬ್ರಹ್ಮ.ಈ ಶಕ್ತಿ ಸ್ವರೂಪಿ ವಿಷ್ಣುವಿನ ಹೊಕ್ಕಳಿನಿಂದ ಹುಟ್ಟಿದನು ಎನ್ನುವ ಪ್ರತೀತಿ ಇದೆ.ಈ ಲೋಕದ ಸೃಷ್ಠಿಗೆ ಈತನೇ ಕಾರಣ ಇಲ್ಲದೆ ಹೋಗಿದ್ದರೆ ಈ ಭೂಮಿಯಲ್ಲಿ ಒಂದು ಜೀವರಾಶಿಯೂ ಹುಟ್ಟಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಈ ಮಹಿಮಾನ್ವಿತನನ್ನು ಸೃಷ್ಟಿಕರ್ತನೆಂದು ಕರೆಯುವುದು ಎಂದು ನಂಬಲಾಗುತ್ತದೆ. ಈ ಭಗವಂತ ಧರ್ಮ ಸಂಸ್ಥಾಪನೆಗಾಗಿ ದಶಾವತಾರ ತಾಳಿ ಭೂಲೋಕವನ್ನು ರಕ್ಷಿಸಿದ ಎಂದು ಹೇಳಲಾಗುತ್ತದೆ. ವಿಷ್ಣುವನ್ನು ಲಕ್ಷ್ಮೀ ನಾರಾಯಣ, ಹರಿ, ಜನಾರ್ಧನ, ಭಾರ್ಗವ, ಕೇಶವ, ಅಚ್ಚ್ಯುತ, ಶ್ರೀನಿವಾಸ ಎಂದು ನಾನಾ ಹೆಸರುಗಳಿಂದ ಆರಾಧಿಸಲಾಗುತ್ತದೆ. ತ್ರಿಮೂರ್ತಿಗಳಲ್ಲಿ ಮೂರನೆಯವನು ಶಿವ. ಈಶ್ವರನ ಆರಾಧನೆಯನ್ನು ಯಾವ ರೂಪದಲ್ಲಿ ಮಾಡಿದರು ಈಶ್ವರ ಒಬ್ಬನೇ ಈ ಸೃಷ್ಟಿ ಪ್ರಕಟವಾಗಿರುವ ಶಿವನ ತೇಜಸ್ಸಿನಿಂದ ಸಕಲ ಜೀವರಾಶಿಯಲ್ಲೂ ಶಿವನಿದ್ದಾನೆ. ಸಂಸಾರದ ಕಣಕಣದಲ್ಲೂ ಪರಮೇಶ್ವರ ಸ್ಥಿತಗೊಂಡಿದ್ದಾರೆ. ಋಗ್ವೇದದಲ್ಲಿ ಪರಮತತ್ವ, ಯಜುರ್ವೇದದಲ್ಲಿ ಪರಮತೃಷ್ಟ, ಸಾಮವೇದದಲ್ಲಿ ಪರಮಯೋಗಿ, ಅಥರ್ವಣ ವೇದದಲ್ಲಿ ಅನಾದಿ ಬ್ರಹ್ಮ ಎಂದು ಕರೆಸಿಕೊಳ್ಳುವ ಈ ದೇವರು ಮಹಾದೇವ ಮಾತ್ರ. ಹೀಗಾಗಿ ಹಿರಿಯರು ಹೇಳಿರುವುದು ಶಿವ ಶಿವ ಎಂದರೆ ಭಯವಿಲ್ಲ ಶಿವನಾಮಕೆ ಸಾಟಿ ಬೇರಿಲ್ಲ ಎಂದು.

 

ಈ ಕ್ಷೇತ್ರದಲ್ಲಿ ಸ್ಥಿತಗೊಂಡಿರುವ ತ್ರಿಮೂರ್ತಿಗಳ ಪೈಕಿ ಶಿವನೇ ಪ್ರಬಲ. ಹೀಗಾಗಿ ಈ ದೇವಾಲಯಕ್ಕೆ ಮಹಾಲಿಂಗೇಶ್ವರ ದೇವಾಲಯ ಎಂದು ಕರೆಯಲಾಗುತ್ತದೆ. ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ಶಿವನಿಗೆ ಅಗ್ರ ಪ್ರಾಶಸ್ತ್ಯ ನೀಡುತ್ತಿರುವುದಕ್ಕೆ ಒಂದು ಪೌರಾಣಿಕ ಕಥೆಯಿದೆ.ಅದೇನೆಂದರೆ ಬ್ರಹ್ಮ ವಿಷ್ಣು ಮಹೇಶ್ವರರಲ್ಲಿ ಹೆಚ್ಚಿನವರು ಯಾರು ಎನ್ನುವ ಚರ್ಚೆಯಾದಾಗ ಶಿವನು 3 ಜ್ಯೋತಿಗಳನ್ನು ಸೃಷ್ಟಿಸುತ್ತಾನೆ. ವಿಷ್ಣು ಮತ್ತು ಬ್ರಹ್ಮರಿಗೆ ಅದರ ಆದಿ ಮತ್ತು ಅಂತ್ಯವನ್ನು ಹುಡುಕುವುದಕ್ಕೆ ಹೇಳುತ್ತಾರೆ. ಆದರೆ ಅವರಿಬ್ಬರಿಗೂ ಆ ಜ್ಯೋತಿಯ ಆದಿ ಮತ್ತು ಅಂತ್ಯ ತಿಳಿಯುವುದಕ್ಕೆ ಸಾಧ್ಯವಾಗುವುದಿಲ್ಲ. ಆದಿ ಮತ್ತು ಅಂತ್ಯವನ್ನು ತಿಳಿದುಕೊಳ್ಳಲು ಆಗದ ಬ್ರಹ್ಮ ಮತ್ತು ವಿಷ್ಣು ತ್ರಿಲೋಕಗಳನ್ನು ಸುತ್ತಿ ಮಹೇಶ್ವರನ ಬಳಿ ಮರಳಿ ಬರುತ್ತಾರೆ. ಆಗಲೇ ತಿಳಿಯುವುದು ಅದು ಜಗದೊಡೆಯನಿಂದ ಸೃಷ್ಟಿಸಲ್ಪಟ್ಟ ಜ್ಯೋತಿ ಎನ್ನುವುದು. ಈ ಒಂದು ಕಥೆಯಿಂದಲೇ ತಿಳಿದು ಬರುತ್ತದೆ ತ್ರಿಮೂರ್ತಿಗಳಲ್ಲಿ ಶಿವನೇ ಶ್ರೇಷ್ಠ ಎಂದು. ಈ ಕಾರಣಕ್ಕಾಗಿಯೇ ಮೂಲ ದೇವರಾಗಿ ಶಿವನನ್ನು ಆರಾಧಿಸುವುದು. ಅತಿ ಹೆಚ್ಚು ಪ್ರಾಶಸ್ತ್ಯ ನೀಡಿರುವುದರಿಂದ ಈ ದೇವಾಲಯಕ್ಕೆ ಮಹಾಲಿಂಗೇಶ್ವರ ಎನ್ನುವ ಹೆಸರು ಬಂದಿದೆ.
ಈ ತ್ರಿಮೂರ್ತಿಗಳ ಬಳಿ ಬಂದು ಶ್ರದ್ಧಾ ಭಕ್ತಿಯಿಂದ ಏನನ್ನೇ ಮಾಡಿದರೂ ಅವೆಲ್ಲ ಬಹುಬೇಗ ಈಡೇರುತ್ತವಂತೆ. ಈ ಕ್ಷೇತ್ರಕ್ಕೆ ಬಂದರೆ ಕದಡಿದ ಮನಸ್ಸಿಗೆ ಶಾಂತಿ ನೀಡುತ್ತದೆ. ಅಷ್ಟೇ ಅಲ್ಲದೆ ಇಲ್ಲಿ ದೇವಾನುದೇವತೆಗಳ ಕೃಪೆಯಿಂದಾಗಿ ಸಾವಿನಂಚಿನಲ್ಲಿದ್ದವರು ಬದುಕುಳಿದು ಬಂದಿದ್ದಾರಂತೆ. ಉದ್ಯೋಗ, ವಿದ್ಯೆ ಹೀಗೆ ನಾನಾ ಬೇಡಿಕೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಭಕ್ತರು ಇಲ್ಲಿಗೆ ಸಾಗರೋಪಾದಿಯಲ್ಲಿ ಬರುತ್ತಾರೆ.ಕಷ್ಟಗಳು ಎದುರಾದಾಗ ಜನರು ಭಗವಂತನ ಮೊರೆ ಹೋಗುವುದು ಸಾಮಾನ್ಯ. ಹೀಗಾಗಿ ಭೂಲೋಕದಲ್ಲಿ ಹಲವಾರು ಧಾರ್ಮಿಕ ಕ್ಷೇತ್ರಗಳು ನೆಲೆಗೊಂಡಿವೆ. ಇಂತಹ ಪವಿತ್ರ ಕ್ಷೇತ್ರಗಳ ಪೈಕಿ ಉಡುಪಿ ಜಿಲ್ಲೆಯ, ಕುತ್ಪಾಡಿಯಲ್ಲಿರುವ ಕಾನಂಗಿ ಕ್ಷೇತ್ರದಲ್ಲಿರುವ ಮಹಾಲಿಂಗೇಶ್ವರ ಕ್ಷೇತ್ರವು ಒಂದು. ನಂಬಿ ಬಂದಿರುವ ಭಕ್ತರಿಗೆ ಇಂಬು ನೀಡಿರುವ ಸನ್ನಿಧಿ. ಈ ಕ್ಷೇತ್ರ ಪರಶುರಾಮ ಸೃಷ್ಟಿಯ ಸಪ್ತಕ್ಷೇತ್ರಗಳಲ್ಲಿ ಒಂದಾದ, ಈ ದೇವಾಲಯವು ಧಾರ್ಮಿಕ ವಿಧಿವಿಧಾನಗಳಿಗೆ ಪ್ರಸಿದ್ಧಿಯಾಗಿದ್ದು ಇಲ್ಲಿರುವ ಶಕ್ತಿ ಸ್ವರೂಪಗಳು ಮನೋಕಾಮನೆಯನ್ನು ಈಡೇರಿಸುತ್ತವೆ.

 

 

 

ಇಲ್ಲಿ ತ್ರಿಕಾಲ ಪೂಜೆ ನೆರವೇರುತ್ತದೆ. ಪ್ರಾತಃಕಾಲದಲ್ಲಿ ಸೂರ್ಯೋದಯಕ್ಕೆ ಮುಂಚಿತವಾಗಿ ದೇವಾನು ದೇವತೆಗಳಿಗೆ ಕಾಕಡ ಆರತಿ ನಡೆಯುತ್ತದೆ. ನಂತರ ಭಕ್ತಾದಿಗಳಿಂದ ನಿರಂತರ ಅಭಿಷೇಕ ನಿತ್ಯ 12 ಗಂಟೆಯ ಹೊತ್ತಿಗೆ ಘಂಟಾನಾದಗಳಿಂದ ಮಹಾಮಂಗಳಾರತಿ ನೆರವೇರುತ್ತದೆ. ಮಧ್ಯಾಹ್ನ ದೇವಾಲಯದ ಅರ್ಚಕರಿಂದ ಲಿಂಗಗಳಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಆರತಿ, ನೈವೇದ್ಯ ನಡೆಯುತ್ತದೆ. ವಿಷ್ಣು ಅಲಂಕಾರ ಪ್ರಿಯ, ಶಿವ ಅಭಿಷೇಕ ಪ್ರಿಯ ಈ ಕಾರಣದಿಂದಾಗಿಯೇ ಈ ದೇವಾಲಯದಲ್ಲಿ ನಿತ್ಯವೂ ತ್ರಿಮೂರ್ತಿಗಳಿಗೆ ಅಲಂಕಾರ ಮತ್ತು ಅಭಿಷೇಕಗಳು ಹೆಚ್ಚಾಗಿ ನಡೆಯುತ್ತವೆ. ಮಹಾ ಶಿವರಾತ್ರಿ ಇಲ್ಲಿನ ವಿಶೇಷ ಸಮಾರಂಭ. ಆ ಸಂದರ್ಭದಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ಸಹ್ಯಾದ್ರಿ ಬೆಟ್ಟಗಳ ನಡುವೆ ನಿಂತು ಈ ದೇವಾನುದೇವತೆಗಳು ಆಷಾಡದ ಅಮಾವಾಸ್ಯೆಯ ದಿನ ಮಹಾಲಿಂಗೇಶ್ವರ ವ್ರತವನ್ನು ಹಬ್ಬವನ್ನಾಗಿ ಆಚರಿಸುತ್ತಾರೆ. ಇದಕ್ಕೆ ಪತಿ ಸಂಜೀವಿನಿ ವ್ರತ ಎಂದು ಕರೆಯಲಾಗುತ್ತದೆ. ಪತಿಗೆ ದೀರ್ಘಾಯುಷ್ಯವನ್ನು ಕರುಣಿಸುವಂತೆ ತಮ್ಮನ್ನು ದೀರ್ಘ ಸುಮಂಗಲಿಯಾಗಿ ಅನುಸರಿಸುವಂತೆ ಕೋರಿ ಪತ್ನಿಯರು ಇಲ್ಲಿ ಬೇಡಿಕೊಳ್ಳುತ್ತಾರೆ.

ಇಲ್ಲಿ ವರ್ಷಕ್ಕೊಮ್ಮೆ ಬ್ರಹ್ಮರಥೋತ್ಸವ ನಡೆಯುತ್ತದೆ. ಆ ಸಂದರ್ಭದಲ್ಲಿ ಮೂರ್ತಿಗಳನ್ನು ಮೆರವಣಿಗೆ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಅಲಂಕಾರವನ್ನು ನೋಡುವುದೇ ಕಣ್ಣಿಗೆ ಮಹದಾನಂದ. ಈ ದೇವಾಲಯದ ಆವರಣದಲ್ಲಿ ನಾಗರ ಕಲ್ಲುಗಳು ಇವೆ. ನಾಗರ ಪಂಚಮಿಯಂದು ಭಕ್ತರು ಇಲ್ಲಿಗೆ ಬಂದು ನಾಗರ ಕಲ್ಲುಗಳಿಗೆ ಹಾಲನ್ನು ಎರೆದು ವಿಶೇಷ ಪೂಜೆಯನ್ನು ಅರ್ಪಿಸುತ್ತಾರೆ. ಇಲ್ಲಿನ ನಾಗನ ಬಿಂಬಕ್ಕೆ ಹಾಲನ್ನು ಅರ್ಪಿಸಿದರೆ ಸರ್ಪ ದೋಷಗಳು ನಿವಾರಣೆಯಾಗುತ್ತವೆ ಎನ್ನುವ ನಂಬಿಕೆ ಇದೆ. ಉಡುಪಿ ಜಿಲ್ಲೆಯ ಕುತ್ಪಾಡಿ ಎಂಬಲ್ಲಿದೆ ಮಹಾಲಿಂಗೇಶ್ವರ ಕ್ಷೇತ್ರ. ಈ ದಿವ್ಯ ಕ್ಷೇತ್ರ ಉಡುಪಿಯಿಂದ ಐದು ಕಿಲೋಮೀಟರ್ ದೂರದಲ್ಲಿದೆ. ಈ ಕ್ಷೇತ್ರವನ್ನು ತ್ರಿಮೂರ್ತಿಗಳ ಸಂಗಮ ಕ್ಷೇತ್ರ ಎಂದು ಕರೆಯುತ್ತಾರೆ. ಶೀಘ್ರ ಕಲ್ಯಾಣ, ಸಂತಾನ ಪ್ರಾಪ್ತಿ, ಉದ್ಯೋಗ ಈ ರೀತಿಯ ಕೋರಿಕೆಗಳನ್ನು ಹೊತ್ತು ಭಕ್ತರು ಈ ಕ್ಷೇತ್ರಕ್ಕೆ ಬರುತ್ತಾರೆ. ಹೀಗೆ ಬಂದವರಲ್ಲಿ ಅದೆಷ್ಟೋ ಮಂದಿ ಈಗಾಗಲೇ ಒಳಿತ್ತನ್ನು ಕಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top