fbpx
ದೇವರು

ಮಾರ್ಗಶಿರ ಮಾಸದಲ್ಲಿ ಬರುವ ಧನುರ್ಮಾಸದ ವಿಶೇಷತೆ ಏನು,ಈ ಮಾಸದಲ್ಲಿ ಯಾವ ದೇವರ ಪೂಜೆ ಶ್ರೇಷ್ಠ ಹಾಗೂ ನಿಮ್ಮ ಸಕಲ ಇಷ್ಟಾರ್ಥಗಳು ನೆರವೇರಬೇಕು ಅಂದ್ರೆ ಏನ್ ಮಾಡ್ಬೇಕು ಅಂತ ತಿಳ್ಕೊಳ್ಳಿ

ಮಾರ್ಗಶಿರ ಮಾಸದಲ್ಲಿ ಬರುತ್ತದೆ ಧನುರ್ಮಾಸ. ಧನುರ್ಮಾಸದ ವಿಶೇಷತೆ ಏನು ? ಧನುರ್ಮಾಸದಲ್ಲಿ ಯಾವ ದೇವರ ಪೂಜೆ ಶ್ರೇಷ್ಠ ?
ಇದೇ ಮಾರ್ಗಶಿರ ಮಾಸದಲ್ಲಿ ಧನುರ್ಮಾಸ ಬರುತ್ತದೆ.ಇದೇ ಭಾನುವಾರದಿಂದ ಆರಂಭವಾಗಿರುವ ಧನುರ್ಮಾಸ ಅನೇಕ ವಿಶೇಷತೆಗಳನ್ನು ಹೊಂದಿದೆ.ಹಿಂದೂ ಪಂಚಾಂಗದ ಪ್ರಕಾರ ನಕ್ಷತ್ರ ಮಂಡಲದಲ್ಲಿ ಆಗುವ ಪರಿಭ್ರಮಣೆಯನ್ನು ಆಧರಿಸಿ 12 ಮಾಸಗಳನ್ನು ನೀಡಲಾಗಿದೆ. ಅದರಲ್ಲಿ ಧನುರ್ಮಾಸ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿರುವ ಮಾಸ. ದೇವತೆಗಳಿಗೆ ದಕ್ಷಿಣಾಯಣ ರಾತ್ರಿಯ ಕಾಲವಾದರೆ ಉತ್ತರಾಯಣ ಹಗಲಿನ ಸಮಯವಾಗಿದೆ. ಆದರೆ ಧನುರ್ಮಾಸ ಹಗಲು, ರಾತ್ರಿ ಎರಡು ಸೇರಿದ ಸಮಯ ಅಂದರೆ ಬ್ರಾಹ್ಮಿ ಮುಹೂರ್ತ.ವಿಷ್ಣುವನ್ನು ಪೂಜಿಸುವುದಕ್ಕೆ ಪರಮ ಪುಣ್ಯ ಕಾಲವಾದ ಮಾರ್ಗಶಿರ ಮಾಸದಲ್ಲಿ ಸೂರ್ಯ ವೃಶ್ಚಿಕ ರಾಶಿಯನ್ನು ಬಿಟ್ಟು ಧನಸ್ಸು ರಾಶಿಯನ್ನು ಪ್ರವೇಶಿಸಿದ್ದಾನೆ. ಧನಸ್ಸು ರಾಶಿಯಲ್ಲಿ ಮಕರ ಸಂಕ್ರಾಂತಿಯವರೆಗೆ ಸೂರ್ಯ ಇರುತ್ತಾನೆ. ಹೀಗಾಗಿ ಈ ಮಾಸವನ್ನು ಧನುರ್ಮಾಸ ಎಂದು ಕರೆಯಲಾಗುತ್ತದೆ.

ಧನುರ್ಮಾಸ ಮಹಾ ವಿಷ್ಣುವಿಗೆ ಪ್ರಿಯವಾದ ಮಾಸ.
ಈ ಮಾಸದಲ್ಲಿ ಶ್ರೀಮನ್ನಾರಾಯಣನನ್ನು ಆರಾಧಿಸಿದರೆ ವಿಶೇಷ ಫಲ ಪ್ರಾಪ್ತಿಯಾಗುತ್ತದೆ. ಧನುರ್ಮಾಸ ದೇವತಾ ಆರಾಧನೆಗೆಂದೆ ಮೀಸಲಾದ ಪುಣ್ಯ ಮಾಸ. ಭಗವಂತನ ಪೂಜೆ ಮಾಡುವುದೇ ಈ ಮಾಸದ ವಿಶೇಷತೆ.ಈ ಮಾಸದಲ್ಲಿ ಲಕ್ಷ್ಮಿ ನಾರಾಯಣನನ್ನು ಯಾರು ಪೂಜಿಸುತ್ತಾರೋ ಅವರ ಮನೆಯಲ್ಲಿ ಸಂಪತ್ತಿನ ಹೊಳೆ ಹರಿಯುತ್ತದೆ ಎನ್ನುವ ನಂಬಿಕೆ ಇದೆ. ಧನುರ್ಮಾಸದಲ್ಲಿ ಸೂರ್ಯೋದಯಕ್ಕೆ ಮೊದಲು ಎದ್ದು ಮಹಾವಿಷ್ಣುವನ್ನು ಪೂಜಿಸಬೇಕು. ವಿವಿಧ ಸ್ತುತಿಗಳು, ಅಲಂಕಾರ, ಸಹಸ್ರ ನಾಮಗಳಿಂದ ಲಕ್ಷ್ಮಿ ನಾರಾಯಣನನ್ನು ಪೂಜಿಸಿದರೆ ಅನೇಕ ಪುಣ್ಯ ಫಲಗಳನ್ನು ಪಡೆಯಬಹುದು. ದೇವತಾ ಪೂಜಾ ಕೈಂಕರ್ಯಗಳಿಗೆ ಮೀಸಲಾದ ಈ ಸಮಯದಲ್ಲಿ ಜಪ ತಪಗಳಿಗೆ ಹೆಚ್ಚಿನ ಮಹತ್ವವಿದೆ. ಇದು ಶೂನ್ಯ ಮಾಸ ವಾಗಿರುವುದರಿಂದ ಈ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು ಎಂಬ ನಂಬಿಕೆ ಇದೆ.
ಮನಸ್ಸು ಇವರಲ್ಲಿ ಸ್ಥಿರವಾಗಿರಲು ಧನುರ್ಮಾಸ ಅತ್ಯಂತ ಶ್ರೇಷ್ಠ. ಆದ್ದರಿಂದಲೇ ಧನುರ್ಮಾಸ ಧಾರ್ಮಿಕವಾಗಿ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಪಾಂಚರಾತ್ರಾಗಮ, ಆಗ್ನೇಯ ಪುರಾಣ, ಸ್ಮೃತಿ ಮುಕ್ತಾವಳಿಗಳಲ್ಲಿ ಧನುರ್ಮಾಸದ ಮಹತ್ವದ ಬಗ್ಗೆ ಉಲ್ಲೇಖವಿದೆ.

 

 

 

ಧನುರ್ಮಾಸ ಪೂಜಾ ವ್ರತ ಹೇಗೆ ಆರಂಭವಾಯಿತು ಗೊತ್ತಾ ? ಧನುರ್ಮಾಸ ಹೇಗೆ ಆರಂಭವಾಯಿತು ಎನ್ನುವ ಬಗ್ಗೆ ರೋಚಕ ಕತೆ.
ಹಿಂದೆ ಒಮ್ಮೆ ಬ್ರಹ್ಮದೇವ ಲೋಕಸಂಚಾರಕ್ಕಾಗಿ ಪಕ್ಷಿಯಾಗಿ ಅವತಾರ ತಳೆದು ಸಂಚಾರ ಮಾಡುತ್ತಿರುತ್ತಾನೆ. ಆ ಸಮಯದಲ್ಲಿ ಸೂರ್ಯ ಹೆಚ್ಚಿನ ಬೆಳಕು ಮತ್ತು ಶಾಖವನ್ನು ಹೊರ ಸೂಸುತ್ತಾನೆ. ಆಗ ಕೋಪಗೊಂಡ ಬ್ರಹ್ಮ ನಿನ್ನ ತೇಜಸ್ಸು ನಶಿಸಲಿ ಎಂದು ಶಾಪ ಕೊಡುತ್ತಾನೆ. ತಕ್ಷಣ ಸೂರ್ಯ ಕಾಂತಿಹೀನನಾಗಿ ತನ್ನ ಪ್ರಕಾಶವನ್ನು ಕಳೆದುಕೊಳ್ಳುತ್ತಾನೆ. ಇದರಿಂದ ಭೂ ಲೋಕದಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ. ಭೂಲೋಕದಲ್ಲಿ ಸೂರ್ಯನ ಬೆಳಕಿಲ್ಲದೆ ಜಪ, ತಪ , ಹೋಮ-ಹವನಗಳು ನಿಂತು ಹೋಗುತ್ತವೆ. ಭೂಲೋಕದ ವಾಸಿಗಳು ಮತ್ತು ಋಷಿಗಳ ನಿತ್ಯ ಕಾರ್ಯಗಳಿಗೆ ತೊಂದರೆಯಾಗುತ್ತದೆ. ಸೂರ್ಯನ ಬೆಳಕಿಲ್ಲದೆ ನಾನಾ ಕಾಯಿಲೆಗಳಿಗೆ ಭೂವಾಸಿಗಳು ಈಡಾಗುತ್ತಾರೆ. ಆಗ ಋಷಿ ಮುನಿಗಳು ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾರೆ.ಋಷಿಮುನಿಗಳ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷವಾಗುವ ಬ್ರಹ್ಮ ಸೂರ್ಯನಿಗೆ ಕೊಟ್ಟ ಶಾಪ ವಿಮೋಚನೆಗೆ ಪರಿಹಾರವನ್ನು ಸೂಚಿಸುತ್ತಾನೆ.ಧನುರ್ಮಾಸದಲ್ಲಿ ಮೊದಲ ಜಾವದಲ್ಲಿ ಶ್ರೀಮನ್ನಾರಾಯಣನನ್ನು ಸೂರ್ಯದೇವ ಪೂಜೆ ಮಾಡಿದರೆ ಅವನಿಗೆ ಉಂಟಾದ ಶಾಪ ವಿಮೋಚನೆಯಾಗುತ್ತದೆ ಎನ್ನುವ ವರವನ್ನು ಬ್ರಹ್ಮದೇವ ನೀಡುತ್ತಾನೆ. ಬ್ರಹ್ಮನ ಮಾತಿನಂತೆ ಸೂರ್ಯ 16 ವರ್ಷಗಳ ಕಾಲ ವಿಷ್ಣುವನ್ನು ಪೂಜೆ ಮಾಡಿದ ನಂತರ ತನ್ನ ತೇಜಸ್ಸು ಮತ್ತು ಶಕ್ತಿಯನ್ನು ಮರಳಿ ಪಡೆದುಕೊಂಡ. ಸಾಕ್ಷಾತ್ ಸೂರ್ಯ ದೇವನಿಂದ ಆರಂಭವಾದ ಈ ಪೂಜೆ ನಂತರ ಭೂಲೋಕದಲ್ಲೆಲ್ಲಾ ಪ್ರಚಾರವಾಯಿತು ಎನ್ನಲಾಗುತ್ತದೆ.

ಇಂದ್ರನ ಪತ್ನಿ ಪತಿಯ ಕಲ್ಯಾಣಕ್ಕಾಗಿ ಈ ಮಾಸದಲ್ಲಿ ಹರಿಯನ್ನು ಆರಾಧಿಸಿದ್ದಳು.
ಪುರಾಣಗಳಲ್ಲಿ ದೇವತೆಗಳ ರಾಜ ಇಂದ್ರನು ಅಸುರನಿಂದ ಪರಾಜಿತವಾಗಿ ರಾಜ್ಯ ಭ್ರಷ್ಟನಾಗುತ್ತಾನೆ. ಆಗ ತನ್ನ ಪತಿ ದೇವನ ಕಲ್ಯಾಣಕ್ಕಾಗಿ ಇಂದ್ರನ ಪತ್ನಿ ಶಚಿದೇವಿ ಶ್ರೀಮನ್ನಾರಾಯಣನನ್ನು ಆರಾಧಿಸುತ್ತಾಳೆ. ಆಗ ವಿಷ್ಣು ಪ್ರಸನ್ನನಾಗಿ ಭಗವಂತನ ಕೃಪೆಯಿಂದ ಇಂದ್ರನ ಕಳಂಕ ದೂರವಾಗಿ ಮತ್ತೆ ಇಂದ್ರ ತನ್ನ ಪದವಿಯನ್ನು ಗಳಿಸುತ್ತಾನೆ ಎನ್ನಲಾಗುತ್ತದೆ.ಶ್ರೀಕೃಷ್ಣ ಪರಮಾತ್ಮನಿಗೆ ಪ್ರಿಯವಾದ ಮಾಸ ಧನುರ್ಮಾಸವನ್ನು ಮಾರ್ಗಶೀರ್ಷ ಮಾಸ ಎಂದು ಕೂಡ ಕರೆಯಲಾಗುತ್ತದೆ.ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಪರಮ ಶ್ರೇಷ್ಠವಾದ ತನಗೆ ಇಷ್ಟವಾದ ಎಲ್ಲಾ ವಿಚಾರಗಳನ್ನು ಅರ್ಜುನನಿಗೆ ತಿಳಿಸುವಾಗ ಮಾರ್ಗಶಿರ ಮಾಸದ ಬಗ್ಗೆಯೂ ಹೇಳಿದ್ದಾನೆ.

ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಹೇಳಿದ ಮಾತುಗಳು ಇವು.
ಗ್ರಾಮಗಳಲ್ಲಿ ಪ್ರಧಾನವಾದ ಬೃಹತ್ ಸವಾಲನ್ನು ಛಂದಸ್ಸುಗಳಲ್ಲಿ ಅತಿ ವಿಶಿಷ್ಟವಾದ ಗಾಯತ್ರೀ ಛಂದಸ್ಸು ಅಂದರೆ ಗಾಯತ್ರಿ ಮಂತ್ರ ನಾನು, ಮಾಸಗಳಲ್ಲಿ ಮಾರ್ಗಶೀರ್ಷ ಮಾಸವು ನಾನು, ಋತುಗಳಲ್ಲಿ ಚಿಗುರೊಡೆಯುವ, ಹೂ ಬಿಡುವ, ವಸಂತ ಋತು ನಾನೇ ಆಗಿದ್ದೇನೆ. ಸಾಕ್ಷಾತ್ ಪಾರ್ವತಿ ದೇವಿ ಕೂಡ ಧನುರ್ಮಾಸವನ್ನು ಆರಾಧಿಸಿದ್ದಾಳೆ ಆದ್ದರಿಂದಲೇ ಈ ಮಾಸದ ಫಲವಾಗಿ ಪಾರ್ವತಿ ಶಿವನನ್ನು ಪಡೆದಳು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.
ಶ್ರೀನಿವಾಸ ಭೂದೇವಿಯನ್ನು ವರಿಸಿದ ಪುಣ್ಯ ಮಾಸವಿದು.

 

 

 

ಮಾರ್ಗಶಿರ ಮಾಸವನ್ನು ಮಾರ್ಗಳಿ ತಿಂಗಳು ಎಂದು ಕರೆಯಲಾಗುತ್ತದೆ. ಮಾರ್ಗಳಿ ಎಂದರೆ ಮಳೆಗಾಲ ಮುಗಿದು ಭೂಮಿ ತನಗಾಗಿ ಸುಂದರವಾದ ವಾತಾವರಣವನ್ನು ಸೃಷ್ಟಿಸುವ ಸೂಚನೆ. ಇದು ಪೈರುಗಳು ಪಕ್ವವಾಗುವ ಕಾಲ. ತಿರುಪತಿಯಲ್ಲಿ ಧನುರ್ಮಾಸದಲ್ಲಿ ಅತ್ಯಂತ ಸಂಭ್ರಮದ ಪೂಜೆ ನಡೆಯುತ್ತದೆ. ಮಹಾಲಕ್ಷ್ಮಿ ವೈಕುಂಠ ತೊರೆದ ನಂತರ ವಿಷ್ಣು ಭೂಲೋಕ ತೊರೆದು ಶ್ರೀನಿವಾಸನಾಗಿ ವೈಕುಂಠ ಬಿಟ್ಟು ಭೂಲೋಕಕ್ಕೆ ಬರುತ್ತಾನೆ. ಈ ಸಮಯದಲ್ಲಿ ಭೂದೇವಿ ಭೂಲೋಕದಲ್ಲಿ ಅಂಡಾಳಿ ಎಂಬ ಸಾಮಾನ್ಯ ಹುಡುಗಿಯಾಗಿರುತ್ತಾಳೆ. ಈಕೆ ಪ್ರತಿದಿನ ತನ್ನ ಪ್ರೀತಿಯ ವೆಂಕಟೇಶ್ವರನಿಗಾಗಿ ಹೂಮಾಲೆಯನ್ನು ತಯಾರು ಮಾಡುತ್ತಿದ್ದಳು. ಮೊದಲು ಆ ಮಾಲೆಯನ್ನು ಅವಳು ಧರಿಸಿಕೊಂಡು ನೋಡಿ ಅದು ಚೆನ್ನಾಗಿ ಕಾಣಿಸುತ್ತದೆ ಎಂದ ಮೇಲೆ ಅದನ್ನು ವೆಂಕಟೇಶನ ಕೊರಳಿಗೆ ಹಾಕುತ್ತಿದ್ದಳು.

ಮಹಾವಿಷ್ಣುವಿನ ಪರಮ ಭಕ್ತಳಾಗಿದ್ದ ಅಂಡಾಳ ವೆಂಕಟೇಶ ನಿಗಾಗಿ ತಮಿಳಿನಲ್ಲಿ ತಿರುಪ್ಪವೈ ಎಂಬ ಪ್ರೀತಿಯ ಗ್ರಂಥವನ್ನು ರಚಿಸಿದ್ದಾಳೆ. ಈ ಗ್ರಂಥ ರಚನೆಯಾಗಿದ್ದು ಈ ಧನುರ್ಮಾಸದಲ್ಲಿ ಎನ್ನಲಾಗುತ್ತದೆ.ಇವತ್ತಿಗೂ ಶ್ರೀ ವೈಷ್ಣವರು ವೆಂಕಟೇಶ್ವರನಿಗೆ ತಿರುಪ್ಪಾವೈ ಕೃತಿಗಳೇ ಶ್ರೇಷ್ಠವಾದದ್ದು ಎಂದು ರಚಿಸುವ ಪ್ರತೀತಿ ಇದೆ. ತಿರುಪತಿ ಸೇರಿದಂತೆ ನೀವು ವೆಂಕಟೇಶ್ವರನ ಯಾವುದೇ ದೇವಸ್ಥಾನಕ್ಕೆ ಹೋದರು ಆಂಡಾಳ್ ರಚಿಸಿರುವ ಪ್ರೀತಿಯ ಪ್ರಬಂಧವನ್ನು ಹೇಳಿ ದೇವರನ್ನು ಎಬ್ಬಿಸುವುದು. ಹಾಗೆಯೇ ಅಂಡಾಳ್ ವೆಂಕಟೇಶ್ವರನಿಗಾಗಿ ರಚಿಸಿರುವ ಲಾಲಿ ಹಾಡನ್ನು ಹಾಡಿ ಸ್ವಾಮಿಯನ್ನು ಮಲಗಿಸುವುದು. ಆಂಡಾಳ್ ಪ್ರತಿದಿನ ದೇವಸ್ಥಾನದ ಮುಂದೆ ಕುಳಿತು ವೆಂಕಟೇಶ್ವರ ನಿಗಾಗಿ ಪ್ರೀತಿಯಿಂದ ಹಾಡುಗಳನ್ನು ಹಾಡಿ ಖುಷಿ ಪಡುತ್ತಿದ್ದಳು. ತನ್ನ ಅಪ್ರತಿಮ ಭಕ್ತಿಗೆ ಮೆಚ್ಚಿದ ಶ್ರೀನಿವಾಸ ಧನುರ್ಮಾಸದಲ್ಲಿ ಪ್ರತ್ಯಕ್ಷನಾದ ಅಂಡಾಳ್ ಮದುವೆಯಾದ ಎನ್ನಲಾಗುತ್ತದೆ. ಆಗ ಮಹಾವಿಷ್ಣು ಭೂದೇವಿಯನ್ನು ಮದುವೆಯಾದ ಪರಮ ಪವಿತ್ರ ಮಾಸ ಎನ್ನಲಾಗುತ್ತದೆ. ಆಜ್ಞೇಯ ಪುರಾಣದಲ್ಲಿ ಉಲ್ಲೇಖವಿರುವ ಪ್ರಕಾರ ಧನುರ್ಮಾಸದಲ್ಲಿ ಒಂದು ದಿನ ಬ್ರಾಹ್ಮೀ ಮುಹೂರ್ತದಲ್ಲಿ ವಿಷ್ಣುವನ್ನು ಪೂಜಿಸಿದರೆ ಸಾಕು ಒಂದು ಸಾವಿರದ ವರ್ಷ ಪೂಜಿಸಿದಷ್ಟು ಫಲ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top