fbpx
ದೇವರು

ತನ್ನ ಭಕ್ತರ ಪಾಪಗಳನ್ನು ತೊಳೆದು,ಸಕಲ ಇಷ್ಟಾರ್ಥ ಪ್ರಾಪ್ತಿಸುವ ಕೋಟೆ ಸುಬ್ರಹ್ಮಣ್ಯ ಸ್ವಾಮಿ ಮಹಿಮೆ

ಪರುಷರಾಮ ಕ್ಷೇತ್ರದಲ್ಲಿ ನೆಲೆಯಾಗಿರುವ ಕೋಟೆ ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯ.
ಇದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಸುಂದರವಾದ ಪ್ರಕೃತಿ ತಾಣ. ಇಲ್ಲಿಗೆ ಬರುವ ಭಕ್ತರು ಒಂದೆಡೆ ಪ್ರಕೃತಿ ಸೌಂದರ್ಯದಲ್ಲಿ ಮೈಮರೆತರೆ ಇನ್ನೊಂದೆಡೆ ಇಲ್ಲಿ ನೆಲೆ ನಿಂತಿರುವ ಸುಬ್ರಹ್ಮಣ್ಯನ ದರ್ಶನ ಪಡೆದು ಪುನೀತರಾಗುತ್ತಾರೆ. ನಿಜಕ್ಕೂ ಈ ಸ್ವಾಮಿ ಭಕ್ತರನ್ನು ಕಾಯುವುದಕ್ಕೆ ಹಾಗೆ ತನ್ನ ಆರಾಧಕರ ಪಾಪಗಳನ್ನು ತೊಳೆಯುವದಕ್ಕೆ ಎಂದೇ ಈ ಸ್ಥಳದಲ್ಲಿ ಅವತಾರ ಎತ್ತಿರುವುದು. ಶ್ರೀ ಸುಬ್ರಹ್ಮಣ್ಯ ಸ್ವಾಮಿ ಸರ್ಪ ದೋಷ ನಿವಾರಕ. ಈ ದೇವಾಲಯವನ್ನು ಕೋಟೆ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ಎಂದು ಕರೆಯಲಾಗುತ್ತದೆ. ಈ ಪುಣ್ಯ ಸಾನಿಧ್ಯಕ್ಕೆ ಈ ಹೆಸರು ಬಂದಿರುವುದಕ್ಕೆ ಒಂದು ಕಾರಣ ಇದೆ. ಅದೇನೆಂದರೆ ಹಿಂದೆ ಈ ದೇವಾಲಯ ಕೋಟೆ ಎನ್ನುವ ಮನೆತನದಿಂದ ನಿರ್ಮಿಸಲ್ಪಟ್ಟಿತು. ನಂತರದ ದಿನಗಳಲ್ಲಿ ಈ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಾ ಹೋಗಿತ್ತು. ಆ ಸಂದರ್ಭದಲ್ಲಿ ಕೋಟೆ ವಾರಣಾಸಿ ಮತ್ತು ಕೇದಲ ಎನ್ನುವ ಮನೆತನದವರು ಈ ದೇವಾಲಯದ ಜೀರ್ಣೋದ್ಧಾರ ಮಾಡುತ್ತಾ ಇಲ್ಲಿನ ಸಂಪೂರ್ಣ ನಿರ್ವಹಣೆಯನ್ನು ಕೈಗೊಳ್ಳುತ್ತಾ ಬಂದರು.ಕೋಟೆ ಮನೆತನದವರಿಂದ ಈ ಸಾನಿಧ್ಯ ನಿರ್ಮಿಸಲ್ಪಟ್ಟ ಕಾರಣ ಕಾಲಕ್ರಮೇಣ ಈ ಪ್ರದೇಶಕ್ಕೆ ಕೋಟೆ ಎಂದು ನಾಮಕರಣ ಮಾಡಲಾಯಿತು. ಅಂದಿನಿಂದ ಇಂದಿನವರೆಗೂ ಈ ಮನೆತನದವರ ದೇವಾಲಯದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ದೇವಾಲಯದ ಹಾಗು ಹೋಗುಗಳನ್ನು ನೋಡಿಕೊಂಡು ಬಂದಿದ್ದಾರೆ. ಈ ಮೂರು ಮನೆತನದವರ ಸಮ್ಮತಿ ಇಲ್ಲದೆ ಇಲ್ಲಿ ಯಾವ ಕಾರ್ಯಗಳು ನಡೆಯುವುದಿಲ್ಲ.

 

 

 

ಈ ದೇವಾಲಯಕ್ಕೆ ದೂರದ ಊರುಗಳಿಂದ ಬಂದು ಭಗವಂತನ ದರ್ಶನ ಪಡೆದು ಪಾವನರಾಗುತ್ತಾರೆ.ಈ ಸ್ವಾಮಿಯ ಮಹಿಮೆಯನ್ನು ಅರಿತ ಭಕ್ತರು ಹೆಚ್ಚಾಗಿ ಈ ಕ್ಷೇತ್ರಕ್ಕೆ ಬರುತ್ತಾರೆ. ಒಂದೊಮ್ಮೆ ಇದೇ ಊರಿನ ವ್ಯಕ್ತಿಯೊಬ್ಬರು ಸುಬ್ರಹ್ಮಣ್ಯ ಸ್ವಾಮಿಯ ಭಕ್ತರಾಗಿದ್ದರು. ಅವರು ಪ್ರತಿವರ್ಷ ಷಷ್ಠಿಯಂದು ಭಗವಂತನ ದರ್ಶನಕ್ಕೆ ತಪ್ಪದೆ ಹೋಗಿ ಬರುತ್ತಿದ್ದರು. ಹೀಗಿರುವಾಗ ಅವರಿಗೆ ಒಂದು ವರ್ಷ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಇದರಿಂದ ಮನಸ್ಸಿಗೆ ಬೇಸರವಾಗಿ ಅವರು ನಿರಾಹಾರಿಗಳಾಗಿ ಧ್ಯಾನದಲ್ಲಿ ತೊಡಗಿದ್ದರು. ಆ ವ್ಯಕ್ತಿಯ ನಿಷ್ಕಲ್ಮಶವಾದ ಭಕ್ತಿಗೆ ಪ್ರಸನ್ನನಾದ ಕಾರ್ತಿಕೇಯ ತನ್ನ ಭಕ್ತನಿಗೆ ದರ್ಶನ ನೀಡುವ ಉದ್ದೇಶದಿಂದ ಹಾಗೆ ಇಲ್ಲಿ ಉದ್ಭವಿಸಿದ ಎನ್ನಲಾಗುತ್ತದೆ. ಹೀಗೆ ತನ್ನ ಭಕ್ತನಿಗೆ ದರ್ಶನ ಕೊಟ್ಟ ಭಗವಂತನಿಗೆ ಗ್ರಾಮಸ್ಥರೆಲ್ಲಾ ಸೇರಿ ಪುಟ್ಟದಾದ ದೇವಾಲಯವನ್ನು ನಿರ್ಮಾಣ ಮಾಡುತ್ತಾರೆ.ಅಂದಿನಿಂದ ಇಂದಿನವರೆಗೂ ಇಲ್ಲಿ ವಿರಾಜಮಾನರಾಗಿರುವ ಸ್ವಾಮಿಗೆ ವಿಧಿವತ್ತಾದ ಪೂಜಾ ಕೈಂಕರ್ಯಗಳು ನಡೆಯುತ್ತಲೇ ಬಂದಿವೆ.ಈ ಸ್ವಾಮಿ ಇಲ್ಲಿ ನೆಲೆಸಿದ ನಂತರ ಇಲ್ಲಿಗೆ ಭಕ್ತರು ಬರತೊಡಗಿದರು. ಕಾಲಕ್ರಮೇಣ ಈ ದೇವಾಲಯದಲ್ಲಿ ಭಕ್ತರ ಹಲವಾರು ತೊಂದರೆಗಳಿಗೆ ಪರಿಹಾರ ಸಿಗಲು ಆರಂಭಿಸಿತು. ಅದೇನೆಂದರೆ ಚರ್ಮವ್ಯಾಧಿ, ಸರ್ಪ ದೋಷ, ಸಂತಾನ ಭಾಗ್ಯ ಹಾಗೂ ಕುಟುಂಬದಲ್ಲಿ ಅಣ್ಣ ತಮ್ಮಂದಿರ ಕಲಹ ಈ ರೀತಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ದಿವ್ಯಕ್ಷೇತ್ರ ಇದಾಯಿತು. ದಿನದಿಂದ ದಿನಕ್ಕೆ ಈ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ದ್ವಿಗುಣವಾಗುತ್ತಿದೆ.ಇಂದು ಇಲ್ಲಿಗೆ ಈಗಲೂ ಸಾವಿರಾರು ಭಕ್ತರು ಬಂದು ತಮ್ಮ ಪಾಪಗಳನ್ನು ಪರಿಹರಿಸಿ ಕೊಳ್ಳುತ್ತಾರೆ.

ಈ ದೇವಾಲಯದ ಸಮೀಪದಲ್ಲೇ ಕಲ್ಯಾಣ ಮಂಟಪವೂ ನಿರ್ಮಾಣವಾಗಿದ್ದು ಅದು ಬಡವರ ಪಾಲಿನ ಕರುಣಾಲಯ ವಾಗಿದೆ.ಹೀಗಾಗಿ ಇಲ್ಲಿನ ಗ್ರಾಮಸ್ಥರೆಲ್ಲಾ ಇಲ್ಲೆ ಹೆಚ್ಚಾಗಿ ವಿವಾಹವಾಗಿರುವುದನ್ನು ಕಾಣಬಹುದು. ಸಕಲಕ್ಕೂ ಈ ಸ್ವಾಮಿಯನ್ನು ಆರಾಧಿಸುವುದು ಇಲ್ಲಿನ ಜನರ ಅಚಲ ನಂಬಿಕೆಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಇಲ್ಲಿಯೂ ಈ ಶಕ್ತಿವಂತ ವಿರಾಜಮಾನರಾಗಿರುವ ಈ ಪ್ರದೇಶ ಎಲ್ಲಾ ಸಮೃದ್ಧಿಯಿಂದ ಕೂಡಿದೆ. ಈ ಪ್ರದೇಶ ಪರಶುರಾಮನ ಸೃಷ್ಟಿಯ ನಾಡು ಎಂದು ಕರೆಯಲಾಗಿದ್ದು, ಇಲ್ಲಿ ಅದೆಷ್ಟೋ ಮಹಾ ತಪಸ್ವಿಗಳು ತಪಸ್ಸನ್ನು ಮಾಡಿ ಪುಣ್ಯವನ್ನು ಸಂಪಾದಿಸಿ ಕೊಂಡಿದ್ದಾರೆ. ಒಟ್ಟಿನಲ್ಲಿ ಇದೊಂದು ಪುಣ್ಯದಾಯಕ ತಪೋಭೂಮಿ ಅದರೊಂದಿಗೆ ಇಲ್ಲಿ ಹಲವಾರು ದೇವಾನು ದೇವತೆಗಳು ನೆಲೆಸಿರುವ ಕಾರಣ ಈ ತಾಣ ಭೂಲೋಕದ ಸ್ವರ್ಗವಾಗಿದೆ.

 

ಈ ದೇವಾಲಯ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಳಂಜ ಎನ್ನುವ ಪ್ರದೇಶದಲ್ಲಿದೆ. ಈ ಪ್ರದೇಶದ ಸೊಬಗು ಹಾಗೂ ವೈಭವವನ್ನು ವರ್ಣಿಸುವುದಕ್ಕೆ ಪದಗಳು ಸಾಲುವುದಿಲ್ಲ. ಈ ಪ್ರದೇಶವನ್ನು ನೋಡುತ್ತಿದ್ದರೆ ಪ್ರಕೃತಿ ಮಾತೆಯೇ ಇಲ್ಲೂ ಬಂದು ನೆಲೆಸಿದಂತೆ ಇದೆ. ಈ ಕ್ಷೇತ್ರದ ದರ್ಶನಕ್ಕೆ ಸಾಗಿದರೆ ಮೊದಲಿಗೆ ನಮಗೆ ಎದುರಾಗುವುದು ದೇವಾಲಯದ ದ್ವಾರ ಬಾಗಿಲು. ಎರಡು ಕಡೆಗಳಲ್ಲೂ ನವಿಲುಗಳು ನಮ್ಮನ್ನು ಸ್ವಾಗತಿಸುತ್ತ ನಿಂತಿರುವ ದೃಶ್ಯ ನಮಗೆ ಕಾಣಸಿಗುತ್ತದೆ. ಹಾಗೆಯೇ ಆ ದ್ವಾರವನ್ನು ಕ್ರಮಿಸಿ ಮುಂದಕ್ಕೆ ಸಾಗಿದರೆ, ಮಣ್ಣಿನ ಮಾರ್ಗ ಎರಡು ಕಡೆಗಳಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಕಾನನ. ಈ ಸ್ಥಳದ ಸೌಂದರ್ಯವನ್ನು ಬರಿ ಮಾತಿನಲ್ಲಿ ವರ್ಣಿಸಲು ಅಸಾಧ್ಯ. ಇಲ್ಲಿನ ಪ್ರಕೃತಿಯ ಸೊಬಗನ್ನು ತಿಳಿಯ ಬೇಕಾದರೆ ಒಮ್ಮೆ ಈ ಸ್ಥಳಕ್ಕೆ ತೆರಳಿದರೆ ಮಾತ್ರ ಅದರ ನಿಜ ಅನುಭವ ಉಂಟಾಗುವುದು.

 

 

 

ಈ ಪುಣ್ಯ ದೇವಾಲಯದೊಳಗೆ ಪ್ರವೇಶ ಮಾಡಿದರೆ ನಮಗೆ ಎದುರಾಗುವುದು 5 ಎಡೆಯ ಸರ್ಪಗಳಿಂದ ಕೂಡಿರುವ ಭಗವಂತನ ವಿಗ್ರಹ ಕಪ್ಪು ಶಿಲೆಯಿಂದ ನಿರ್ಮಿತವಾದ ಈ ವಿಗ್ರಹವನ್ನು ಕಂಡ ಪ್ರತಿಯೊಬ್ಬ ಭಕ್ತರೂ ಕೂಡ ರೋಮಾಂಚನಗೊಳ್ಳುತ್ತಾರೆ. ಒಂದು ಬಾರಿ ಈ ಸ್ವಾಮಿಯ ದರ್ಶನ ಭಾಗ್ಯ ಸಿಕ್ಕಿದರೆ ಆ ಭಗವಂತನ ದಿವ್ಯ ರೂಪ ನಮ್ಮ ಕಣ್ಣಿಗೆ ಕಟ್ಟಿಕೊಳ್ಳುತ್ತದೆ. ನಿಜಕ್ಕೂ ಈ ಸ್ವಾಮಿಯ ದರ್ಶನ ಪಡೆಯುವುದೇ ನಮ್ಮ ಪುಣ್ಯ. ಇನ್ನು ಇಲ್ಲಿ ಕಾರ್ತಿಕೇಯನ ಗರ್ಭಗುಡಿಯ ಪಕ್ಕದಲ್ಲಿ ಆತನ ಸಹೋದರ ವಿಘ್ನ ವಿನಾಯಕನಿಗೆ ಪೂಜೆ ಸಲ್ಲುತ್ತದೆ. ಇಲ್ಲಿನ ಗಣಪನ ಮೂರ್ತಿ ವಿಶೇಷತೆಯಿಂದ ಕೂಡಿದೆ. ಅದೇನೆಂದರೆ ಬೇರೆ ಎಲ್ಲಾ ದೇವಾಲಯಗಳಲ್ಲಿ ಗಣಪ ನೊಂದಿಗೆ ಆತನ ವಾಹನ ಮೂಷಿಕನನ್ನು ದರ್ಶನ ಮಾಡುತ್ತೇವೆ, ಆದರೆ ಈ ಕ್ಷೇತ್ರದಲ್ಲಿ ಗಣೇಶನ ವಾಹನ ವೃಷಭವಾಗಿದ್ದು ಬೇರೆಲ್ಲ ದೇವಾಲಯದಲ್ಲಿರುವ ಗಣೇಶನಿಗಿಂತ ಇದು ವಿಶಿಷ್ಟವಾಗಿದೆ.
ಈ ಮಹಾನ್ ಕ್ಷೇತ್ರದಲ್ಲಿ ಸ್ವಾಮಿಗೆ ದಿನನಿತ್ಯ ವಿಶೇಷವಾದ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಹಾಗೆಯೇ ಭಕ್ತರು ಒಂದು ನಿರ್ದಿಷ್ಟ ದಿನದಲ್ಲಿ ದೇವಾಲಯಕ್ಕೆ ಬಂದು ಸ್ವಾಮಿಗೆ ಪೂಜೆ ಹಾಗೂ ವಿಶೇಷ ಸೇವೆಗಳನ್ನು ಅರ್ಪಿಸಿ ಹರಕೆಯನ್ನು ಕಟ್ಟಿಕೊಳ್ಳುವ ಸಂಪ್ರದಾಯವೂ ಇದೆ.ಈ ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯ ಕೆಲವು ವಿಶೇಷ ದಿನಗಳಲ್ಲಿ ಭಕ್ತಾದಿಗಳಿಂದ ತುಂಬಿ ತುಳುಕುತ್ತದೆ. ಆ ದಿನಗಳೆ ನೂಲ ಹುಣ್ಣಿಮೆ, ಗಣೇಶ ಚತುರ್ಥಿ, ನವರಾತ್ರಿ, ನಾಗರ ಪಂಚಮಿ, ಷಷ್ಠಿ ಉತ್ಸವ,ಈ ವಿಶೇಷ ದಿನಗಳಲ್ಲಿ ದೇವಾಲಯಕ್ಕೆ ಬರುವ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯುತ್ತದೆ. ಇಲ್ಲಿ ಕಾರ್ತಿಕೇಯನೊಂದಿಗೆ ದುಷ್ಟರನ್ನು ಸಂಹರಿಸಿದ ದುರ್ಗಾದೇವಿ ಹಾಗೂ ತುಳುನಾಡಿನಲ್ಲಿ ಆರಾಧಿಸಲ್ಪಡುವ ಶ್ರೀ ನೇರಳತಾಯಿ, ರಕ್ತೇಶ್ವರಿ ಎನ್ನುವ ದೈವಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಇದನ್ನು ಭೂತಾರಾಧನೆ ಎಂದು ಕರೆಯಲಾಗುತ್ತದೆ.ಇದು ಇಲ್ಲಿನ ವಿಶಿಷ್ಟ ಆಚರಣೆಯಾಗಿದ್ದು, ಈ ದೈವಗಳ ಪೂಜೆಯನ್ನು ಹಿಂದಿನಿಂದಲೂ ಸಕಲ ವಿಧಿವಿಧಾನಗಳಿಂದ ನಡೆಸಿಕೊಂಡು ಬರಲಾಗಿದೆ.

 

ಇದು ಪುಣ್ಯ ಪ್ರದೇಶ. ಈ ಸ್ಥಳಕ್ಕೆ ಯಾತ್ರೆ ಕೈಗೊಂಡು ಇಲ್ಲಿನ ದೇವಾಲಯಗಳ ದರ್ಶನ ಪಡೆದರೆ ಜೀವನದಲ್ಲಿ ಅದಕ್ಕಿಂತ ಮಹತ್ತರವಾದ ಭಾಗ್ಯ ಇನ್ನೊಂದಿಲ್ಲ.ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಳಂಜ ಎಂಬಲ್ಲಿದೆ ಈ ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯ. ಈ ದೇವಾಲಯವನ್ನು ಕೋಟೆ ಮನೆತನದವರು ನಿರ್ಮಿಸಿದ ಕಾರಣ ಇಲ್ಲಿ ನೆಲೆಸಿರುವ ಭಗವಂತ ಕೋಟಿ ಸುಬ್ರಹ್ಮಣ್ಯ ಅಂತ ಪ್ರಸಿದ್ಧಿ ಪಡೆದಿದ್ದಾನೆ ಬೆಂಗಳೂರಿನಿಂದ ಈ ಪ್ರದೇಶಕ್ಕೆ 304 ಕಿಲೋಮೀಟರ್ ಅಂತರವಿದೆ ಮಂಗಳೂರಿನಿಂದ ಸುಳ್ಯಕ್ಕೆ 86 ಕಿಲೋಮೀಟರ್ ಅಂತರವಿದೆ. ಕೋಟೆ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದರು ಸಂತಾನ ಪ್ರಾಪ್ತಿ, ಶೀಘ್ರ ಕಲ್ಯಾಣ ಹಾಗೂ ಕುಟುಂಬದಲ್ಲಿನ ಕಲಹಗಳು ಪರಿಹಾರವಾಗುತ್ತವೆ ಎನ್ನುವ ನಂಬಿಕೆ ಇದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top