fbpx
ರಾಜಕೀಯ

“ನಾನು ರಾಜೀನಾಮೆ ನೀಡಲು ಸಿದ್ಧ” ಸಿಎಂ HDK -ರಾಜ್ಯ ರಾಜಕೀಯದಲ್ಲಿ ಬಿರುಗಾಳಿ

“ಕಾಂಗ್ರೆಸ್ ಶಾಸಕರು ಮಿತಿ ಮೀರಿ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಅವರನ್ನು ಹದ್ದುಬಸ್ತಿನಲ್ಲಿಡಬೇಕು, ಅವರು ಇದೇ ರೀತಿ ತಮ್ಮ ವರ್ತನೆಯನ್ನು ಮುಂದುವರಿಸುವುದಿದ್ದರೆ ನಾನು ರಾಜೀನಾಮೆ ನೀಡಲು ಸಿದ್ಧ. ನನ್ನ ಕಾರ್ಯವೈಖರಿ ಇಷ್ಟವಾಗದಿದ್ದರೆ ಹೇಳಿಬಿಡಿ ನಾನು ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಿದ್ದ” ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಎಲ್ಲ ಬೆಳವಣಿಗೆಗಳನ್ನು ಕಾಂಗ್ರೆಸ್​ ನಾಯಕರು ಗಮನಿಸುತ್ತಿದ್ದಾರೆ. ಈ ವಿಚಾರದಲ್ಲಿ ಪ್ರತಿಕ್ರಿಯಿಸಬೇಕಿರುವುದು ನಾನಲ್ಲ, ಅವರು. ಕಾಂಗ್ರೆಸ್​ ನಾಯಕರು ಮೈತ್ರಿಯ ಲಕ್ಷ್ಮಣ ರೇಖೆ ಮೀರುತ್ತಿದ್ದಾರೆ. ನನ್ನ ತಾಳ್ಮೆಗೂ ಒಂದು ಮಿತಿ ಇದೆ. ಒಂದು ವೇಳೆ ಇದು ಹೀಗೆಯೇ ಮುಂದುವರೆದರೆ, ನಾನು ರಾಜೀನಾಮೆ ನೀಡಲು ಎಂದು ಸಿಎಂ ಕುಮಾರಸ್ವಾಮಿ ಅವರು ಕಾಂಗ್ರೆಸ್​ಗೆ ಖಡಕ್​ ವಾರ್ನಿಂಗ್​ ನೀಡಿದರು.

ನಿನ್ನೆ ಬೆಂಗಳೂರಿನಲ್ಲಿ ಕುರುಬರ ಸಂಘದ ವತಿಯಿಂದ ನಿರ್ಮಿಸಿರುವ ಕನಕ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರಾದ ಪುಟ್ಟರಂಗಶೆಟ್ಟಿ, ಎಂ.ಟಿ.ಬಿ. ನಾಗರಾಜು ಹಾಗೂ ಶಾಸಕ ಎಸ್‌.ಟಿ. ಸೋಮಶೇಖರ್‌ ಭಾಗಿಯಾಗಿದ್ದರು. ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ತಮ್ಮ ರಾಜಕೀಯ ಗುರುಗಳನ್ನು ಹೊಗಳುವ ಮೂಲಕ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂಬ ಇಂಗಿತವನ್ನು ಇವರೆಲ್ಲ ವ್ಯಕ್ತಪಡಿಸಿದರು.

ಈ ಹಿಂದೆ ಮೈತ್ರಿ ಸರ್ಕಾರ ರಚನೆಯಾದ ಆರಂಭದಲ್ಲಿ ಸಿದ್ದರಾಮಯ್ಯ ಅವರು ಪ್ರಕೃತಿ ಚಿಕಿತ್ಸಾಲಯಕ್ಕೆ ಹೋಗಿದ್ದರು. ಅಲ್ಲಿ ಆಪ್ತರೊಡನೆ ಮಾತನಾಡುವಾಗ ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಹೇಳಿದ್ದರು. ಅದರ ನಂತರ ಬಹಿರಂಗವಾಗಿ ತಾವು ಮತ್ತೆ ಮುಖ್ಯಮಂತ್ರಿ ಆಗುವುದಾಗಿ ಹೇಳಿದ್ದರು. ಇದೀಗ ಅವರ ಬೆಂಬಲಿಗ ಶಾಸಕರು ಪದೇ ಪದೇ ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ ಎಂಬರ್ಥದಲ್ಲಿ ಮಾತನಾಡುತ್ತಿರುವುದು ಸಿಎಂ ಕುಮಾರಸ್ವಾಮಿಯವರಲ್ಲಿ ಬೇಸರ ತಂದಿದೆ ಎಂದು ಹೇಳಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top