fbpx
ದೇವರು

ನಂದಿ ಬೆಟ್ಟದ ಭೋಗ ನಂದೀಶ್ವರನ ಸ್ಥಾಪನೆ ಮಾಡಿದ್ದು ಯಾರು ಗೊತ್ತೇ ?ಇದರ ಪುರಾಣ ಕಥೆ ಏನು ?ನಂದಿಬೆಟ್ಟ ಎನ್ನುವ ಬಂದಿದ್ದು ಹೆಸರು ಹೇಗೆ ಗೊತ್ತಾ?

ಇದು ರಮ್ಯ ರಮಣೀಯ ತಾಣ, ಕಣ್ಣು ಹಾಯಿಸಿದಷ್ಟು ಹಸಿರು ಬೆಟ್ಟಗಳು, ಬಗೆಬಗೆಯ ಔಷಧಿ ಸಸ್ಯಗಳು, ಚಿಲಿಪಿಲಿ ಗುಟ್ಟುವ ಪಕ್ಷಿಗಳು, ಇದು ಕನ್ನಡ ನಾಡಿನ ಹೆಸರಾಂತ ಗಿರಿಧಾಮಗಳಲ್ಲಿ ಒಂದು. ಪ್ರಕೃತಿ ಮಾತೆಯ ಮಡಿಲಲ್ಲಿ ಕಂಗೊಳಿಸುತ್ತಿರುವ ಈ ದಿವ್ಯ ಕ್ಷೇತ್ರವೇ ನಂದಿ ಬೆಟ್ಟ. ಬೆಂಗಳೂರಿನಿಂದ ಕೇವಲ 55 ಕಿಲೋಮೀಟರ್ ದೂರದಲ್ಲಿದೆ ಈ ನಂದಿ ಬೆಟ್ಟ. ಇದರ ಕೆಳಗೆ ಭವ್ಯವಾಗಿ ಹರಡಿಕೊಂಡಿದೆ ಸುಂದರವಾದ ಭೋಗ ನಂದೀಶ್ವರ ದೇವಾಲಯ. ಕಲ್ಲರಳಿ ಹೂವಾಗಿ ಶಿಲೆಯಲ್ಲಿ ಆಕರ್ಷಕ ಕೆತ್ತನೆ ಮಾಡಿರುವ ಹಾಗೆ ಕಾಣುತ್ತದೆ. ಕಲಾ ಕುಸುರಿಗಳನ್ನು ಒಳಗೊಂಡಿರುವ ಈ ದೇವಾಲಯ ನೃತ್ಯ ಮಾಡುವಾಗ ವೈಯ್ಯಾರ ತೋರುವ ಶಿಲಾಬಾಲಿಕೆಯರು, ಕಲಾಸಿರಿಯನ್ನು ಸಾರುತ್ತಿರುವ ಕಲ್ಲುಗಳು, ವಿಶಾಲವಾದ ಹಜಾರ. ಹೀಗೆ ಪ್ರಕೃತಿಯ ಮಡಿಲಲ್ಲಿ ಅರಳಿದಂತೆ ಭಾಸವಾಗುತ್ತದೆ ಭೋಗ ನಂದೀಶ್ವರ ದೇವಸ್ಥಾನ.

ನಂದಿ ಬೆಟ್ಟದ ಮೇಲೆ ಯೋಗ ನಂದೀಶ್ವರನಿದ್ದರೆ, ನಂದಿ ಬೆಟ್ಟದ ಕೆಳಗೆ ಭೋಗ ನಂದೀಶ್ವರ ನೆಲೆಸಿದ್ದಾನೆ ಮತ್ತು ಅರುಣಾಚಲೇಶ್ವರ ಮತ್ತು ಪಾರ್ವತಿ ದೇವಿಯ ದೇವಾಲಯಗಳಿವೆ. ಶಿಲ್ಪಕಲೆಯ ಅದ್ಭುತಗಳಲ್ಲಿ ಒಂದು ಈ ನಂದಿ ಕ್ಷೇತ್ರ. ಪೌರಾಣಿಕವಾಗಿ ವಿಶೇಷ ಮಹತ್ವವನ್ನು ಪಡೆದಿದೆ. ತ್ರೇತಾಯುಗದಲ್ಲಿ ಈ ಕ್ಷೇತ್ರ ದಂಡಕಾರಣ್ಯವಾಗಿತ್ತು ಎಂದು ಹೇಳಲಾಗುತ್ತದೆ. ಶ್ರೀರಾಮ ಕಪಿಗಳ ಸಹಾಯದಿಂದ ಸೇತುವೆಯನ್ನು ನಿರ್ಮಿಸುವ ಸಂದರ್ಭದಲ್ಲಿ, ಇಂದ್ರಾದಿ ದೇವತೆಗಳಿಗೆ ಬ್ರಹ್ಮ ಸಹಾಯ ಮಾಡಲು ಅಪ್ಪಣೆ ಕೊಡುತ್ತಾನೆ. ಆ ಸಂದರ್ಭದಲ್ಲಿ ಸೇತುವೆ ನಿರ್ಮಾಣಕ್ಕೆ ಮೇರು ಪರ್ವತದಿಂದ ಐದು ಶಿಖರಗಳನ್ನು ತರುತ್ತಾರೆ. ಅಷ್ಟರಲ್ಲಿ ಸೇತುವೆಯ ನಿರ್ಮಾಣದ ಕಾರ್ಯ ಸಂಪೂರ್ಣಗೊಂಡಿತ್ತು. ಅದ್ದರಿಂದ ಇದೇ ನಂದಿ ಬೆಟ್ಟದ ದಂಡ ಕಾರಣ್ಯದಲ್ಲಿ ಆ ಬೆಟ್ಟಗಳನ್ನು ಭೂಮಿಗೆ ಇಳಿಸಿದರು ಎನ್ನಲಾಗುತ್ತದೆ.

 

 

 

ಈ ದೇವಾಲಯಕ್ಕೆ ಪೌರಾಣಿಕ ಹಿನ್ನೆಲೆಯ ಜೊತೆಗೆ ಶ್ರೀಮಂತ ಐತಿಹಾಸಿಕ ನೆಲೆ ಇದೆ. ಕ್ರಿಸ್ತಶಕ 806 ರಲ್ಲಿ ರಾಷ್ಟ್ರಕೂಟರು ತಮ್ಮ ತಾಮ್ರದ ಶಾಸನದಲ್ಲಿ ಈ ದೇವಾಲಯದ ಬಗ್ಗೆ ವಿವರಣಾತ್ಮಕವಾಗಿ ಉಲ್ಲೇಖಿಸಿದ್ದಾರೆ. ದ್ರಾವಿಡ ಶೈಲಿಯ ಇಂತಹ ಅದ್ಭುತವಾದ ದೇವಾಲಯ ದಕ್ಷಿಣ ಕರ್ನಾಟಕದಲ್ಲಿ ಇರುವುದು ಗಮನಾರ್ಹ ಸಂಗತಿ. ಈ ದೇವಾಲಯ ಹೊಯ್ಸಳ, ವಿಜಯನಗರ ಸಾಮ್ರಾಜ್ಯದ ಅರಸರ ಕಾಲದಲ್ಲಿ ಜೀರ್ಣೋದ್ಧಾರವಾಗುತ್ತಾ ಬಂದಿದೆ. ನೂರಾರು ವರ್ಷಗಳ ಕಾಲ ರಾಜರ ಆಳ್ವಿಕೆಯ ಕಾಲದಲ್ಲಿ ಹಲವಾರು ರಾಜಮನೆತಗಳು ಈ ದೇವಾಲಯವನ್ನು ಅಭಿವೃದ್ಧಿ ಮಾಡುತ್ತಾ ಬಂದಿವೆ. ವಿಜಯನಗರದ ಅರಸರು ತಮ್ಮ ಕಾಲಾವಧಿಯಲ್ಲಿ ಈ ದೇವಾಲಯಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ದ್ರಾವಿಡ ಶೈಲಿಯ ಹಲವು ದೇವಾಲಯಗಳಲ್ಲಿ ಈ ದೇವಾಲಯಕ್ಕೆ ಪ್ರತ್ಯೇಕವಾದ ಸ್ಥಾನವಿದೆ. ಭೋಗ ನಂದೀಶ್ವರ ದೇವಾಲಯದಲ್ಲಿ ಎರಡು ಪ್ರತ್ಯೇಕ ಗರ್ಭಗುಡಿಗಳಿವೆ. ಉತ್ತರದಲ್ಲಿ ಭೋಗ ನಂದೀಶ್ವರ ದಕ್ಷಿಣದಲ್ಲಿ ಅರುಣಾಚಲೇಶ್ವರ ಗುಡಿಯನ್ನು ಸ್ಥಾಪಿಸಲಾಗಿದೆ. ಈ ಕ್ಷೇತ್ರದ ಪ್ರಾಂಗಣದ ಒಳಗೆ ಭೋಗ ನಂದೀಶ್ವರನ ಜೊತೆಗೆ ಪಾರ್ವತಿಯ ಸಹ ನೆಲೆಗೊಂಡಿದೆ. ಈ ದಿವ್ಯವಾದ ದೇವಾಲಯ ದೊಡ್ಡ ಪ್ರಾಂಗಣವನ್ನು ಹೊಂದಿದ್ದು ಇದರ ಮುಖ್ಯದ್ವಾರ ಅತ್ಯಾಕರ್ಷಕವಾಗಿದೆ.

ಇಲ್ಲಿನ ಪ್ರತಿ ಕೆತ್ತನೆಗಳು ಸಹ ಒಂದೊಂದು ಕಥೆಯನ್ನು ಹೇಳುತ್ತವೆ. ರಾಜಗೋಪುರದ ಕೆತ್ತನೆಗಳು ನೋಡುಗರ ಕಣ್ಮನವನ್ನು ಸೆಳೆಯುತ್ತವೆ. 370 ಅಡಿ ಉದ್ದ 240 ಅಡಿ ಅಗಲವಿರುವ ಈ ಚೋಳರ ಕಾಲದ ದೇವಾಲಯ ಕಲಾತ್ಮಕವಾಗಿ ಶೃಂಗಾರವಾಗಿದೆ. ಕಲ್ಲುಗಳ ಮೇಲೆ ನಾಟ್ಯ ವಿಗ್ರಹಗಳನ್ನು ಸುಂದರವಾಗಿ ಕೆತ್ತಿರುವ ಶಿಲ್ಪಿಯ ಚಾಣಾಕ್ಯತೆಗೆ ಸಾಟಿಯೇ ಇಲ್ಲ. ಅತ್ಯಾಕರ್ಷಕ ನವರಂಗ, ಸುಖನಾಸಿ, ಕೈಸಾಲೆ, ಕಲ್ಯಾಣ ಮಂಟಪಗಳು ಸಹ ಇವೆ. ದೇಗುಲದ ಹೊರಭಾಗದಲ್ಲಿ ಕೆಲವು ಆಕರ್ಷಕ ಕಲಾ ಕೃತಿಗಳು ಇವೆ. ಗುಡಿಯ ಒಳ ಭಾಗದಲ್ಲಿನ ಹತ್ತು ಅಡಿ ಎತ್ತರದ ಛತ್ರಿಯಾಕಾರದ ಕಂಬ ಮನಮೋಹಕವಾಗಿದೆ. ನವರಂಗದಲ್ಲಿರುವ ಜಾಗದಲ್ಲಿ ಹಲವಾರು ದೇವಾನು ದೇವತೆಗಳನ್ನು ಕಾಣಬಹುದು. ಅವೆಲ್ಲಕ್ಕೂ ಇಲ್ಲಿ ತಪ್ಪದೆ ದಿನ ನಿತ್ಯ ಪೂಜೆ ನಡೆಯಬೇಕು. ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಸುಂದರ ಹಾಗೂ ಕಲಾತ್ಮಕ ಕೆತ್ತನೆಯಿಂದ ರಚಿತವಾಗಿರುವ ಕಲ್ಯಾಣಿ. ಇದರ ನೋಟವಂತೂ ಮನ ಮೋಹಕವಾಗಿದೆ. ಸುತ್ತಲೂ ಚಿತ್ತಾರ ಕೆತ್ತನೆಗಳ ಮಧ್ಯೆ ಕಂಗೊಳಿಸುವ ಪುಷ್ಕರಣಿ ಈ ಕ್ಷೇತ್ರದ ಕೇಂದ್ರಬಿಂದು.
ಅಂದ ಚಂದದ ಹೂವಿನ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಭೋಗ ನಂದೀಶ್ವರ ಬಂದ ಭಕ್ತರನ್ನು ಹರಸುವ ಅರುಣಾಚಲೇಶ್ವರ ಸರ್ವಾಲಂಕಾರ ಭೂಷಿತಳಾಗಿ ಕಂಗೊಳಿಸುತ್ತಿರುವ ಶ್ರೀ ಪಾರ್ವತಿ ದೇವಿಯವರನ್ನು ಈ ದೇವಾಲಯದಲ್ಲಿ ಕಾಣಸಿಗುವ ದೇವರುಗಳು. ಭೋಗನಂದೀಶ್ವರ ದೇವಸ್ಥಾನದಲ್ಲಿ ಎಲ್ಲಾ ಪೂಜಾ ಕೈಂಕರ್ಯಗಳು ವೈದಿಕ ಆಗಮನದ ಪ್ರಕಾರವೇ ನಡೆಯುವುದು. ಸೋಮವಾರ ಶಿವನಿಗೆ ಪ್ರಿಯವಾದ್ದರಿಂದ ಈ ದಿನ ಶಿವನ ಆರಾಧನೆ ಪೂಜೆ, ಪುನಸ್ಕಾರಗಳು ಬಹಳ ವಿಶೇಷವಾಗಿರುತ್ತದೆ.

 

ಕಾರ್ತಿಕ ಮಾಸ ಮತ್ತು ದೀಪಾವಳಿಯ ವಿಶೇಷ ಸಂದರ್ಭದಲ್ಲಿ ಪೂಜಾ ಕೈಂಕರ್ಯಗಳು ಬಹಳ ವಿಜೃಂಭಣೆಯಿಂದ ಕೂಡಿರುತ್ತದೆ. ನಮ್ಮ ಬದುಕಿನ 4 ಹಂತಗಳಾದ ಬಾಲ್ಯ, ಯೌವ್ವನ, ಮಧ್ಯ ವಯಸ್ಸು, ಮುಪ್ಪಿಗೆ ಅನುಗುಣವಾಗಿ ಇಲ್ಲಿ ದೇವತಾ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.ಬಾಲ್ಯ ಎಂದರೆ ಕಮಟೇಶ್ವರ, ಯವ್ವನ ಎಂದರೆ ಅರುಣಾಚಲೇಶ್ವರ, ಮಧ್ಯ ವಯಸ್ಸು ಎಂದರೆ ಭೋಗ ನಂದೀಶ್ವರ ಮತ್ತು ಪಾರ್ವತಿ ದೇವಿ ಹಾಗೆ ಮುಪ್ಪಿನ ಸಂಕೇತವಾಗಿ ಬೆಟ್ಟದ ಮೇಲೆ ಯೋಗ ನಂದೀಶ್ವರನನ್ನು ಸ್ಥಾಪಿಸಲಾಗಿದೆ. ಇಲ್ಲಿ ಲಿಂಗದ ರೂಪದಲ್ಲಿರುವ ಭೋಗ ನಂದೇಶ್ವರ ನೆಲೆಸಿರುವುದೇ ವಿಶಿಷ್ಟ ಈ ಸ್ವಾಮಿಯ ಹಿಂದೆ ಶ್ರೀಚಕ್ರವಿದೆ. ಈತನಿಗೆ ನಿತ್ಯದ ಪೂಜಾ ಕೈಂಕರ್ಯಗಳಲ್ಲಿ ಹಾಲು, ಮೊಸರು, ಜೇನುತುಪ್ಪ ಹಾಗೂ ಫಲಗಳ ಅಭಿಷೇಕ ನಡೆಯುತ್ತದೆ. ನಂದಾ ದೀಪಗಳ ನಡುವೆ ಕಾಣಿಸುವ ಸ್ವಾಮಿಯನ್ನು ಕಾಣುವುದಕ್ಕೆ ಮೂರು ಕಣ್ಣುಗಳು ಸಾಲುವುದಿಲ್ಲ. ಭಗವಂತನನ್ನು ದರ್ಶಿಸುವುದು ಜೀವನದ ಪರಮೋನ್ನತ ಭಾಗ್ಯ. ಇಲ್ಲಿನ ಕಮಟೇಶ್ವರ ಲಿಂಗಕ್ಕೆ ನಿತ್ಯ ಜಲ ಮಜ್ಜನ, ಕ್ಷೀರಾಭಿಷೇಕ ನಡೆಯುತ್ತದೆ. ಅರುಣಾಚಲೇಶ್ವರ ನಿಗೆ ಎಳ್ಳಿನ ಎಣ್ಣೆಯ ಮಜ್ಜನ ನಡೆಯುತ್ತದೆ, ಈ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ವಿಶೇಷ. ಈ ದೃಶ್ಯವನ್ನು ನೋಡುವುದಕ್ಕೆ ದೇವಾಲಯದಲ್ಲಿ ಭಕ್ತ ಸಾಗರವೇ ಹರಿದಿರುತ್ತದೆ.

 

 

 

ಈ ಭಗವಂತನ ಸನ್ನಿಧಾನದಲ್ಲಿ ಸಿಂಹಮುಖ ಗಣಪತಿಯ ಮೂರ್ತಿ ಇದೆ. ಈ ಗಣಪನ ದರ್ಶನ ಪಡೆಯುವುದರಿಂದ ಶೀಘ್ರ ಪಲಗಳು ದೊರೆಯುವುದರೊಂದಿಗೆ ಇಷ್ಟಾರ್ಥಗಳು ಸಿದ್ಧಿಸುತ್ತದೆ ಎನ್ನುವುದು ಭಕ್ತರ ನಂಬಿಕೆ ಯಾಗಿದೆ. ಹಾಗೆಯೇ ಪಾರ್ವತಿ ಮತ್ತು ಗಿರಿಜಾಂಬ ದೇವಿಯರಿಗೆ ಮಂಗಳವಾರ ಮತ್ತು ಶುಕ್ರವಾರ ಕುಂಕುಮಾರ್ಚನೆ ಮತ್ತು ವಿಶೇಷ ಪೂಜೆಗಳು ನಡೆಯುತ್ತವೆ. ಈ ದಿನಗಳು ಸ್ತ್ರೀಯರು ಹೆಚ್ಚಾಗಿ ಈ ದೇವಾಲಯಕ್ಕೆ ಬಂದು ಹೋಗುವುದನ್ನು ಕಾಣಬಹುದು. ಭವ ದುಃಖವನ್ನು ನೀಗುವ ಈ ಸ್ವಾಮಿಯ ಕ್ಷೇತ್ರದೊಳಗೆ ಬಂದರೆ ಭಕ್ತರ ಎದೆಯೊಳಗೆ ಓಂಕಾರ ನಾದ ಚಿಮ್ಮುವಂತೆ ಘಂಟಾನಾದ ಕೇಳುತ್ತದೆ.ಶೀಘ್ರ ಕಲ್ಯಾಣ ಮತ್ತು ಸಂತಾನ ಪ್ರಾಪ್ತಿಯನ್ನು ಬೇಡಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬರುತ್ತಾರೆ. ಭೋಗ ನಂದೀಶ್ವರ ಬೇಡಿದ್ದನ್ನು ಕರುಣಿಸುವ ದೇವರು ಈ ಸ್ವಾಮಿಯ ಕೃಪೆ ಇದ್ದರೆ ಸಾಕು ಬದುಕು ಧನ್ಯವಾಗುತ್ತದೆ. ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ಭೋಗ ನಂದೀಶ್ವರ ನಿಗೆ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ .ಶಿವರಾತ್ರಿಯ ದಿನ ಕಲ್ಯಾಣೋತ್ಸವ ನಡೆದರೆ ಅದರ ಮಾರನೇ ದಿನ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ನಡೆಯುತ್ತದೆ. ಈ ದಿನ ಚಿಕ್ಕ ರಥದಲ್ಲಿ ಪಾರ್ವತಿ ಮತ್ತು ಗಣಪತಿ ವಿರಾಜಮಾನರಾಗಿದ್ದರೆ ದೊಡ್ಡ ರಥದಲ್ಲಿ ಭೋಗ ನಂದೀಶ್ವರ ಗಿರಿಜಾಂಬೆಯರು ಆಸನರಾಗಿರುತ್ತಾರೆ. ಶಿವರಾತ್ರಿಯ ಸಂದರ್ಭದಲ್ಲಿ ನಡೆಯುವ ಉತ್ಸವಕ್ಕೆ ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

 

ಪುರಾಣ ಕಾಲದಲ್ಲಿ ಈ ಪ್ರಾಂತ್ಯವು ಕಾರ್ತ್ಯವೀರ್ಯಾರ್ಜುನ ಎನ್ನುವ ರಾಜನ ಆಧಿಪತ್ಯಕ್ಕೆ ಒಳಪಟ್ಟಿತ್ತು. ಜಮದಗ್ನಿ ಮತ್ತು ರಾಜನ ನಡುವೆ ಇಂದ್ರ ಲೋಕದಲ್ಲಿ ಕಾಮಧೇನು ಎನ್ನುವ ಹಸುವಿಗಾಗಿ ಕಲಹ ಉಂಟಾಗುತ್ತದೆ. ಕಾರ್ತ್ಯವೀರ್ಯಾರ್ಜುನ ಕಾಮಧೇನುವನ್ನು ಪಡೆಯಬೇಕು ಎಂಬ ಉದ್ದೇಶದಿಂದ ತಪೋ ನಿಷ್ಠನಾದ ಜಮದಗ್ನಿ ಮಹರ್ಷಿಯನ್ನು ಕೊಂದು ಬಿಡುತ್ತಾನೆ. ಇದನ್ನು ತಿಳಿದ ಜಮದಗ್ನಿಯ ಮಗ ಪರಶುರಾಮ ತಂದೆಯ ಸಾವಿಗೆ ಪ್ರತೀಕಾರವಾಗಿ ಕಾರ್ತ್ಯವೀರ್ಯಾರ್ಜುನನನ್ನು ಯುದ್ಧ ಮಾಡಿ ಕೊಂದು ಬಿಡುತ್ತಾನೆ. ಅಷ್ಟಾದರೂ ಆತನ ಕೋಪಾ ತಣ್ಣಗಾಗುವುದಿಲ್ಲ. ಅದಕ್ಕಾಗಿ ಇಡೀ ಕ್ಷತ್ರಿಯ ಸಮೂಹವನ್ನೇ ಸರ್ವನಾಶ ಮಾಡುವುದಾಗಿ ಪಣತೊಟ್ಟಿರುತ್ತಾನೆ. ಅದರಂತೆ ಕ್ಷತ್ರಿಯ ಕುಲವನ್ನು ನಾಶಮಾಡುತ್ತಾನೆ. ಈ ಘಟನೆ ನಡೆದದ್ದು ಕೃತಯುಗದಲ್ಲಿ. ಆದರೂ ವಂಶ ಪಾರಂಪರ್ಯವಾಗಿ ಕಾರ್ತ್ಯವೀರ್ಯಾರ್ಜುನನ ವಂಶದವರಿಗೆ ಬ್ರಹ್ಮಹತ್ಯಾ ಶಾಪ ಶಾಪವಾಗಿ ಕಾಡತೊಡಗಿತ್ತು.ಆ ವಂಶದವರೇ ಚೋಳ ರಾಜರು. ಹೀಗೆ ಬ್ರಹ್ಮಹತ್ಯಾ ದೋಷದ ಫಲವಾಗಿ ಚೋಳ ರಾಜರು ಪ್ರತಿ ನಿತ್ಯವು ಒಂದೊಂದು ಶಿವಲಿಂಗವನ್ನು ಸ್ಥಾಪಿಸಿ ಪೂಜಿಸದಿದ್ದರೆ ಅವರಿಗೆ ಊಟ ರುಚಿ ಸಿಗುತ್ತಿರಲಿಲ್ಲ. ಚೋಳ ವಂಶದ ರಾಜರು ಶಿವ ಯೋಗಿಗಳಿಂದ ದೀಕ್ಷೆ ಪಡೆದು ಮಂತ್ರೋಪದೇಶವನ್ನು ಮಾಡಿದ ನಂತರ ವಂಶದ ಶಾಪ ವಿಮೋಚನೆಯಾಯಿತು. ಶಾಪದಿಂದ ಮುಕ್ತನಾದ ರಾಜ ಇಲ್ಲಿಯೂ ಈ ಕಣಿವೆಯಲ್ಲಿ ಭೋಗ ನಂದೀಶ್ವರನನ್ನು ಪ್ರತಿಷ್ಠಾಪಿಸಿ ಈ ಸ್ಥಳಕ್ಕೆ ನಂದಿಗಿರಿ ಎಂದು ನಾಮಕರಣ ಮಾಡುತ್ತಾರೆ. ಅದೇ ಸಂದರ್ಭದಲ್ಲಿ ಬೆಟ್ಟದ ಮೇಲೆ ಯೋಗ ನಂದೀಶ್ವರ ಮತ್ತು ತಪ್ಪಲಿನಲ್ಲಿರುವ ಭೋಗ ನಂದೀಶ್ವರ ದೇವಾಲಯಗಳನ್ನು ನಿರ್ಮಾಣ ಮಾಡಿದನು ಎಂದು ಉಲ್ಲೇಖವಿದೆ .

ಈ ಸ್ಥಳಕ್ಕೆ ಆನಂದಗಿರಿ ಎನ್ನುವ ಹೆಸರು ಇದೆ. ಚೋಳರ ಕಾಲದಲ್ಲಿ ಇಲ್ಲಿಗೆ ಈ ಹೆಸರು ಬಂದಿದೆ ಎನ್ನಲಾಗುತ್ತದೆ. ಬೇಸಿಗೆಯ ಕಾಲದಲ್ಲೂ ಈ ಸ್ಥಳ ತಂಪಾಗಿತ್ತು ಇಲ್ಲಿ ವಿಹರಿಸುವವರಿಗೆ ಆನಂದ ದೊರೆಯುವ ಕಾರಣ ಇದಕ್ಕೆ ಆನಂದಗಿರಿ ಎನ್ನುವ ಹೆಸರನ್ನು ಕೂಡ ಕರೆಯಲಾಗುತ್ತದೆ. ಇಲ್ಲಿನ ಸ್ಥಳದಂತೆಯೇ ಇಲ್ಲಿ ನೆಲೆಸಿರುವ ದೇವರು ಕೂಡ ತನ್ನ ಭಕ್ತರ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿಯನ್ನು ನೀಡುತ್ತಾನೆ. ಆತನ ಕಾರಣದಿಂದಲೇ ಸಕಲ ಜೀವರಾಶಿಗಳು ಬದುಕುತ್ತಿರುವುದು. ಭಕ್ತಿಯಿಂದ ಶಿವಾರಾಧನೆ ಮಾಡಿದವರಿಗೆ ಬದುಕಿದ್ದಾಗ ಪುಣ್ಯ ಹಾಗೂ ಮರಣದ ನಂತರ ಮೋಕ್ಷವನ್ನು ಕರುಣಿಸುತ್ತಾನೆ ಈ ಮಹಾ ಮಹಿಮ. ಇದೇ ಪರಮೇಶ್ವರನ ಅಪೂರ್ವ ಶಕ್ತಿ. ಭಕ್ತರು ಈತನ ಶಕ್ತಿಯನ್ನು ಅರಿತ ಕಾರಣದಿಂದಾಗಿಯೇ ಭೋಗ ನಂದೀಶ್ವರನ ದರ್ಶನ ಬಳಿ ಬಂದು ಸ್ವಾಮಿಯ ದರ್ಶನ ಪಡೆದು ಪಾವನರಾಗುತ್ತಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿದೆ ಈ ಭೋಗ ನಂದೀಶ್ವರ ದೇವಾಲಯ. ಈ ಸ್ವಾಮಿಯ ದರ್ಶನಕ್ಕೆ ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ಸಾಕಷ್ಟು ಭಕ್ತರು ಬರುತ್ತಾರೆ. ಭೋಗ ನಂದೀಶ್ವರ ಮತ್ತು ಯೋಗ ನಂದೀಶ್ವರ ದೇವಸ್ಥಾನಗಳನ್ನು ಅವಳಿ ದೇವಸ್ಥಾನಗಳು ಎಂದು ಕೂಡ ಕರೆಯಲಾಗುತ್ತದೆ. ಈ ದೇವಸ್ಥಾನ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ. ಇಲ್ಲಿನ ಸಂಪೂರ್ಣ ನಿರ್ವಹಣೆಯನ್ನು ಸರ್ಕಾರವೇ ನೋಡಿಕೊಳ್ಳುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top