fbpx
ಸಮಾಚಾರ

ದ್ವಿತೀಯ ಪಿಯುಸಿಲ್ಲಿ ರಾಜ್ಯಕ್ಕೆ ಟಾಪರ್ ಆದ ಸೈಕಲ್ ಪಂಕ್ಚರ್ ಹಾಕ್ತಿದ್ದ ಹುಡುಗಿಯ ಕತೆ.

ಕಷ್ಟಪಟ್ಟರೆ ಯಶಸ್ಸು ಖಂಡಿತ ಎನ್ನುವ ಮಾತಿಗೆ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿರುವ ಬಳ್ಳಾರಿಯ ಕೊಟ್ಟೂರಿನ ಕುಸುಮಾ ಅತ್ಯುತ್ತಮ ಉದಾಹರಣೆ. ದಿನವಿಡೀ ಪಂಕ್ಚರ್ ಹಾಕಿ ದಿನದ ತುತ್ತು ತುಂಬಿಸಿಕೊಳ್ಳುತ್ತಿದ್ದ ವ್ಯಕ್ತಿಯ ಮಗಳು ಪಿಯುಸಿ ಫಲಿತಾಂಶದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಬಿಡುವಿನ ಸಮಯದಲ್ಲಿ ಬೈಕ್ ಪಂಕ್ಚರ್ ಹಾಕುತ್ತಿದ್ದ ಪಿಯುಸಿ ಕಲಾ ವಿಭಾಗದ ಕುಸುಮ ಮೊದಲ ರ್ಯಾಂಕ್ ಪಡೆದು ಸಾಧನೆ ಮಾಡಿದವರು. ಇಂಥ ಸಾಧನೆ ಮಾಡಿದ್ದು ಬಳ್ಳಾರಿಯ ಕೊಟ್ಟೂರಿನ ಪಿಯು ಕಾಲೇಜು ವಿದ್ಯಾರ್ಥಿನಿ.

ಕುಸುಮಾಳ ತಂದೆ ದೇವೇಂದ್ರಪ್ಪ ಕಳೆದೆರಡು ದಶಕದಿಂದ ಇಲ್ಲಿ ವಾಹನ ಪಂಕ್ಚರ್ ಶಾಪ್ ಇಟ್ಟುಕೊಂಡಿದ್ದು ಅದುವೇ ಅವರ ಜೀವನಕ್ಕೆ ಆಧಾರ. ಕುಸುಮಾಳ ಮೂವರು ಹಿರಿಯ ಸೋದರಿಯರು ತಂದೆಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. ಇದೀಗ ಕುಸುಮಾ ಕೂಡ ಕಾಲೇಜು ಇಲ್ಲದ ದಿನ, ವಿರಾಮದ ಸಮಯದಲ್ಲಿ ತಂದೆಯ ಶಾಪ್ ಗೆ ಹೋಗಿ ಗ್ರಾಹಕರು ಪಂಕ್ಚರ್ ಹಾಕಿಸಲೆಂದು ಬಂದಾಗ ಪಂಕ್ಚರ್ ಹಾಕಿಕೊಡುವ ಕೆಲಸ ಮಾಡುತ್ತಿದ್ದಾಳೆ. ಕುಸುಮಾಳ ತಾಯಿ ಜಯಮ್ಮ ಕೂಲಿ ಕೆಲಸ ಮಾಡುತ್ತಾರೆ.

ಮಗಳು ಇಷ್ಟೆಲ್ಲಾ ಕಷ್ಟ ಪಟ್ಟರೂ, ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿರುವುದು ಕುಸುಮ ತಂದೆ, ತಾಯಿಗೆ ತುಂಬಾ ಸಂತೋಷ ನೀಡಿದೆ. ಯಾಕಂದ್ರೆ ಕೆಲವರಿಗೆ ಎಲ್ಲಾ ಸೌಲಭ್ಯ, ಸವಲತ್ತುಗಳಿದ್ದರೂ ಇನ್ನೂ ಏನಾದ್ರು ಬೇಕು ಓದುವುದಕ್ಕೆ ಅಂತ ಕೇಳ್ತಾರೆ. ಆದ್ರೆ ಕುಸುಮ ತನ್ನದೇ ಆದ ಕೆಲವು ಪುಸ್ತಕಗಳು ಹಾಗೂ ಕಾಲೇಜಿನಲ್ಲಿ ಲೆಕ್ಚರರ್ ಪಾಠ ಬಿಟ್ರೆ ಬೇರೆ ಯಾವ ವಿಶೇಷ ಪುಸ್ತಕಗಳನ್ನ ಕೊಂಡು ಓದಿಲ್ಲ. ಆದರೂ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿರುವುದು ಅವರ ತಂದೆ, ತಾಯಿಗೆ ಹಾಗೂ ಕಾಲೇಜಿಗೆ ಹೆಮ್ಮೆ ತರುವ ವಿಷಯವಾಗಿದೆ.

ಅಂದಹಾಗೆ ಅವರ ಮನೆಯಲ್ಲಿ ಒಟ್ಟು ಐವರು ಮಕ್ಕಳು. ಕುಸುಮ ಕೊನೆಯವಳು. ದೊಡ್ಡ ಅಣ್ಣ ತಂದೆಗೆ ನೆರವಾಗುತ್ತಿದ್ದರೆ ಉಳಿದ ಮೂವರು ಅಕ್ಕಂದಿರು ಎಂ.ಕಾಂ, ಬಿ.ಎಡ್‌, ಬಿ.ಎಸ್ಸಿ ಓದಿದ್ದಾರೆ. ತಾನು ಓದದೇ ಇದ್ದರೂ ತಮ್ಮ ಮಕ್ಕಳನ್ನು ಓದಿಸಬೇಕೆಂಬುದು ದೇವೇಂದ್ರಪ್ಪನ ಕನಸು. “ದಂಗಲ್‌’ ಸಿನಿಮಾದಲ್ಲಿ ಅಕ್ಕ ತಂಗಿಯರು ಕಬಡ್ಡಿಯಲ್ಲಿ ಮೆಡಲ್‌ ಗೆಲ್ಲುವ ಅಪ್ಪನ ಕನಸನ್ನು ನೆರವೇರಿಸಲು ಮುಂದಾಗುತ್ತಾರೆ. ಅದೇ ರೀತಿ ಇಲ್ಲೂ ಕುಸುಮ ಮತ್ತವಳ ಅಕ್ಕಂದಿರು ಚೆನ್ನಾಗಿ ಓದಿ ತಮ್ಮ ತಂದೆಗೆ ಹೆಮ್ಮೆಯನ್ನುಂಟು ಮಾಡಿರುವುದು ಯಾವುದೇ ಒಲಿಂಪಿಕ್‌ ಮೆಡಲ್‌ಗ‌ೂ ಕಡಿಮೆ ಸಾಧನೆಯೇನಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top