fbpx
ಸಮಾಚಾರ

RCB​ ವಿರುದ್ಧದ ಪಂದ್ಯದಲ್ಲೇ ವಿಶ್ವ ದಾಖಲೆ ಬರೆದ ಕನ್ನಡಿಗ ಕೆಎಲ್ ರಾಹುಲ್.

ಐಪಿಎಲ್​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್​ ತಂಡವನ್ನು ಪ್ರತಿನಿಧಿಸುತ್ತಿರುವ ಕನ್ನಡಿಗ ಕೆ.ಎಲ್ ರಾಹುಲ್ ಟಿ20 ಕ್ರಿಕೆಟ್ ಮಹತ್ತರ ದಾಖಲೆಯೊಂದನ್ನು ಬರೆದಿದ್ದಾರೆ. ಇದೀಗ ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಅತೀ ವೇಗವಾಗಿ ಮೂರು ಸಾವಿರ ರನ್ ಗಳಿಸಿದ ಮೊದಲ ಭಾರತೀಯ ಮತ್ತು ವಿಶ್ವದ ಐದನೇ ಆಟಗಾರನೆಂಬ ಖ್ಯಾತಿಗೆ ರಾಹುಲ್ ಪಾತ್ರರಾಗಿದ್ದಾರೆ.

ಬುಧವಾರ ರಾತ್ರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಹುಲ್ ಈ ಸಾಧನೆ ಮಾಡಿದರು. ಬೆಂಗಳೂರು ವಿರುದ್ಧ ಭರ್ಜರಿಯಾಗಿಯೇ ಆಡಿದ ರಾಹುಲ್ 27 ಎಸೆತಗಳಿಂದ 42 ರನ್ ಗಳಿಸಿದರು.

ರಾಹುಲ್ 3000 ರನ್ ಗಡಿ ದಾಟಲು 93 ಟಿ ಟ್ವೆಂಟಿ ಇನ್ನಿಂಗ್ಸ್ ಗಳನ್ನು ಆಡಿದರು. ಆಸೀಸ್ ಆಟಗಾರ ಶಾನ್ ಮಾರ್ಶ್ 85 ಇನ್ನಿಂಗ್ಸ್ ಗಳಲ್ಲಿ 3000 ರನ್ ಗಳಿಸಿ ವಿಶ್ವ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಕ್ರಿಸ್ ಗೇಲ್ (87), ಮೂರನೇ ಸ್ಥಾನದಲ್ಲಿ ಆರೋನ್ ಫಿಂಚ್ (90) , ನಾಲ್ಕನೇ ಸ್ಥಾನದಲ್ಲಿ ಬಾಬರ್ ಆಜಂ(92) ಹಾಗೂ ಐದನೇ ಸ್ಥಾನವನ್ನು ರಾಹುಲ್​ರೊಂದಿಗೆ ಮೈಕ್ ಹಸ್ಸಿ (93) ಹಂಚಿಕೊಂಡಿದ್ದಾರೆ.

 

2019ರ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರವಾಗಿ ಆಡುತ್ತಿರುವ ಕೆ.ಎಲ್.ರಾಹುಲ್ 55.12 ಸರಾಸರಿಯಲ್ಲಿ441 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಆಕರ್ಷಕ ಶತಕವೂ ಸೇರಿದೆ. ವಿಶ್ವಕಪ್ ಗೆ ಆಯ್ಕೆಯಾಗಿರುವ ರಾಹುಲ್ ಈ ಐಪಿಎಲ್ ಹೆಚ್ಚು ರನ್ ಗಳಿಸಿರುವವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top