fbpx
ಸಮಾಚಾರ

HD ದೇವೇಗೌಡ ವಿರುದ್ಧ ಸ್ಪರ್ಧೆಯಿಂದ ಹಿಂದೆ ಸರಿಯಲು ಕೋಟಿ ಕೋಟಿ ಹಣ ಸಂದಾಯ? ಡೀಲ್​ ಕುರಿತ ಆಡಿಯೋ ವೈರಲ್​

ನಾಮಪತ್ರ ಹಿಂಪಡೆಯಲು ಸಂಸದ ಮುದ್ದಹನುಮೇಗೌಡ ಹಣ ಪಡೆದಿದ್ದಾರೆಂಬ ಆಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತುಮಕೂರು ಲೋಕಸಭೆ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಂಸದ ಮುದ್ದಹನುಮೇಗೌಡ ಮತ್ತು ಮಾಜಿ ಶಾಸಕ ಕೆ.ಎನ್​. ರಾಜಣ್ಣ ಅವರು ಮೈತ್ರಿ ಪಕ್ಷದ ಅಭ್ಯರ್ಥಿ ಎಚ್​.ಡಿ. ದೇವೇಗೌಡ ಅವರನ್ನು ಬೆಂಬಲಿಸಲು ಕೋಟಿ ಕೋಟಿ ಹಣ ಪಡೆದಿದ್ದಾರೆ ಎಂದು ಆಡಿಯೋದಲ್ಲಿ ಆರೋಪಿಸಲಾಗಿದೆ.

ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಆಪ್ತ ದರ್ಶನ್ ಹಾಗೂ ಕಾಂಗ್ರೆಸ್​​ ಕಾರ್ಯಕರ್ತ ಮಾತುಕತೆ ನಡೆಸಿದ್ದಾರೆ ಎನ್ನಲಾಗಿರುವ ಆಡಿಯೋ ಇದಾಗಿದೆ.

ಆಡಿಯೋದಲ್ಲಿ ಇರುವ ಪ್ರಮುಖ ಅಂಶ:
”ಮುದ್ದಹನುಮೇಗೌಡ ಮತ್ತು ರಾಜಣ್ಣ ಅವರು ಮೂರುವರೆ ಕೋಟಿ ಪಡೆದ ಮೇಲೆ ಸುಮ್ಮನೆ ಬಂದು ಪ್ರಚಾರ ಮಾಡಬೇಕಿತ್ತು. ಮುದ್ದಹನುಮೇಗೌಡರು 172 ದೊಡ್ಡ ದೊಡ್ಡ ಆಫೀಸರ್ನ ಟ್ರಾನ್ಸ್‌ಫರ್‌ ಮಾಡಿಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಸಮೇತ ದಾಖಲೆ ನನ್ನ ಹತ್ತಿರವಿದೆ. ದೇವೇಗೌಡ್ರು ಗೆದ್ದರೆ ಪರಮೇಶ್ವರ್‌ ಸಿಎಂ ಆಗೋದು 100% ಗ್ಯಾರಂಟಿ. ರೇವಣ್ಣಗೆ ಡಿಸಿಎಂ ಸ್ಥಾನ ಸಿಗುತ್ತೆ. ಸಿಎಂ ಆದಮೇಲೆ ಗೌಡರಿಗೆ ದಲಿತ ನಾಯಕನನ್ನು ಸಿಎಂ ಮಾಡಿದ ಹಿರಿಮೆ ಬರುತ್ತದೆ. ಕುಮಾರಸ್ವಾಮಿ ಒಬ್ಬ ಅವಕಾಶವಾದಿ, ದೇವೇಗೌಡ ಅವರು ಸಮಾಜವಾದಿ. ತುಮಕೂರಿನಲ್ಲಿ ದೇವೇಗೌಡರು ಸೋತರೆ ರಾಜಣ್ಣ ಮೊದಲು ಸಸ್ಪೆಂಡ್‌ ಆಗುತ್ತಾರೆ. ಆಮೇಲೆ ಮುದ್ದಹನುಮೇಗೌಡರೂ ಟಾರ್ಗೆಟ್‌ ಆಗುತ್ತಾರೆ”

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಸೆಲ್ಫಿ ವಿಡಿಯೋ ಹರಿಬಿಟ್ಟು ಸ್ಪಷ್ಟನೆ ನೀಡಿರುವ ದರ್ಶನ್‌, ಕಾರ್ಯಕರ್ತರು ಹೀಗೆ ಮಾತನಾಡಿರಬಹುದು ಎಂದು ಗೆಳೆಯನ ಬಳಿ ಹೇಳಿದ್ದೇನೆ ಅಷ್ಟೆ. ಆದರೆ, ಯಾರೂ ಹಣ ಪಡೆದಿಲ್ಲ. ಇದೊಂದು ಕುತಂತ್ರ ಎಂದಿದ್ದಾರೆ. ಈ ಮಧ್ಯೆ, ಸುದ್ದಿ ಹೊರಬೀಳುತ್ತಿದ್ದಂತೆ ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ಜಿಲ್ಲಾ ಸಂಚಾಲಕನಾಗಿದ್ದ ದರ್ಶನ್‌ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಅಂದಹಾಗೆ ಜೆಡಿಎಸ್​ ವರಿಷ್ಠ ಮತ್ತು ಮಾಜಿ ಪ್ರಧಾನ ಮಂತ್ರಿ ಎಚ್​.ಡಿ. ದೇವೇಗೌಡ ಅವರು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ದೇವೇಗೌಡರು ಸ್ಪರ್ಧೆ ಮಾಡುವುದಾಗಿ ಘೋಷಿಸುತ್ತಿದ್ದಂತೆ ಮುದ್ದಹನುಮೇಗೌಡರು ತಮ್ಮ ಅಸಮಾಧಾನ ಹೊರಹಾಕಿದ್ದರು ಮತ್ತು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ರಾಜಣ್ಣ ಸಹ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆ ನಂತರ ಪಕ್ಷದ ವರಿಷ್ಠರ ಮನವೊಲಿಕೆಯ ನಂತರ ಇಬ್ಬರೂ ತಮ್ಮ ನಾಮಪತ್ರ ವಾಪಸ್​ ಪಡೆದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top