fbpx
ಸಮಾಚಾರ

ಬಡತನದ ಬೇಗೆಯಲ್ಲಿ ಅರಳಿದ ಪ್ರತಿಭೆ- ಬೀಡಿ ಲೇಬಲ್‌ ಹಚ್ಚುತ್ತಿದ್ದಾಕೆ ಈಗ ರಾಜ್ಯಕ್ಕೆ 6ನೇ ಟಾಪರ್.

ಗೆಲುವೆಂಬುದು ‘ಮಾರು ದೂರ ನಡೆದಾಕ್ಷಣ ಎದುರಾಗಿ ಬಿಡುವ ಮಾಯಾದಂಡ’ ಅಂತಾ ನಂಬಿ ಕೂತ ಅನೇಕರಿದ್ದಾರೆ. ಆದರದು ಕೈಕಾಲಿನ ಕಸುವನ್ನೆಲ್ಲ ಬಸಿದು ಪ್ರಯತ್ನಿಸಿದರೂ ಸಿಕ್ಕಂತೆ ಮಾಡಿ ಆಟವಾಡಿಸೋ ಮಾಯಾವಿ ಎಂಬ ವಿಚಾರ ಕಷ್ಟ ಪಟ್ಟವರಿಗೆ, ಅದರ ಫಲವಾಗಿಯೇ ಗೆದ್ದವರಿಗಲ್ಲದೆ ಬೇರ‍್ಯಾರಿಗೂ ಅರ್ಥವಾಗಲು ಸಾಧ್ಯವಿಲ್ಲ. ಈಗ ಯಾಕೆ ಮಾತು ಅಂತೀರಾ? ಯಾವುದೇ ಸೌಲಭ್ಯ ಇಲ್ಲದಿದ್ದರೂ ಇಚ್ಛಾಶಕಿಯೊಂದು ಇದ್ದರೆ ಸಾಕು ಸಾಧನೆ ಸಾಧ್ಯ ಎನ್ನುವುದನ್ನು ಬೀಡಿ ಲೇಬಲ್ ಹಾಕುವ ಹುಡುಗಿಯೊಬ್ಬಳು ತೋರಿಸಿಕೊಟ್ಟಿದ್ದಾಳೆ.

ಹೌದು, ಕಾಲೇಜಿನಿಂದ ಬಂದು ಮನೆಯಲ್ಲಿ ಬೀಡಿ ಲೇಬಲ್‌ ಹಾಕಿ ಓದಿರುವ ಹುಡುಗಿಯೊಬ್ಬಳು ದ್ವಿತೀಯ ಪಿಯುಸಿಯಲ್ಲಿ 600ರಲ್ಲಿ 589 ಅಂಕ ಗಳಿಸಿ ರಾಜ್ಯಕ್ಕೆ ಆರನೇ ಸ್ಥಾನ ಪಡೆದಿದ್ದಾಳೆ. ಪುತ್ತೂರಿನ ಅಂಬಿಕಾ ವಿದ್ಯಾಲಯದ ದ್ವಿತೀಯ ಪಿಯುಸಿ ಪಿಸಿಎಂಬಿ ವಿದ್ಯಾರ್ಥಿನಿ, ಉಪ್ಪಿನಂಗಡಿ ನಟ್ಟಿಬೈಲು ನಿವಾಸಿ ನಾಗೇಶ್ ಮತ್ತು ವನಜಾ ದಂಪತಿಯ ಪುತ್ರಿ ಸ್ನೇಹಾ ಎಂಬಾಕೆಯೇ ಬಡತನದಲ್ಲೂ ಅರಳಿದ ಹೂ.

ಈಕೆಯ ತಂದೆ ನಾಗೇಶ್ ಬೀಡಿ ಫ್ಯಾಕ್ಟರಿಯಲ್ಲಿ ಕಾರ್ಮಿಕ. ತಾಯಿ ವನಜಾ ಗೃಹಿಣಿ. ಬರುವ ಆದಾಯ ಕುಟುಂಬ ನಿರ್ವಹಣೆಗೆ ಸಾಕಾಗದು ಎನ್ನುವುದಕ್ಕೆ ಮನೆಯಲ್ಲಿ ಬೀಡಿಗೆ ಲೇಬಲ್ ಹಾಕುವ ಹೆಚ್ಚುವರಿ ಕಾಯಕ ಇವರದ್ದು. ಪೋಷಕರ ಈ ಕಾಯಕದಲ್ಲಿ ಮನೆಯ ಮಕ್ಕಳೂ ಕೈ ಜೋಡಿಸಿ ಸಹಕರಿಸುವುದರಿಂದ ಸಂಸಾರ ನೆಮ್ಮದಿಯಾಗಿ ಸಾಗುತ್ತಿದೆ.

ಸ್ನೇಹಾ ಸಾಯಂಕಾಲ ಮನೆಗೆ ಬಂದ ಕೂಡಲೇ ಪಠ್ಯ ಸಂಬಂಧಿ ಕೆಲಸಗಳನ್ನು ಪೂರೈಸಿ ರಾತ್ರಿ 8.30ರಿಂದ 11ರ ವರೆಗೆ ಬೀಡಿ ಲೇಬಲ್‌ ಹಾಕುವ ಕಾಯಕದಲ್ಲಿ ತೊಡಗುತ್ತಿದ್ದರು. ಮತ್ತೆ ನಸುಕಿನಲ್ಲಿ 5.30ರ ವೇಳಗೆ ಎದ್ದು ಓದುತ್ತಿದ್ದರು. ಓರಗೆಯ ಮಕ್ಕಳೆಲ್ಲ ಬಸ್‌ ನಿಲ್ದಾಣವರೆಗೆ ಹೆತ್ತವರ ವಾಹನದಲ್ಲಿ ಹೋದರೆ ಸ್ನೇಹಾ ನಡೆದುಕೊಂಡೇ ನಿಲ್ದಾಣ ತಲುಪುತ್ತಿದ್ದರು. ಆದರೆ ಆಕೆ ಮಾಡಿರುವ ಸಾಧನೆ ಮಾತ್ರ ಸೌಲಭ್ಯ ಪಡೆದು ಕಾಲೇಜೆಗಿಗೆ ಬರುತ್ತಿದ್ದ ವಿದ್ಯಾರ್ಥಿಗಳಿಗಿಂತ ಎತ್ತರವಾಗಿದೆ.

ಕಷ್ಟಪಡುತ್ತಲೇ ತಾನೇನಾದರೂ ಸಾಧಿಸುತ್ತೇನೆಂಬ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಛಲವಿದ್ದರೆ ಯಾವುದೇ ಸೌಲಭ್ಯವಿಲ್ಲದೆಯೂ ಸಾಧನೆ ಮಾಡಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟ ಅಂಬಿಕಾಳ ಕನಸೆಲ್ಲವೂ ನನಸಾಗಲೆಂದು ಹಾರೈಸೋಣ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top