fbpx
ಸಮಾಚಾರ

ಹಿರಿಯ ನಟ, ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ವಿಧಿವಶ

ರಂಗಕರ್ಮಿ, ನಟ ಮಾಸ್ಟರ್‌ ಹಿರಣ್ಣಯ್ಯ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಗುರುವಾರ ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಂಗೇರಿ ಸಮೀಪದ ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಲೀವರ್ ಸಮಸ್ಯೆಯಿಂದ ಬಳಲುತ್ತಿದ್ದ ಮಾಸ್ಟರ್ ಹಿರಣ್ಣಯ್ಯ ಅನೇಕ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ ಎಂಬುದು ತಿಳಿದುಬಂದಿದೆ. ಬಿಜಿಎಸ್ ಆಸ್ಪತ್ರೆಯಿಂದ ಪಾರ್ಥಿವ ಶರೀರರನ್ನು ಬನಶಂಕರಿಯಲ್ಲಿರುವ ನಿವಾಸಕ್ಕೆ ತರಲಾಗುತ್ತಿದ್ದು, ಅಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎನ್ನಲಾಗಿದೆ.

ಹಿರಣ್ಣಯ್ಯ ಅವರು 1934ರ ಫೆಬ್ರವರಿ 15ರಂದು ಮೈಸೂರಿನಲ್ಲಿ ಜನಿಸಿದರು. ಇವರ ತಂದೆ ಕೆ. ಹಿರಣ್ಣಯ್ಯ ಕೂಡ ನಟ, ನಿರ್ದೇಶಕ ಹಾಗೂ ಕನ್ನಡ ಚಿತ್ರರಂಗದಲ್ಲಿ ಬರಹಗಾರ ಹಾಗೂ ರಂಗ ಕಲಾವಿದರಾಗಿದ್ದರು. ಕೇರ್ ಆಫ್ ಪುಟ್ ಪಾತ್, ನಂ.73 ಶಾಂತಿ ನಿವಾಸ, ಗಜ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದ ಅಭಿನಯಿಸಿದ್ದ ಮಾಸ್ಟರ್ ಹಿರಣ್ಣಯ್ಯ ವೃತ್ತಿರಂಗಭೂಮಿ ಚರಿತ್ರೆಯಲ್ಲಿ ಅವರ ‘ಲಂಚಾವತಾರ’ ನಾಟಕ 10 ಸಾವಿರಕ್ಕೂ ಅಧಿಕ ಪ್ರದರ್ಶನ ಕಂಡು ಮೈಲುಗಲ್ಲು ನಿರ್ಮಿಸಿತ್ತು. ‘ಲಂಚಾವತಾರ’ “ಭ್ರಷ್ಟಾಚಾರ’, “ಅತ್ಯಾಚಾರ’, “ಕಪಿಮುಷ್ಟಿ’, “ನಡುಬೀದಿ ನಾರಾಯಣ’ ಎಂಬ ಪ್ರಸಿದ್ಧ ನಾಟಕಗಳಲ್ಲೂ ಅವರು ಬಣ್ಣ ಹಚ್ಚಿದ್ದರು.

ನಟರತ್ನಾಕರ, ಕಲಾಗಜಸಿಂಹ, ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ರಂಗಭೂಮಿ ಪ್ರಶಸ್ತಿ, ಗುಬ್ಬಿವೀರಣ್ಣ ಪ್ರಶಸ್ತಿಗಳು ಅವರಿಗೆ ಲಭಿಸಿದ್ದವು. ನೂಜೆರ್ಸಿ, ವಾಷಿಂಗ್‌ಟನ್ ಡಿ.ಸಿ., ಬಾಸ್ಟನ್, ಹೂಸ್ಟನ್, ನೂಯಾರ್ಕ್ ಮುಂತಾದೆಡೆಗಳಿಂದ ಅವರಿಗೆ ಸನ್ಮಾನಗಳು ಅರಸಬಿ ಬಂದಿದ್ದವು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top