fbpx
ಸಮಾಚಾರ

ಕಡ್ಲೆಕಾಯಿ ಮಾರುತ್ತಲೇ ಪಿಯುಸಿಯಲ್ಲಿ ಸಾಧನೆ ಮಾಡಿದ ಹುಲಿಯೂರು ದುರ್ಗದ ವಿದ್ಯಾರ್ಥಿ.

ಗೆಲುವೆಂಬುದು ‘ಮಾರು ದೂರ ನಡೆದಾಕ್ಷಣ ಎದುರಾಗಿ ಬಿಡುವ ಮಾಯಾದಂಡ’ ಅಂತಾ ನಂಬಿ ಕೂತ ಅನೇಕರಿದ್ದಾರೆ. ಆದರದು ಕೈಕಾಲಿನ ಕಸುವನ್ನೆಲ್ಲ ಬಸಿದು ಪ್ರಯತ್ನಿಸಿದರೂ ಸಿಕ್ಕಂತೆ ಮಾಡಿ ಆಟವಾಡಿಸೋ ಮಾಯಾವಿ ಎಂಬ ವಿಚಾರ ಕಷ್ಟ ಪಟ್ಟವರಿಗೆ, ಅದರ ಫಲವಾಗಿಯೇ ಗೆದ್ದವರಿಗಲ್ಲದೆ ಬೇರ‍್ಯಾರಿಗೂ ಅರ್ಥವಾಗಲು ಸಾಧ್ಯವಿಲ್ಲ. ಈಗ ಯಾಕೆ ಮಾತು ಅಂತೀರಾ? ಯಾವುದೇ ಸೌಲಭ್ಯ ಇಲ್ಲದಿದ್ದರೂ ಇಚ್ಛಾಶಕಿಯೊಂದು ಇದ್ದರೆ ಸಾಕು ಸಾಧನೆ ಸಾಧ್ಯ ಎನ್ನುವುದನ್ನು ಕೆಡಲೆಕಾಯಿ ಮಾರುವ ಹುಡುಗನೊಬ್ಬ ತೋರಿಸಿಕೊಟ್ಟಿದ್ದಾನೆ.

ಸಂಜೆ ಮತ್ತು ರಜೆ ಸಮಯದಲ್ಲಿ ಕಡಲೆಕಾಯಿ ಮಾರುವ ಮಂಜೇಶ ಹೆಚ್‌.ವಿ. ಎಂಬ ಹುಡುಗ ಪಿಯುಸಿಯಲ್ಲಿ 600ಕ್ಕೆ577(96%) ಅಂಕಗಳನ್ನು ಪಡೆದು ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ. ಕುಣಿಗಲ್‌ನ ಜ್ಞಾನ ಭಾರತಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿದ ಈತ ಪಿಯುಸಿಯಲ್ಲಿ ಶೇ. 96.16 ಅಂಕ ಪಡೆದಿದ್ದಾನೆ. ಕನ್ನಡ-97, ಇಂಗ್ಲೀಷ್‌-91, ಭೌತಶಾಸ್ತ್ರ-98, ರಸಾಯಸ ಶಾಸ್ತ್ರ-99, ಗಣಿತ-98 ಮತ್ತು ಜೀವಶಾಸ್ತ್ರ-94 ಅಂಕಗಳನ್ನು ಗಳಿಸಿದ್ದಾನೆ.. ಅಂದಹಾಗೆ ಎಸ್‌ಎಸ್‌ಎಲ್‌ಸಿಯಲ್ಲಿ ಕೂಡ ಸಾಧನೆ ಮಾಡಿದ್ದ ಮಜೆಶ ಶೇ.92.6 ಅಂಕ ಪಡೆದಿದ್ದ ಈಗ ಪಿಯುಸಿಯಲ್ಲಿಯೂ ಸಾಧನೆ ಮಾಡಿದ್ದಾನೆ.

ಮೂಲತಃ ಹುಲಿಯೂರು ದುರ್ಗದ ಹಳೆ ಪೇಟೆ ನಿವಾಸಿಯಾಗಿರುವ ಮಂಜೇಶ ಓದಿನಲ್ಲಿ ಚಿಕ್ಕವನಿದ್ದಾಗಿನಿಂದಲೂ ಮುಂದು. ಹುಲಿಯೂರುದುರ್ಗದ ಬಸ್‌ ನಿಲ್ದಾಣದಲ್ಲಿ ಸಂಜೆ ಮತ್ತು ರಜೆ ಸಮಯದಲ್ಲಿ ಕಡಲೆಕಾಯಿಯನ್ನು ಮಾರಾಟ ಮಾಡಿ ಕೂಲಿಗೆ ಹೋಗುವ ತಂದೆ ತಾಯಿರಿಗೆ ಸಂಸಾರದ ಬಂಡಿ ಸಾಗಿಸಲು ನೆರವಾಗುತ್ತಿದ್ದನು.. ಕೇವಲ ಕಡಲೆ ಕಾಯಿ ಮಾರಾಟ ಮಾಡುವುದು ಮಾತ್ರವಲ್ಲದೆ ರಜೆ ದಿನಗಳಲ್ಲಿ ಕುರಿಯನ್ನು ಕಾಯುವುದಕ್ಕೂ ಹೋಗುತ್ತಿದ್ದನಂತೆ.

ಸದ್ಯ ಪಶುವೈದ್ಯನಾಗಬೇಕು ಎಂಬ ಹೆಬ್ಬಯಕೆಯನ್ನು ಹೊಂದಿರುವ ಮಂಜೇಶ ಸಿಇಟಿ ಪರೀಕ್ಷೆಗಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದು ಅದು ಈಡೇರುತ್ತದೆ ಎಂಬ ನಂಬಿಕೆಯನ್ನು ಹೊಂದಿದ್ದಾನೆ.. ” ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ನಮ್ಮ ಮನೆಯಲ್ಲೇ ನಾನೇ ಸಾಕಿದ, ನಮ್ಮ ಸಂಸಾರಕ್ಕೆ ಆಸರೆಯಾಗಿದ್ದ ಕುರಿಗಳು ಸಾವನ್ನಪ್ಪಿದವು. ಹಳ್ಳಿ ಪ್ರದೇಶದಲ್ಲಿ ಪಶುವೈದ್ಯರ ಲಭ್ಯತೆ ಇದ್ದಿದ್ದರೆ ಯಾವ ರಾಸುಗಳು ಸಾವನ್ನಪ್ಪುವುದಿಲ್ಲ ಎಂಬುದು ನನ್ನ ಅನಿಸಿಕೆ. ಅನ್ನದಾತರಿಗೆ ಬೆನ್ನೆಲುಬಾಗಿರುವ ರಾಸುಗಳ ರಕ್ಷ ಣೆಗಾಗಿ ಪಶು ವೈದ್ಯನಾಗಬೇಕು ಎಂಬ ಗುರಿ ನನ್ನದು” ಎಂಬುದು ಮಂಜೇಶನ ಮನದಾಳದ ಮಾತು.

ಕಷ್ಟಪಡುತ್ತಲೇ ತಾನೇನಾದರೂ ಸಾಧಿಸುತ್ತೇನೆಂಬ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಛಲವಿದ್ದರೆ ಯಾವುದೇ ಸೌಲಭ್ಯವಿಲ್ಲದೆಯೂ ಸಾಧನೆ ಮಾಡಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟ ಮಂಜೇಶನಾ ಕನಸೆಲ್ಲವೂ ನನಸಾಗಲೆಂದು ಹಾರೈಸೋಣ…

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top