fbpx
ಸಮಾಚಾರ

ರೈಲು ವಿಳಂಬ: ಪರೀಕ್ಷೆ ವಂಚಿತರಾದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು.

ಹಂಪಿ ಎಕ್ಸ್‌ಪ್ರೆಸ್‌ ರೈಲು ವ್ಯತ್ಯಯದಿಂದ ಬಳ್ಳಾರಿ, ಕೊಪ್ಪಳದಿಂದ ಬೆಂಗಳೂರಿನ ನೀಟ್‌ ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿದ್ದ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್‌ 2019 ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಇನ್ನು ಪರ್ಯಾಯ ಮಾರ್ಗ 120 ಕಿಮೀ ಹೆಚ್ಚುವರಿ ದೂರವನ್ನು ಹೊಂದಿದ್ದು ರೈಲು ವಿಳಂಬಕ್ಕೆ ಕಾರಣವೆನ್ನಲಾಗಿದೆ.

ಶನಿವಾರ ರಾತ್ರಿ 10.30ಕ್ಕೆ ಹೊರಡಬೇಕಿದ್ದ ಹಂಪಿ ಎಕ್ಸ್‌ಪ್ರೆಸ್‌ ರೈಲು ಮಧ್ಯರಾತ್ರಿ 2 ಗಂಟೆಗೆ ಬಳ್ಳಾರಿಯಿಂದ ಹೊರಟ ಪರಿಣಾಮ ಸರಿಯಾದ ಸಮಯಕ್ಕೆ ಬೆಂಗಳೂರಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಈ ಕುರಿತು ಕೆಲವು ವಿದ್ಯಾರ್ಥಿಗಳು ಕೇಂದ್ರ ರೈಲ್ವೆ ಸಚಿವ ಪ್ರಕಾಶ್‌ ಜಾವ್ಡೇಕರ್‌ ಅವರಿಗೆ ಟ್ವೀಟ್‌ ಮಾಡಿದ್ದು, ರೈಲು ವ್ಯತ್ಯಯದ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಹತಾಶರಾಗಿ ಗೋಳಾಡುತ್ತಿದ್ದ ದೃಶ್ಯ ಕಂಡುಬಂತು.

ಇನ್ನು ರೈಲು ವಿಳಂಬದಿಂಡಾಗಿ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಇನ್ನೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕೆಂದು ಸಂಸದ ಜಿಸಿ ಚಂದ್ರಶೇಖರ್, ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯ ಹಾಗೂ ಸಿಎಂ ಎಚ್.ಡಿ. ಕುಮಾರಸ್ವಾಮಿ ಟ್ವಿಟ್ಟರ್ ಮೂಲಕ ಆಗ್ರಹಿಸಿದ್ದಾರೆ.

 

 

 

ಇತ್ತ ಪರೀಕ್ಷೆ ಬರೆಯಲು ವಂಚಿತರಾದ ವಿದ್ಯಾರ್ಥಿಗಳ ಕುರಿತು ಪ್ರತಿಕ್ರಿಯೆ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ ಅವರು, ಹಂಪಿ ಎಕ್ಸ್ ಪ್ರೆಸ್ ರೈಲು ತಡವಾಗಿರುವುದು ಗಮನಕ್ಕೆ ಬಂದಿದ್ದು, ಈ ವಿಚಾರವಾಗಿ ಇಲಾಖೆಯ ಅಧಿಕಾರಿಗಳ ಜೊತೆ ಮಾತಾಡಿದ್ದೇನೆ. ಕಾನೂನು ಪ್ರಕಾರ ವಿದ್ಯಾರ್ಥಿಗಳು ಪರೀಕ್ಷೆ ಬರೆಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಪರೀಕ್ಷಾ ಕೇಂದ್ರ ಬದಲು:
ನೀಟ್ ಪರೀಕ್ಷೆ ಹಿನ್ನೆಲೆಯಲ್ಲಿ ಯಲಹಂಕದಲ್ಲಿ ಎಕ್ಸಾಂ ಸೆಂಟರ್ ನಿಗದಿ ಮಾಡಲಾಗಿತ್ತು. ಆದರೆ ಏಕಾಏಕಿ ಪರಿಕ್ಷಾ ಕೇಂದ್ರವನ್ನು ಬೆಂಗಳೂರು ಹೊರವಲಯ ಹೊಸೂರು ರಸ್ತೆಯ ಕೂಡ್ಲು ಗ್ರಾಮದ ಬಳಿಯಿರುವ ದಯಾನಂದ್ ಸಾಗರ್ ಕಾಲೇಜಿಗೆ ಬದಲಾಯಿಸಿದ ಕಾರಣ ಪೋಷಕರು ಹಾಗೂ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಿದರು. ಪರಿಣಾಮ ಪರಿಕ್ಷಾ ಕೇಂದ್ರಕ್ಕೆ ತಡವಾಗಿ ಆಗಮಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಯಿತು. ಅಂತಿಮ ಕ್ಷಣದಲ್ಲಿ ಆದ ಎಡವಟ್ಟಿನಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top