fbpx
ಸಮಾಚಾರ

ವಿಶ್ವಕಪ್ ಮೀಸಲು ಆಟಗಾರನಾಗಿ ಸ್ಥಾನ ಪಡೆದ ಅನುಭವಿ ಟೀಂ ಇಂಡಿಯಾ ಕ್ರಿಕೆಟಿಗ.

ಮುಂಬರುವ ಐಸಿಸಿ 2019 ಏಕದಿನ ವಿಶ್ವಕಪ್‌ಗಾಗಿನ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಬಲಗೈ ಅನುಭವಿ ವೇಗಿ ಇಶಾಂತ್ ಶರ್ಮಾ ವಿಫಲವಾಗಿದ್ದಾರೆ. ಇದರೊಂದಿಗೆ ಇಶಾಂತ್‌ರನ್ನು ಕಡೆಗಣಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಆದರೀಗ ಮೀಸಲು ಬೌಲರ್‌ಗಳ ಸಾಲಿನಲ್ಲಿ ಇಶಾಂತ್ ಶರ್ಮಾ ಗುರುತಿಸಿಕೊಂಡಿದ್ದಾರೆ ಎಂಬುದನ್ನು ಬಿಸಿಸಿಐ ಖಚಿತಪಡಿಸಿದೆ.

ಈಗಾಗಲೇ ರಿಷಭ್ ಪಂತ್, ಅಂಬಟಿ ರಾಯುಡು, ದೀಪಕ್ ಚಾಹರ್, ಖಲೀಲ್ ಅಹಮದ್ ಹಾಗೂ ನವ್‌ದೀಪ್ ಸೈನಿ ಅವರನ್ನು ಮೀಸಲು ಆಟಗಾರರನ್ನಾಗಿ ಬಿಸಿಸಿಐ ಆಯ್ಕೆ ಮಾಡಿದ್ದು, ಇದೀಗ 6ನೇ ಆಟಗಾರನನ್ನಾಗಿ ಇಶಾಂತ್ ಶರ್ಮಾರನ್ನು ಆಯ್ಕೆ ಮಾಡಿದೆ.

 

 

ನಮ್ಮ ಮೊದಲ ಆಯ್ಕೆ ನವದೀಪ್ ಸೈನಿ ಆಗಿದ್ದು, ಇಶಾಂತ್ 2ನೇ ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಇಶಾಂತ್ ಶರ್ಮಾ ಅವರಿಗೆ ಬೌಲಿಂಗ್ ಮಾಡಿದ ಅನುಭವ ಇದೆ. ಈ ಹಿಂದೆ ಇಶಾಂತ್ ಶರ್ಮಾ, ಭಾರತ ತಂಡದಲ್ಲಿ ಆಡುವ ಅವಕಾಶ ದೊರೆಯದಿದ್ದಾಗ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಟೂರ್ನಿಗಳನ್ನು ಆಡಿದ್ದು, ಉತ್ತಮ ಪ್ರದರ್ಶನ ತೋರಿರುವ ದಾಖಲೆಯಿದೆ. ಅಲ್ಲದೇ ಐಪಿಎಲ್‌ನಲ್ಲೂ ಇಶಾಂತ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ನವದೀಪ್ ಸೈನಿ ಬಳಿಕವಷ್ಟೇ ಇಶಾಂತ್ ಶರ್ಮಾ ಆಯ್ಕೆಯನ್ನು ಪರಿಗಣಿಸಲಾಗುವುದು. ಹಾಗೊಂದು ವೇಳೆ ಈಗಿನ ವಿಶ್ವಕಪ್ ತಂಡದಲ್ಲಿರುವ ವೇಗಿಗಳಾದ ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿಗೆ ಗಾಯದ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಮಾತ್ರ ಇಶಾಂತ್‌ಗೆ ಅವಕಾಶ ಕುದುರಿಸಲಿದೆ.

ಟೆಸ್ಟ್ ತಂಡದ ಕಾಯಂ ಆಟಗಾರನಾಗಿರುವ ಇಶಾಂತ್, ಐಪಿಎಲ್​ನಲ್ಲಿ ಡೆಲ್ಲಿ ತಂಡದ ಪರವಾಗಿ ತಮ್ಮ ನಿರ್ವಹಣೆಯ ಮೂಲಕ ಗಮನ ಸೆಳೆದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top