fbpx
ಸಮಾಚಾರ

ಕಳೆದ 79 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆಯೇ ಬದುಕು ಸಾಗಿಸುತ್ತಿರುವ ಈ ಗಟ್ಟಿಗಿತ್ತಿ ಅಜ್ಜಿಯ ಜೀವನಗಾಥೆ ಬಲು ರೋಚಕ.

ನಾವು ವಾಸಿಸುವ ಮನೆಗಳಲ್ಲೋ ಅಥವಾ ಕೆಲಸ ಮಾಡುವ ಆಫೀಸ್‌ಗಳಲ್ಲೋ ಕಾರಣಾಂತಗಳಿಂದ 5 ನಿಮಿಷಗಳ ಕಾಲ ಕರೆಂಟ್ ಹೋದರೆ ಕೆ.ಇ.ಬಿ ಡಿಪಾರ್ಟ್ಮೆಂಟಿನವರನ್ನು ನೆನೆದು ಗೊಣಗಲು ಶುರು ಮಾಡುತ್ತೇವೆ. ಬೇಸಿಗೆಯ ದಿನಗಳಲ್ಲಂತೂ ವಿದ್ಯುತ್ ಸಂಪರ್ಕ ಕಡಿತಗೊಂಡರೆ ಬದುಕುವುದೇ ಕಷ್ಟ ಎಂಬಂತೆ ಒದ್ದಾಡುತ್ತೇವೆ, ಸೆಕೆ ತಡೆಯಲಾರದೆ ಎ.ಸಿ, ಫ್ಯಾನ್, ಪ್ರೀಜರ್ ಮುಂತಾದವುಗಳ ಮೊರೆ ಹೋಗುತ್ತೇವೆ. ಆದರೆ ಇಲ್ಲೊಬ್ಬರು ವೃದ್ಧೆ ತಮ್ಮ ಬದುಕಿನ ಬರೋಬ್ಬರಿ 79 ವರ್ಷಗಳ ಕಾಲ ವಿದ್ಯುತ್ ಸಂಪರ್ಕವನ್ನೆ ಬಳಸದೆ ಈ ಜಗತ್ತಿನ ಜಂಜಾಟದಿಂದ ದೂರ ಉಳಿದು ತಾವು ಸಾಕಿರುವ ಪ್ರಾಣಿ ಪಕ್ಷಿಗಳ ಜೊತೆಗೆ ನೆಮ್ಮದಿಯ ಕಾಲ ಕಳೆಯುತ್ತಿದ್ದಾರೆ ಎಂಬುದನ್ನ ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

“ನನ್ನ ಹುಟ್ಟಿನ ತರುವಾಯ ಮುನ್ನೆಲೆಗೆ ಬಂದಿರುವ ವಿದ್ಯುತ್ ಸಂಪರ್ಕವನ್ನು ಉಪಯೋಗಿಸದೆ ನಾನು ಬದುಕುತ್ತಿದ್ದೇನೆ ಇದರಲ್ಲಿ ಆಶ್ಚರ್ಯ ಪಡುವುದಾದರೂ ಏನಿದೆ? ಇದು ನಾನು ಬದುಕುವ ಶೈಲಿ ಅಷ್ಟೇ, ನಾನು ಎಂದಿಗೂ ವಿದ್ಯುತ್ ಸಂಪರ್ಕವನ್ನು ಅವಲಂಬಿಸಿ ಬದುಕಿದವಳಲ್ಲ. ಏಕೆಂದರೆ ನಾನು ಹುಟ್ಟಿದಾಗ ಜಗಮಗಿಸುವ ಈ ವಿದ್ಯುತ್ತನ್ನು ನಾನು ಕಂಡೇ ಇರಲಿಲ್ಲ. ಮನುಷ್ಯನಿಗೆ ಮೂಲಭೂತವಾಗಿ ಬೇಕಿರುವುದು ಉತ್ತಮ ಆಹಾರ, ತಲೆಯ ಮೇಲೊಂದು ಸೂರು, ಮಾನ ಮುಚ್ಚಿಕೊಳ್ಳುವಷ್ಟು ಬಟ್ಟೆ ಇವುಗಳ ಹೊರತಾಗಿ ಆಡಂಬರದ ಬದುಕು ನಡೆಸುವ ಗೋಜಿಗೆ ನಾನು ಎಂದೂ ಹೋದವಳಲ್ಲಾ” ಎನ್ನುವ 79 ವರ್ಷದ ಹೇಮಾ ಸೇನ್ ಬದುಕಿನ ಕತೆ ರೋಚಕವಾಗಿದೆ.

 

 

ಪರಿಸರ ಪ್ರೇಮಿಯಾಗಿರುವ ಹೇಮಾ ಸೇನ್. ‘ಪುಣೆಯ ಸಾವಿತ್ರಿಬಾಯಿ ಪುಲೆ ವಿವಿಯಿಂದ ಸಸ್ಯಶಾಸ್ತ್ರದಲ್ಲಿ ಪಿಎಚ್‌ಡಿ’ ಪಡೆದುಕೊಂಡಿದ್ದು, ಪುಣೆಯ ‘ಗರ್ವಾರೇ’ ವಿಶ್ವ ವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ನಿವೃತ್ತಿಯ ನಂತರ ಪುಟ್ಟದೊಂದು ಗುಡಿಸಲಿನಲ್ಲಿ ವಾಸವಾಗಿರುವ ಹೇಮಾ ಸೇನ್, ತಾವು ವಾಸಿಸುವ ಪುಟ್ಟ ಮನೆಯಲ್ಲಿಯೇ ನಾಯಿ, ಎರಡು ಬೆಕ್ಕು, ಮುಂಗುಸಿ ಹಾಗೂ ವಿವಿಧ ಪಕ್ಷಿಗಳಿಗೂ ಆಶ್ರಯ ಒದಗಿಸಿದ್ದಾರೆ. ಮನೆಯ ಸುತ್ತ ಮುತ್ತಲ ವಾತಾವರಣ ಬಗೆ ಬಗೆಯ ಗಿಡ ಮರಗಳಿಂದ ಕೂಡಿದ್ದು, ಹೇಮಾ ಸೇನ್ ತಮ್ಮ ಕೊನೆಯ ದಿನಗಳನನ್ನು ಈ ಪರಿಸರದ ಮಡಿಲಲ್ಲಿ ಕಳೆಯುತ್ತಿದ್ದಾರೆ. ಸಸ್ಯ ಶಾಸ್ತ್ರದ ಕುರಿತು ಕೆಲವು ಪುಸ್ತಕಗಳನ್ನೂ ರಚಿಸಿರುವ ಹೇಮಾ ಉತ್ತಮ ಪರಿಸರದ ನಿರ್ವಹಣೆಯ ಕುರಿತಾಗಿ ಹಲವೆಡೆ ಉಪನ್ಯಾಸಗಳನ್ನೂ ನೀಡಿದ್ದಾರೆ.

 

ಹೇಮಾ ಸೇನ್ ಅವರು ಬದುಕುವ ರೀತಿಯನ್ನು ಕಂಡ ಹಲವರು ಅವರನ್ನು ಹುಚ್ಚಿ ಎಂದು ಕರೆಯುವುದರ ಜೊತೆಗೆ ನಿಮಗೆ ಹೀಗೆ ಬದುಕುವುದು ಕಷ್ಟವೆನ್ನಿಸುವುದಿಲ್ಲವೇ ಎಂದು ಕೇಳುತ್ತಾರಂತೆ. ಈ ಎಲ್ಲ ಪ್ರಶ್ನೆಗಳಿಗೂ ಸಹಜವಾಗಿಯೇ ಉತ್ತರಿಸುವ ವಯೋವೃದ್ಧೆ ಹೇಮಾ ಅವರು ನಾನು ಯಾರಿಗೂ ನನ್ನಂತೆ ಬದುಕಿ ಎಂದು ಬೋದಿಸುವುದಿಲ್ಲ. ನನ್ನ ಮುಂದಿನ ಪೀಳಿಗೆಗೆ ಯಾವ ಸಂದೇಶವನ್ನೂ ಕೊಡಲು ನಾನು ಇಚ್ಛಿಸುವುದಿಲ್ಲ. ಪರಿಸರವನ್ನೇ ಹೆಚ್ಚಾಗಿ ಪ್ರೀತಿಸುವ ನಾನು ಪರಿಸರದೊಂದಿಗೆ ಬದುಕುವ ಪರಿಪಾಠ ರೂಢಿಸಿಕೊಂಡಿದ್ದೇನೆ ಅಷ್ಟೇ ಎನ್ನುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top