fbpx
ಸಮಾಚಾರ

ವೈದ್ಯಲೋಕದಲ್ಲಿ ಡ್ರೋನ್ ಕಮಾಲ್.

ವೀಡಿಯೋಗಳನ್ನು ಸೆರೆ ಹಿಡಿಯಲು, ಟ್ರಾಫಿಕ್ ಅಪ್ಡೇಟ್ಸ್ ತಿಳಿಯಲು ಹೀಗೆ ಹಲವು ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸುತ್ತಿರುವ ಡ್ರೋನ್ ಇದೀಗ ವೈದ್ಯಕೀಯ ಲೋಕಕ್ಕೂ ಲಗ್ಗೆ ಇಟ್ಟಿದೆ ಅರೇ ವೈದ್ಯಕೀಯವಾಗಿ ಡ್ರೋನ್ ಯಾವ ಕೆಲಸಕ್ಕೆ ಉಪಯೋಗ ಎನ್ನುತ್ತೀರಾ ಹಾಗಿದ್ದರೆ ಈ ಸ್ಟೋರಿ ಓದಿ.

ವೈದ್ಯಕೀಯ ಲೋಕದಲ್ಲಿ ಇದೇ ಮೊದಲ ಬಾರಿಗೆ ಡ್ರೋನ್ ಬಳಸಿ ಮಾನವ ಅಂಗಾಂಗವನ್ನು ರವಾನಿಸುವ ಮೂಲಕ ಅಮೆರಿಕ ಮೂಲದ ವೈದ್ಯರ ತಂಡ ಹೊಸ ಚಮತ್ಕಾರ ನಡೆಸಿದ್ದಾರೆ. ಈ ಯೋಜನೆಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದ ಹೈ ಟೆಕ್ ಡ್ರೋನ್ ಮೂಲಕ 5 ಕಿ.ಮೀ ದೂರದವರೆಗೆ ವ್ಯಕ್ತಿಯ ಮೂತ್ರಪಿಂಡವನ್ನು ರವಾನಿಸಲಾಗಿದ್ದು, ಬಳಿಕ ಆ ಅಂಗಾಂಗವನ್ನು ಡಯಾಲಿಸಿಸ್ನಿಂದ ಬಳಲುತ್ತಿದ್ದ 44 ವರ್ಷದ ಮಹಿಳೆಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ ಎಂದು ಮೆರಿಲ್ಯಾಂಡ್ ಮೆಡಿಕಲ್ ಸೆಂಟರ್ ನ ವೈದ್ಯರು ತಿಳಿಸಿದ್ದಾರೆ.

ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾಗಿರುವ ತಂಡ ತಮ್ಮ ಹೊಸ ಪ್ರಯೋಗದ ತಯಾರಿಯ ಬಗ್ಗೆ ವಿವರಿಸಿದ್ದಾರೆ ‘ಏವಿಯೇಷನ್ ರೆಗ್ಯುಲೇಟರ್ನಿಂದ ವಿಶೇಷ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆದು ಏಪ್ರಿಲ್ 19 ರಂದು 1:00 ಗಂಟೆಗೆ ಮೂತ್ರಪಿಂಡವನ್ನು ಹೊತ್ತಿದ್ದ ಡ್ರೋನ್ ಅನ್ನು ಹಾರಿಸಲಾಯಿತು. 400 ಅಡಿ ಎತ್ತರದಲ್ಲಿ ಹಾರಿಸಲಾಗಿದ್ದ ಡ್ರೋನ್ ನಿಗದಿತ ಸಮಯಕ್ಕೂ ಮುಂಚಿತವಾಗಿಯೇ ಗುರಿ ತಲುಪಿತ್ತು.

ಅಷ್ಟೊತ್ತಿಗಾಗಲೇ ಆಸ್ಪತ್ರೆಯಲ್ಲಿ ಅಂಗಾಂಗ ಜೋಡಣೆಗಾಗಿ ವೈದ್ಯರು ಸನ್ನದರಾಗಿದ್ದರು. ಅದರಂತೆ ಡಾ| ಜೋಸೆಫ್ ಸ್ಕಲೀಯಾ ನೇತೃತ್ವದಲ್ಲಿ ನಡೆದ ಯಶಸ್ವಿ ಶಸ್ತ್ರಚಿಕಿತ್ಸೆಯಲ್ಲಿ ಸುಮಾರು 8 ವರ್ಷಗಳಿಂದ ಡಯಾಲಿಸಿಸ್ ತೊಂದರೆ ಇಂದ ಬಳಲುತ್ತಿದ್ದ ಮಹಿಳೆಗೆ ಕಿಡ್ನಿ ಕಸಿ ಮಾಡಲಾಗಿದೆ.

ಈ ಒಂದು ಯಶಸ್ವಿ ಚಿಕಿತ್ಸೆಯಿಂದಾಗಿ ಡ್ರೋನ್ ತಂತ್ರಜ್ಞಾನವನ್ನು ವೈದ್ಯಕೀಯ ತುರ್ತು ಪರಿಸ್ಥಿತಿ ಹಾಗೂ ಅಂಗಾಂಗ ಸಾಗಣೆ ವ್ಯವಸ್ಥೆಯಲ್ಲಿ ಕಾರ್ಯಗತಗೊಳಿಸಬಹುದು ಎಂದು ವೈದ್ಯರ ತಂಡ ಅಭಿಪ್ರಾಯ ಪಟ್ಟಿದೆ. ಅಲ್ಲದೆ ಇದನ್ನು 30 ಮೈಲುಗಳಷ್ಟು ದೂರದವರೆಗೆ ಕೊಂಡೊಯ್ಯಲು ಯೋಜನೆ ರೂಪಿಸಬೇಕಿದೆ. ಇದರಿಂದಾಗಿ ಚಿಕಿತ್ಸೆ ವಿಳಂಬ ಹಾಗೂ ಸಮಯದ ಅಭಾವವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಡಾಕ್ಟರ್ ಜೋಸೆಫ್ ಸ್ಕಲೀಯಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top