fbpx
ಸಮಾಚಾರ

ಆಸ್ತಿ ವಿವರ ಮುಚ್ಚಿಟ್ಟ ಆರೋಪ-ಪ್ರಜ್ವಲ್ ರೇವಣ್ಣಗೆ ಸಂಕಷ್ಟ

ಹಾಸನ ಲೋಕಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿರುವ ಕುರಿತು ತನಿಖೆ ನಡೆಸಿದ ಚುನಾವಣಾ ಆಯೋಗ ಕ್ರಮ ಕೈಗೊಳ್ಳುವಂತೆ ಹಾಸನ ಜಿಲ್ಲಾಧಿಕಾರಿಗೆ ಸೂಚಿಸಿದೆ.

ಸುಳ್ಳು ಅಫಿಡವಿಟ್ ಬಗ್ಗೆ ಹಾಸನ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ಆಯೋಗಕ್ಕೆ ದೂರು ನೀಡಿದ್ದರು. ಅಲ್ಲದೆ ಹಾಸನದಲ್ಲಿರೋ ಕಲ್ಯಾಣ ಮಂಟಪ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಬಳಿ ಪಡೆದಿರೋ ಸಾಲದ ಬಗ್ಗೆ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದರು. ಹೀಗಾಗಿ ಇದೀಗ ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಹಾಸನ ಚುನಾವಣಾ ಅಧಿಕಾರಿಗೆ ಆಯೋಗ ಸೂಚನೆ ನೀಡಿದೆ.

ಮೊದಲ ಬಾರಿ ಚುನಾವಣೆ ಎದುರಿಸುತ್ತಿರುವ ಪ್ರಜ್ವಲ್​ ರೇವಣ್ಣ, ಅಫಿಡವಿಟ್ ಸಲ್ಲಿಸುವಾಗ​ ತಪ್ಪು ಮಾಹಿತಿ ನೀಡಿರೋದು ಚುನಾವಣಾ ಆಯೋಗದ ತನಿಖೆಯಲ್ಲಿ ಬಯಲಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಅಫಿಡವಿಟ್​ನಲ್ಲಿ ಚೆನ್ನಾಂಬಿಕಾ ಕನ್ವೆನ್ಷನ್ ಹಾಲ್ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಅಲ್ಲದೇ ತಾತ ಹೆಚ್​.ಡಿ ದೇವೇಗೌಡ ಸಾಲ ನೀಡಿದ ಬಗ್ಗೆಯೂ ಉಲ್ಲೇಖಿಸಿಲ್ಲ.

ಆದರೆ, ದೇವೇಗೌಡರು ತುಮಕೂರಿನಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಮೊಮ್ಮಗ ಪ್ರಜ್ವಲ್​ಗೆ 26 ಲಕ್ಷ ರೂ. ಸಾಲ ನೀಡಿರುವುದಾಗಿ ಉಲ್ಲೇಖಿಸಿದ್ದಾರೆ. ಆದರೆ, ಪ್ರಜ್ವಲ್ ರೇವಣ್ಣ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಸಾಲ ಪಡೆದ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ. ಈ ಬಗ್ಗೆ ವಕೀಲ ದೇವರಾಜೇಗೌಡ ಎಂಬುವರು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಪ್ರಜ್ವಲ್​ ರೇವಣ್ಣಗೆ ಸಂಕಷ್ಟ ಎದುರಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ಎ. ಮಂಜು ಸುಳ್ಳು ಮಾಹಿತಿ ಗಂಭೀರ ಪ್ರಕರಣವಾಗಿದ್ದು, ಕ್ರಮ ಕೈಗೊಳ್ಳಲೇಬೇಕು. ಇಲ್ಲದಿದ್ದಲ್ಲಿ ಹೈಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top