fbpx
ಸಮಾಚಾರ

ರಾತ್ರಿ ನಿದ್ದೆ ಬಿಟ್ಟು ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಲೇ ಮೊದಲ ರ‍್ಯಾಂಕ್‌ ಪಡೆದ ಛಲಗಾರ- ಎರಡು ಚಿನ್ನದ ಪದಕ.

ಗೆಲುವೆಂಬುದು ‘ಮಾರು ದೂರ ನಡೆದಾಕ್ಷಣ ಎದುರಾಗಿ ಬಿಡುವ ಮಾಯಾದಂಡ’ ಅಂತಾ ನಂಬಿ ಕೂತ ಅನೇಕರಿದ್ದಾರೆ. ಆದರದು ಕೈಕಾಲಿನ ಕಸುವನ್ನೆಲ್ಲ ಬಸಿದು ಪ್ರಯತ್ನಿಸಿದರೂ ಸಿಕ್ಕಂತೆ ಮಾಡಿ ಆಟವಾಡಿಸೋ ಮಾಯಾವಿ ಎಂಬ ವಿಚಾರ ಕಷ್ಟ ಪಟ್ಟವರಿಗೆ, ಅದರ ಫಲವಾಗಿಯೇ ಗೆದ್ದವರಿಗಲ್ಲದೆ ಬೇರ‍್ಯಾರಿಗೂ ಅರ್ಥವಾಗಲು ಸಾಧ್ಯವಿಲ್ಲ. ಈಗ ಯಾಕೆ ಮಾತು ಅಂತೀರಾ? ಯಾವುದೇ ಸೌಲಭ್ಯ ಇಲ್ಲದಿದ್ದರೂ ಇಚ್ಛಾಶಕಿಯೊಂದು ಇದ್ದರೆ ಸಾಕು ಸಾಧನೆ ಸಾಧ್ಯ ಎನ್ನುವುದನ್ನು ಎಟಿಎಂ ಸೆಕ್ಯೂರಿಟಿ ಗಾರ್ಡ್ ತೋರಿಸಿದ್ದಾರೆ.

ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಘಟಿಕೋತ್ಸವ ಮಂಗಳವಾರ ನಡೆದಿದ್ದು, ರಾತ್ರಿ ವೇಳೆ ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಾ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿಯೊಬ್ಬ ಎರಡು ಚಿನ್ನದ ಪದಕ ಪಡೆದಿದ್ದಾನೆ.

ಗಂಗಾವತಿಯ ಸಿಂಡಿಕೇಟ್‌ ಬ್ಯಾಂಕಿನ ಎಟಿಎಂನಲ್ಲಿ ಗಾರ್ಡ್‌ ಆಗಿ ತಿಂಗಳಿಗೆ ₹ 8,000 ಸಂಬಳಕ್ಕೆ ಕೆಲಸ ಮಾಡುತ್ತಲೇ ಎಸ್‌ಕೆಎನ್‌ಜಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಯಾಗಿ ಅವರು, ಕನ್ನಡ ಎಂ.ಎ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್‌ ಜೊತೆಗೆ ಚಿನ್ನದ ಪದಕ ಗಳಿಸಿದ್ದಾರೆ.

ಮನೆಯಲ್ಲಿ ಕಿತ್ತು ತಿನ್ನುವ ಬಡತನ ನಡುವೆಯೂ ಏನಾದರೂ ಸಾಧಿಸಬೇಕು ಎಂದು ಹಠಕ್ಕೆ ಬಿದ್ದ ರಮೇಶ್‌, ಪೋಷಕರ ಬಡತನದ ಸಂಕಟ ನೀಗಿಸಲು ಗಂಗಾವತಿಯ ಸಿಂಡಿಕೇಟ್‌ ಬ್ಯಾಂಕ್‌ನ ಎಟಿಎಂನಲ್ಲಿ ಕೆಲಸಕ್ಕೆ ಸೇರಿ, ಅಲ್ಲಿಯೇ ಅಧ್ಯಯನ ನಡೆಸಿ ಕೊನೆಗೂ ತನ್ನ ಕನಸಿನಂತೆಯೇ ಎಂ.ಎ.ಕನ್ನಡ ವಿಭಾಗದಲ್ಲಿ ಮೊದಲ ರ‍್ಯಾಂಕ್‌ ಪಡೆದು ಎರಡು ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾನೆ.

ನಗರದಲ್ಲಿ ಮಂಗಳವಾರ ನಡೆದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸದಲ್ಲಿ ಚಿನ್ನದ ಪದಕದೊಂದಿಗೆ ಪ್ರಮಾಣ ಪತ್ರ ಪಡೆದಾಗ ಅವರ ಕಂಗಳಲ್ಲಿ ಸಾರ್ಥಕ ಭಾವ ಮೂಡಿತ್ತು.

ಓಡಾಡಲು ಆಗದ ಪತಿ ಷಣ್ಮುಖಪ್ಪ ಅವರನ್ನು ಮನೆಯಲ್ಲೇ ಬಿಟ್ಟು ಬಂದಿದ್ದ ರಮೇಶ್ ತಾಯಿ ದೇವಮ್ಮ ಮೂಕವಿಸ್ಮಿತರಾಗಿದ್ದರು. ಅಂದಹಾಗೆ ಐವರು ಮಕ್ಕಳಲ್ಲಿ ದೊಡ್ಡವರಾದ ರಮೇಶ್‌ ಅವರನ್ನು ಕಾಲೇಜಿಗೆ ಕಳಿಸಿದ ದೇವಮ್ಮ ಕೃಷಿ ಕೂಲಿ ಮಾಡುತ್ತಲೇ ಉಳಿದ ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಓದಿಸುತ್ತಿದ್ದಾರೆ. ಮತ್ತೊಬ್ಬ ಪುತ್ರಿಗೆ ಮದುವೆಯಾಗಿದೆ.

ಕಷ್ಟಪಡುತ್ತಲೇ ತಾನೇನಾದರೂ ಸಾಧಿಸುತ್ತೇನೆಂಬ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಛಲವಿದ್ದರೆ ಯಾವುದೇ ಸೌಲಭ್ಯವಿಲ್ಲದೆಯೂ ಸಾಧನೆ ಮಾಡಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟ ರಮೇಶ್ ಕನಸೆಲ್ಲವೂ ನನಸಾಗಲೆಂದು ಹಾರೈಸೋಣ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top