fbpx
ಸಮಾಚಾರ

ಚುನಾವಣಾ ಫಲಿತಾಂಶ: ಮೇ 23ರಂದು ಮಂಡ್ಯ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ!

ಲೋಕಸಭಾ ಚುನಾವಣಾ ಫಲಿತಾಂಶ ಹಿನ್ನಲೆಯಲ್ಲಿ ಮೇ 23ರಂದು ಮಂಡ್ಯ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ತಿಳಿಸಿದ್ದಾರೆ. ಸಾಮಾನ್ಯವಾಗಿ ಚುನಾವಣಾ ಮತ ಎಣಿಕೆಯ ಸುತ್ತ-ಮುತ್ತ ಮಾತ್ರ ನಿಷೇಧಾಜ್ಞೆ ಇರುತ್ತದೆ, ಆದರೆ ಮಂಡ್ಯ ಅತಿ ಸೂಕ್ಷ್ಮ ಪ್ರದೇಶವಾದ್ದರಿಂದ ಫಲಿತಾಂಶದ ದಿನ (ಮೇ 23) ರಂದು ಮಂಡ್ಯ ನಗರ ಸೇರಿ ಲೋಕಸಭೆ ಕ್ಷೇತ್ರದ ಪ್ರಮುಖ ನಗರ, ಪಟ್ಟಣ ಹಾಗೂ ಇನ್ನೂ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಮೇ 23ರ ಬೆಳಗ್ಗೆ 6 ಗಂಟೆಯಿಂದ 24ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಮತ ಎಣಿಕೆ ದಿನ ಗೆದ್ದ ಅಭ್ಯರ್ಥಿಗಳು ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗುವುದು. ಸೋತ ಅಭ್ಯರ್ಥಿಗಳ ಮುಂದೆ ಘೋಷಣೆ ಕೂಗಿ ಪಟಾಕಿ ಸಿಡಿಸುವುದರಿಂದ ಪ್ರಚೋದನೆಗೆ ಒಳಗಾಗಿ ಅಶಾಂತಿ ಮೂಡಿಸುವ, ಹಲ್ಲೆ ಮಾಡುವ, ಮನೆಗಳ ಮೇಲೆ ಕಲ್ಲು ತೂರುವ ಹಾಗೂ ಬೆಂಕಿ ಹಚ್ಚುವ ಸಾಧ್ಯತೆ ಇರುತ್ತದೆ. ಹಾಗಾಗಿ ಅದನ್ನು ತಡೆಗಟ್ಟಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಿಆರ್‌ಪಿಸಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಮತ ಎಣಿಕೆ ನಡೆಯುವ ಕೇಂದ್ರ, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಟ್ಟಣ, ಗ್ರಾಮಗಳಲ್ಲಿ ಯಾವುದೇ ವಿಜಯೋತ್ಸವ, ಮೆರವಣಿಗೆ ನಡೆಸುವಂತಿಲ್ಲ. ಧ್ವನಿವರ್ದಕ ಬಳಸಿ ಪ್ರಚೋದನಾಕಾರಿ ಹಾಡು ಹಾಕುವಂತಿಲ್ಲ. ಯಾವುದೇ ವ್ಯಕ್ತಿಯ ಪ್ರತಿಕೃತಿ ದಹನ ಮಾಡುವಂತಿಲ್ಲ ಎಂದು ಆದೇಶಿಸಿದ್ದಾರೆ. ‘ಮತ ಎಣಿಕೆಗೆ ಸಕಲ ಭದ್ರತೆ ಕೈಗೊಳ್ಳಲಾಗಿದೆ. ಬಿಎಸ್‌ಎಫ್‌ ಯೋಧರ ತುಕಡಿ ಎಣಿಕೆ ಕೇಂದ್ರದ ಸುತ್ತ ಭದ್ರತೆ ಕೈಗೊಳ್ಳಲಿದೆ’ ಎಂದು ಜಿಲ್ಲಾಧಿಕಾರಿ ಪಿ.ಸಿ.ಜಾಫರ್‌ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top