fbpx
ಸಮಾಚಾರ

ರಾಮಯಾಣವನ್ನು ನೆನಪಿಸುವ ಪಂಚಮುಖವನ್ನು ಹೊಂದಿರುವ 11 ಅಡಿ ಎತ್ತರದ ಏಕಶಿಲಾ ವಿಗ್ರಹವಿರುವ ಹನುಮಗಿರಿ ಕ್ಷೇತ್ರ.

ಭಾರತದ ಸನಾತನ ಸಂಸ್ಕೃತಿಯನ್ನು ಸಾರುವ ಪುರಾಣ ಕಾವ್ಯ ರಾಮಾಯಣ. ಎಲ್ಲಿ ರಾಮನೋ ಅಲ್ಲಿ ಹನುಮನು ಇರುತ್ತಾನೆ. ಎಲ್ಲಿ ಹನುಮನೋ ಅಲ್ಲಿ ರಾಮನು ಇರುತ್ತಾನೆ. ಅವರಿಬ್ಬರದ್ದು ಅವಿನಾಭಾವ ಸಂಬಂಧ.ರಾಮ ಹನುಮನ ಮಹಿಮೆಯನ್ನು ಸಾರುವ ರಾಮಾಯಣದ ಪ್ರಮುಖ ಸನ್ನಿವೇಶಗಳನ್ನು ಈ ಕ್ಷೇತ್ರದಲ್ಲಿ ಶಿಲೆಯಲ್ಲಿ ಕೆತ್ತಿದ್ದಾರೆ. ತ್ರೇತಾಯುಗದ ಕಾಲದ ಘಟನೆಗಳನ್ನು ಅಮೃತಶಿಲೆಯಲ್ಲಿ ಸುವರ್ಣ ಅಕ್ಷರದಲ್ಲಿ ವಿವರಿಸಲಾಗಿದೆ. ಈ ಉದ್ಯಾನವನದಲ್ಲಿ ಹೆಜ್ಜೆ ಹಾಕಿದರೆ ಇಡೀ ರಾಮಾಯಣವೇ ಕಣ್ಣ ಮುಂದೆ ಬರುತ್ತದೆ. ರಾಮಾಯಣದ ತತ್ವಾದರ್ಶಗಳನ್ನು ಸಾಮಾನ್ಯ ಜನರಿಗೆ ಅರ್ಥ ಮಾಡಿಸುವುದು ಈ ಕ್ಷೇತ್ರದ ಮುಖ್ಯ ಉದ್ದೇಶ.ಈ ಪುಣ್ಯದಾಯಕ ಪ್ರದೇಶದಲ್ಲಿ ಬಂದು ಉದ್ಯಾನವನವನ್ನು ನಿರ್ಮಿಸಲಾಗಿದ್ದು ಅದನ್ನು ರಾಮಾಯಣದ ಮಾನಸೋದ್ಯಾನ ಎಂದು ಕರೆಯಲಾಗಿದೆ. ಈ ಮನಮೋಹಕವಾದ ಉದ್ಯಾನವನದಲ್ಲಿ ರಾಮಾಯಣದ ಪ್ರಮುಖ ಘಟನೆಗಳಾದ ದಶರಥನ ಪುತ್ರಕಾಮೇಷ್ಠಿ ಯಾಗ, ರಾಮ, ಭರತ, ಲಕ್ಷ್ಮಣ ಹಾಗೂ ಶತ್ರುಘ್ನರ ಜನನ ಸಂರಕ್ಷಣೆ. ಸೀತಾ ಸ್ವಯಂವರ, ಶ್ರೀರಾಮ ಪಟ್ಟಾಭಿಷೇಕ, ಹಾಗೂ ಶ್ರೀರಾಮಾಗಮನ , ಪಾದುಕಾ ಪ್ರಸಂಗ, ವಿರಾಧನ ಶಾಪವಿಮೋಚನೆ, ಶಿರಬಂಗ ವೃತ್ತಾಂತ, ಶೂರ್ಪನಖಿಯ ಗರ್ವ ಬಂಗ, ಮಾಯ ಮೃಗ ಬೇಟೆ, ಸೀತಾಪಹರಣ, ಜಟಾಯು ಮೋಕ್ಷ, ಹನುಮದರ್ಶನ, ಸುಗ್ರೀವ ಸಖ್ಯ, ವಾಲಿಸಂಹಾರ, ಸಮುದ್ರ ಲಂಘನ, ಲಂಕಾದಹನ, ವಿಭೀಷಣ ಶರಣಾಗತಿ, ಸೇತು ಬಂಧನ, ಕುಂಭಕರ್ಣನ ವಧೆ, ಸಂಜೀವಿನಿ ಪ್ರಯೋಗ, ರಾವಣ ಮೋಕ್ಷ, ಸೀತೆಯ ಅಗ್ನಿಪರೀಕ್ಷೆ ಹೀಗೆ ರಾಮಾಯಣದ ಎಲ್ಲ ಘಟನಾವಳಿಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದೆ. ನೋಡುಗರನ್ನು ಒಂದು ಕ್ಷಣ ರಾಮಾಯಣದ ಕಾಲ ಘಟ್ಟಕ್ಕೆ ಕರೆದೊಯ್ಯುತ್ತವೆ.

ಹಾಗೆಯೇ ರಾಮಾಯಣದ ಕಥೆಯನ್ನು ಹೇಳಲು ಹೊರಟರೆ. ಅಲ್ಲಿ ಹನುಮಂತನ ಪ್ರಮುಖ ಪಾತ್ರವಾಗಿರುತ್ತದೆ.ಹೀಗಾಗಿಯೇ ಇವತ್ತಿಗೂ ಭಕ್ತರ ಮನಸ್ಸಿನಲ್ಲಿ ಆಂಜನೇಯ ಅವಿಸ್ಮರಣೀಯವಾಗಿ ಉಳಿದಿರುವುದು. ರಾಮ ಹಾಗೂ ಹನುಮಂತನ ನಡುವಿನ ಸಂಬಂಧದ ಕಾರಣವಾಗಿಯೇ ಇಲ್ಲಿ ಹನುಮನ ಮಾನಸೋದ್ಯಾನ ಇರುವುದನ್ನು ಕಾಣಬಹುದು. ಅದು ಕೂಡ ಏಕ ಶಿಲೆಯಿಂದ ಕೆತ್ತಲ್ಪಟ್ಟಿದೆ.ಇಲ್ಲಿ ಆಂಜನೇಯನ ಜನನದಿಂದ ಹಿಡಿದು ಆ ಶಕ್ತಿವಂತರ ಜೀವನದ ಚರಿತ್ರೆಯನ್ನು ಶಿಲ್ಪ ಕಲೆಯ ಮೂಲಕ ಸುಂದರವಾಗಿ ವರ್ಣಿಸಲಾಗಿದೆ. ಈ ಮಾನಸೋದ್ಯಾನದಲ್ಲಿ ಇರುವ ಹನುಮಂತ ರಾಮಚಂದ್ರನನ್ನು ಭಕ್ತಿ ಪರವಶರಾಗಿ ಭಜಿಸುವ ಕೆತ್ತನೆಗಳನ್ನು ಭಾವಪರವಶವಾಗಿವೆ. ಬೇರೆಲ್ಲೂ ಕಾಣಸಿಗದ ಈ ವಿಶಿಷ್ಟ ಶಿಲೆಗಳು ರಾತ್ರಿಯ ವೇಳೆ ದೀಪದ ಬೆಳಕಿನಲ್ಲಿ ಅಲಂಕೃತಗೊಂಡು ಸುಂದರವಾಗಿ ಕಂಗೊಳಿಸುತ್ತಿವೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳುವುದಕ್ಕೆ ಎಂದೇ ಸಹಸ್ರಾರು ಜನ ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ.

ತ್ರೇತಾಯುಗದಲ್ಲಿ ಶ್ರೀರಾಮ ಮತ್ತು ರಾವಣ ಇವರಿಬ್ಬರ ನಡುವೆ ಯುದ್ಧವಾಗುತ್ತದೆ. ಆ ವೇಳೆ ರಾಮನ ಪರಮಭಕ್ತ ಆಂಜನೇಯ ಶ್ರೀರಾಮನನ್ನು ರಕ್ಷಿಸುವುದಕ್ಕೆ ಮುಂದಾಗುತ್ತಾನೆ. ಹೀಗಿರುವಾಗ ರಾವಣ ರಾಮನನ್ನು ಸೋಲಿಸಬೇಕು ಎಂದು ಪಾತಾಳದ ರಾಜನಾಗಿದ್ದ ಅಹಿರಾವಣನ ಸಹಾಯವನ್ನು ಕೇಳುತ್ತಾನೆ. ಅದಕ್ಕೆ ಒಪ್ಪಿದ್ದ ಅಹಿರಾವಣ ರಾವಣನ ತಮ್ಮನಾದ ವಿಭೀಷಣ ರೂಪ ತಳೆದು ರಾಮಲಕ್ಷ್ಮಣರು ವಿಶ್ರಮಿಸಿದ ಸ್ಥಳಕ್ಕೆ ಬರುತ್ತಾನೆ. ಆದರೆ ಅಲ್ಲಿ ರಾಮನ ಸಹಾಯಕ್ಕೆ ನಿಂತ ಆಂಜನೇಯನನ್ನು ನೋಡಿ ಅಹಿರಾವಣ ರಾಮ ಲಕ್ಷ್ಮಣರನ್ನು ರಕ್ಷಿಸುವುದಕ್ಕೆ ಬಂದಿರುವ ಹಾಗೆ ಹೇಳಿ ರಾಮ ಲಕ್ಷ್ಮಣರನ್ನು ಮೋಸದಿಂದ ಕರೆತಂದು ಪಾತಾಳದಲ್ಲಿ ಬಚ್ಚಿಡುತ್ತಾನೆ. ಇದಾದ ನಂತರ ನಿಜರೂಪವಾದ ವಿಭೀಷಣ ಈ ಸ್ಥಳಕ್ಕೆ ಬರುತ್ತಾನೆ. ರಾವಣ ಮಾಡಿದ ಮೋಸ ಆಂಜನೇಯನಿಗೆ ತಿಳಿಯುತ್ತದೆ. ಆ ಕ್ಷಣವೇ ಆಂಜನೇಯ ಪಾತಾಳಕ್ಕೆ ಹೋಗಿ ರಾವಣನನ್ನು ಸಂಹರಿಸಿ, ರಾಮ ಲಕ್ಷ್ಮಣರನ್ನು ರಕ್ಷಿಸಿ ಕರೆತರುವುದಾಗಿ ವಿಭೀಷಣನಿಗೆ ಶಪಥಮಾಡಿ ಹೊರಡುತ್ತಾನೆ. ಹೀಗೆ ತೆರಳಿದ ಹನುಮಂತ ಅಹಿ ರಾವಣನನ್ನು ಕೊಲ್ಲಲು ಮುಂದಾಗುತ್ತಾನೆ. ಆಗ ತನ್ನ ಒಡೆಯ ರಾಮನನ್ನು ಮನಸ್ಸಿನಲ್ಲಿ ಭಕ್ತಿಯಿಂದ ನೆನೆದು ಪೂರ್ವಕ್ಕೆ ಮುಖ ಮಾಡಿ ದಕ್ಷಿಣಾಭಿಮುಖವಾಗಿ ನರಸಿಂಹನ ಮುಖವನ್ನು, ಪಶ್ಚಿಮಾಭಿಮುಖವಾಗಿ ಗರುಡನ ಮುಖವನ್ನು, ಉತ್ತರಾಭಿಮುಖವಾಗಿ ವರಾಹನ ಮುಖವನ್ನು, ಮೇಲ್ಮುಖವಾಗಿ ಹಯಗ್ರೀವ ಮುಖವನ್ನು ಪಡೆದು ಏಕಕಾಲಕ್ಕೆ ಆಹಿ ರಾವಣನನ್ನು ಸಂಹರಿಸಿ ರಾಮ ಲಕ್ಷ್ಮಣರನ್ನು ರಕ್ಷಿಸಿ ಕರೆತರುತ್ತಾನೆ. ರಾಮ ಲಕ್ಷ್ಮಣರನ್ನು ರಕ್ಷಿಸುವ ಸಲುವಾಗಿಯೇ ಆಂಜನೇಯ ಪಂಚಮುಖವಾಗಿ ಅವತರಿಸಿದ ಎನ್ನುತ್ತವೆ ಪುರಾಣಗಳು. ಕೊನೆಯದಾಗಿ ಹಯಗ್ರೀವ ಈ ಮುಖವು ಸಂಬಂಧ, ಜ್ಞಾನ ಮತ್ತು ಸಂತತಿ ವಿಷಯಗಳಿಗೆ ಸಂಬಂಧಿಸಿದ್ದಾಗಿದ್ದು, ಪಂಚಮುಖಿ ಮಾರುತಿಯು ಒಂದು ರೀತಿಯಲ್ಲಿ ಮಾನವನ ಜೀವನದ ಪ್ರತಿಯೊಂದು ಘಟ್ಟಗಳನ್ನು ಪ್ರತಿನಿಧಿಸುತ್ತದೆ. ಮನುಷ್ಯನ ಜೀವನದ ಆಗುಹೋಗುಗಳಿಗೆಲ್ಲಾ ಈ ಸ್ವಾಮಿಯ ಕೃಪೆ ಇರಲೇಬೇಕು.

ಪರಶುರಾಮ ಸೃಷ್ಟಿಸಿದ ಕರಾವಳಿ ಪ್ರದೇಶವೇ ಈ ದಕ್ಷಿಣ ಕನ್ನಡ ಜಿಲ್ಲೆ. ಇದೇ ಪ್ರದೇಶದ ಪುತ್ತೂರು ತಾಲ್ಲೂಕಿನ ಈಶ್ವರಮಂಗಲ ಎಂಬಲ್ಲಿದೆ ಪಂಚಮುಖಿ ಆಂಜನೇಯ ಸ್ವಾಮಿಯ ಸುಂದರವಾದ ದೇಗುಲ. ವಿಶೇಷ ಎಂದರೆ ಇಲ್ಲಿ ನೆಲೆ ನಿಂತಿರುವ ವಾಯು ಪುತ್ರನಿಗೆ ದೇವಾಲಯವೇ ಇಲ್ಲ. ಬಯಲಿನಲ್ಲೇ ನಿತ್ಯ ಆರಾಧಿಸಲ್ಪಡುತ್ತಿರುವ ಮಾರುತಿ. ಇವನು ಬಯಲಿನಲ್ಲೇ ನಿತ್ಯ ಆರಾಧಿಸಲ್ಪಡುತ್ತಿರುವ ಮಹಿಮಾನ್ವಿತ. ಜೀವನವು ಈ ಸ್ವಾಮಿಯ ದರ್ಶನಕ್ಕೆ ನಿತ್ಯ ಸಹಸ್ರಾರು ಭಕ್ತರು ಇಲ್ಲಿಗೆ ಬಂದು ಹೋಗುತ್ತಾರೆ. ಈ ಕ್ಷೇತ್ರದಲ್ಲಿ ವಿರಾಜಮಾನವಾಗಿರುವ ಹನ್ನೊಂದು ಅಡಿ ಎತ್ತರದ ಶ್ರೇಷ್ಠ ಶಿಲೆಯಲ್ಲಿ ಕೆತ್ತಿರುವ 11 ಅಡಿಯ ಏಕಶಿಲಾ ವಿಗ್ರಹ ಭಕ್ತರನ್ನು ಭಕ್ತಿಭಾವದಲ್ಲಿ ಮಿಂದೇಳಿಸುತ್ತದೆ. ಪಶ್ಚಿಮಘಟ್ಟದ ಸಾಲುಗಳ ಬಳಿ ಇರುವ ಇತಿಹಾಸ ಪ್ರಸಿದ್ಧ ತಾಣವಿದು. ಈ ಕ್ಷೇತ್ರ ಬಹಳ ವಿಶೇಷತೆಯಿಂದ ಕೂಡಿದ್ದು ಮಳೆಗಾಲ , ಬೇಸಿಗೆಕಾಲ ಎಂಬ ಭೇದವಿಲ್ಲದೆ ಜನಸಾಗರದಿಂದ ತುಂಬಿ ತುಳುಕುತ್ತಿರುತ್ತದೆ.

ಇಲ್ಲಿ ಹಚ್ಚ ಹಸಿರಾದ ಹುಲ್ಲು ಪುಷ್ಪ ಸಮೃದ್ಧವಾದ ಗಿಡ ಬಳ್ಳಿಗಳು ಅವುಗಳ ನಡುವೆ ಮುಂದೆ ಸಾಗುವ ಕಾಲುದಾರಿ ಮೈ ಮನವನ್ನು ಪುಳಕಗೊಳಿಸುತ್ತದೆ.ಮೆಟ್ಟಿಲುಗನ್ನು ಏರಿಕೊಂಡು ಈ ಕ್ಷೇತ್ರದಲ್ಲಿನ ದೇವರನ್ನು ದರ್ಶನ ಮಾಡುವುದೇ ಒಂದು ಸುಂದರ ಅನುಭವ. ನಿಜಕ್ಕೂ ಪಂಚಮುಖಿ ಆಂಜನೇಯನ ವಿಗ್ರಹವೂ ಭಕ್ತರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಈ ಕ್ಷೇತ್ರಕ್ಕೆ ಯಾತ್ರೆ ಕೈಗೊಳ್ಳುವ ಭಕ್ತರಿಗೆ ವಿಶ್ರಾಂತಿ ಪಡೆಯಲು ಮತ್ತು ಧಾರ್ಮಿಕ ವಿಧಿಗಳನ್ನು ನೆರವೇರಿಸಲು ಸ್ವಾಮಿಯ ಪಕ್ಕದಲ್ಲೇ ನರಸಿಂಹ ಮಂಟಪವಿದೆ. ಇಲ್ಲಿ ವಿಶೇಷ ದಿನಗಳಲ್ಲಿ ಹೋಮ, ಹವನಗಳು ನಡೆಯುತ್ತವೆ.ಈ ಕ್ಷೇತ್ರದ ಇನ್ನೊಂದು ವಿಶೇಷತೆಯೆಂದರೆ ಇಲ್ಲಿ ಶನಿ ದೋಷ ನಿವಾರಣೆಗೆ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತದೆ. ಆ ದೋಷ ನಿವಾರಣೆಗೆ ಮುಖ್ಯಪ್ರಾಣ ಪೂಜೆ ಎನ್ನುವ ವಿಶೇಷವಾದ ಸೇವೆಯನ್ನು ಆಂಜನೇಯನಿಗೆ ಸಲ್ಲಿಸಲಾಗುತ್ತದೆ. ಈ ಪೂಜೆಯನ್ನು ಕೈಗೊಂಡ ಕೆಲವೇ ದಿನಗಳಲ್ಲಿ ಸಕಲ ದೋಷಗಳು ನಿವಾರಣೆಯಾಗುತ್ತವೆ ಎನ್ನುವ ನಂಬಿಕೆ ಇದೆ.

ಹಾಗೆಯೇ ನಿತ್ಯವೂ ಇಲ್ಲಿ ವಿರಾಜಮಾನವಾಗಿರುವ ಹನುಮಂತನಿಗೆ ವಿಶೇಷ ಪೂಜೆಗಳು ಸಲ್ಲುತ್ತವೆ. ಆ ಸಂದರ್ಭದಲ್ಲಿ ಸ್ವಾಮಿಯನ್ನು ನೋಡುವುದೇ ಪರಮೋಚ್ಚ ಭಾಗ್ಯ.ಅಷ್ಟೇ ಅಲ್ಲದೆ ರಾಮನವಮಿ, ಚೈತ್ರ ಪೌರ್ಣಮಿ, ನವರಾತ್ರಿಯಲ್ಲಿ ಈ ದೇವಾಲಯದಲ್ಲಿ ವಿಶೇಷ ಉತ್ಸವಗಳು ಜರುಗುತ್ತವೆ. ಆ ವಿಜೃಂಭಣೆಯ ಉತ್ಸವಗಳಲ್ಲಿ ಪಾಲ್ಗೊಂಡ ಭಕ್ತರು ಭಕ್ತಿ ಪರಾಕಾಷ್ಟೆಯನ್ನು ಹೊಂದುತ್ತಾರೆ. ಆಂಜನೇಯ ಸ್ಥಿತವಾಗಿರುವ ಈ ದೇವಾಲಯ ಭಕ್ತರ ಸಂಕಷ್ಟಗಳನ್ನು ನಿವಾರಿಸುತ್ತಾ ಅವರ ಬಾಳನ್ನು ಬೆಳಗುತ್ತಿರುವ ಮಹಿಮಾನ್ವಿತ ಕ್ಷೇತ್ರ. ವಿವಾಹ, ಸಂತಾನ ಭಾಗ್ಯ ಹೀಗೆ ನಾನಾ ಕೋರಿಕೆಗಳನ್ನು ಹೊತ್ತು ಭಕ್ತರು ವಾಯುಪುತ್ರನ ಬಳಿ ಬರುತ್ತಾರೆ. ಹೀಗೆ ಬಂದವರಲ್ಲಿ ಒಳಿತನ್ನು ಕಂಡವರು ಅದೆಷ್ಟೋ ಮಂದಿ ಇದ್ದಾರೆ.ಅಂದು ಹನುಮಂತ ತನ್ನ ಮಗನನ್ನು ರಕ್ಷಿಸಲು ನಿಂತಿದ್ದ ಆದರೆ ಹನುಮ ಇಂದು ತನ್ನ ಭಕ್ತರನ್ನು ಕಾಯುತ್ತಾ ಇದರಲ್ಲಿ ಪೂಜಿಸಲ್ಪಡುತ್ತಿದ್ದಾನೆ.

ನಿಷ್ಠೆ ಪ್ರಾಮಾಣಿಕತೆ ನಿಷ್ಕಲ್ಮಶವಾದ ಭಕ್ತಿ ವೀರಪ್ರತಾಪಕ್ಕೆ ಹೆಸರು ವಾಸಿಯಾಗಿರುವ ಆಂಜನೇಯ ಒಬ್ಬನೇ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲ ಎನ್ನುವ ಸ್ಥಳದಲ್ಲಿ ಪಂಚಮುಖಿ ಆಂಜನೇಯನ ಕ್ಷೇತ್ರವಿದೆ. ಬೆಂಗಳೂರಿನಿಂದ ಪುತ್ತೂರಿಗೆ ಸುಮಾರು 309 ಕಿಲೋಮೀಟರ್ ಅಂತರವಿದೆ. ಇಲ್ಲಿಂದ ಹನುಮಗಿರಿಗೆ ಸುಮಾರು 23 ಕಿಲೋಮೀಟರ್ ಅಂತರವಿದೆ. ಅತಿ ಹತ್ತಿರದಲ್ಲಿರುವ ವಿಮಾನ ನಿಲ್ದಾಣವೆಂದರೆ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣ. ಇದು ಕ್ಷೇತ್ರದಿಂದ ಸುಮಾರು 21 ಕಿಲೋ ಮೀಟರ್ ದೂರದಲ್ಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top