fbpx
ಸಮಾಚಾರ

“ನಾನೂ ಕೂಡ ಹೆಮ್ಮೆಯ ಕನ್ನಡಿಗ” ವಿದಾಯದ ವೇಳೆ ಕರ್ನಾಟಕ ಮತ್ತು ಕನ್ನಡಿಗರನ್ನು ಹಾಡಿ ಹೊಗಳಿದ ಅಣ್ಣಾಮಲೈ.

ಧಕ್ಷ, ಪ್ರಾಮಾಣಿಕ, ಖಡಕ್​ ಐಪಿಎಸ್​ ಅಧಿಕಾರಿ ಎಂದೇ ಖ್ಯಾತರಾಗಿರುವ ಅಣ್ಣಾಮಲೈ ಕಡೆಗೂ ತಾವು ನಿರ್ಧರಿಸಿದಂತೆಯೇ ನಾಗರಿಕ ಸೇವೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಬೆಳಗ್ಗೆ ಪತ್ರಮುಖೇನ ರಾಜ್ಯ ಪೊಲೀಸ್​ ಮಹಾ ನಿರ್ದೇಶಕಿ ನೀಲ್ಮಣಿ ಎನ್​ ರಾಜು ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಈ ಮೂಲಕ ಹತ್ತು ವರ್ಷಗಳ ಪ್ರಾಮಾಣಿಕ ಸೇವೆಗೆ ಅಣ್ಣಾಮಲೈ ಅಂತಿಮ ವಿದಾಯ ಹೇಳಿದ್ದಾರೆ.

ರಾಜೀನಾಮೆ ನೀಡಿದ ನಂತರ, ಕರ್ನಾಟಕ, ಕರ್ನಾಟಕದ ಜನರ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ ಅಣ್ಣಾಮಲೈ, ಇಲ್ಲಿ ತುಂಬಾ ಒಳ್ಳೆಯ ಜನಗಳಿದ್ದಾರೆ. ನನಗೆ ಸಂತೋಷ ಇದೆ. ಯಾವುದೇ ರಾಜಕೀಯ ವ್ಯಕ್ತಿಗಳಿಂದ ಒತ್ತಡ ಇಲ್ಲ. ನನಗೆ ಯಾವುದೇ ಒತ್ತಡ ಇಲ್ಲ. ನನ್ನ ರಾಜೀನಾಮೆ ವಿಷಯ ಹೊರಬಂದ ತಕ್ಷಣ ಹಲವು ಕರೆಗಳು ಬರುತ್ತಿವೆ. ಇಲ್ಲಿನ ರಾಜಕೀಯ ಪಕ್ಷಗಳ ನಾಯಕರು ಕೂಡ ಕರೆ ಮಾಡಿದರು. ಎಲ್ಲಾ ಪಾರ್ಟಿಯ ಹಲವು ಪ್ರಮುಖರು ಕರೆ ಮಾಡಿ ಮಾತನಾಡಿದರು. ನಿಮಗೆ ಏನಾದ್ರು ಸಮಸ್ಯೆ ಇದ್ದರೆ ಹೇಳಿ, ಪೋಸ್ಟಿಂಗ್ ಎಲ್ಲಿಗೆ ಬೇಕಾದ್ರು ಕೇಳಿ, ನೀವು ಕರ್ತವ್ಯದಲ್ಲಿ ಮುಂದುವರಿಯಿರಿ ಎಂದು ಸಲಹೆ ನೀಡಿದರು. ನಿಜಕ್ಕೂ ನನಗೆ ಎಲ್ಲರ ಮಾತು ಕೇಳಿ ಸಂತಸ ತಂದಿದೆ. ಆದರೂ ನಾನು ರಾಜೀನಾಮೆ ನೀಡುವುದು ಖಚಿತ. ನನ್ನ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ಇದು ನನ್ನ ಸ್ವಂತ ನಿರ್ಧಾರ. ನಾನು ಜನರಿಗಾಗಿ ಕೆಲಸ ಮಾಡಿದ್ದೇನೆ. ಜನ ನನಗೆ ಒಳ್ಳೆಯ ಮರ್ಯಾದೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಕರ್ನಾಟಕದ ಜನರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಇಲ್ಲಿನ ಜನ ಬಹಳ ಒಳ್ಳೆಯವರು. ಹೊರರಾಜ್ಯದವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ನನಗೆ ಭಾಷೆ ಬರದೆ ಇರುವ ಸಂದರ್ಭದಲ್ಲೂ ನನ್ನನ್ನು ನಮ್ಮವನು ಎಂದೇ ನೋಡಿದ್ದರು. ನಾನು ಬರುವಾಗ ಕೈಯಲ್ಲಿ 2 ಬ್ಯಾಗ್ ಹಿಡಿದು ಉಡುಪಿ ಬಸ್ ಸ್ಟ್ಯಾಂಡ್ ನಲ್ಲಿ ನಿಂತಿದ್ದೆ. ಅಲ್ಲಿಂದ ಇಲ್ಲಿಯವರೆಗೂ ನನ್ನನ್ನು ಕರ್ನಾಟಕದ ಜನ ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ನಮ್ಮ ಇಲಾಖೆಯಲ್ಲಿ ಒಳ್ಳೆಯ ಅಧಿಕಾರಿಗಳಿದ್ದಾರೆ. ನಾನು ಹೊರ ರಾಜ್ಯದವನಾದರೂ ನಾನು ಕೂಡ ಹೆಮ್ಮೆಯ ಕನ್ನಡಿಗ ಎಂದು ಹೇಳಿಕೊಳ್ಳಲು ಬಯಸುತ್ತೇನೆ” ಎಂದು ರಾಜೀನಾಮೆ ಸಮಯದಲ್ಲಿ ಕರ್ನಾಟಕವನ್ನು ಹಾಡಿ ಹೊಗಳಿದರು.

2011ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ ಅವರು ಕಾರ್ಕಳ, ಚಿಕ್ಕಮಗಳೂರು ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಅಣ್ಣಾಮಲೈ ಅವರ ರಾಜೀನಾಮೆ ಬಗ್ಗೆ ಸೋಮವಾರ ರಾತ್ರಿಯಿಂದ ಸುದ್ದಿ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಬರುತ್ತಿದ್ದಂತೆ, ಅಭಿಮಾನಿಗಳು ಅಣ್ಣಾಮಲೈ ಕಚೇರಿಯತ್ತ ಧಾವಿಸಿ, ರಾಜೀನಾಮೆ ನೀಡದಂತೆ ಒತ್ತಾಯಿಸುತ್ತಿದ್ದರು. ಕೊಯಮತ್ತೂರು ಮೂಲದವರಾದ ಅಣ್ಣಾಮಲೈ ಅವರು ಪೊಲೀಸ್ ಹುದ್ದೆ ತೊರೆದ ಬಳಿಕ ಸ್ವಗ್ರಾಮಕ್ಕೆ ತೆರಳಲಿದ್ದಾರಂತೆ.

ಇತ್ತೀಚೆಗೆ ಅಣ್ಣಾಮಲೈ ರಾಜಕೀಯ ಪ್ರವೇಶ ಮಾಡಲಿದ್ದಾರೆ. ಹೀಗಾಗಿ ರಾಜೀನಾಮೆ ನೀಡ್ತಾರೆ ಅಂತ ಸುದ್ದಿಯಾಗಿತ್ತು. ಆದ್ರೆ ಅಣ್ಣಾಮಲೈ ಈಗ ಪತ್ರದ ಮೂಲಕ ತಮ್ಮ ರಾಜೀನಾಮೆಗೆ ಫ್ಯಾಮಿಲಿ, ತಂದೆ-ತಾಯಿ ಹಾಗೂ ವೈಯಕ್ತಿಕ ಜೀವನದ ಕಾರಣ ಕೊಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top