fbpx
ಸಮಾಚಾರ

ಹನುಮಂತ ಜನಿಸಿದ ಅಂಜನಾದ್ರಿ ಪರ್ವತದ ಬಗ್ಗೆ ನಿಮಗೆಷ್ಟು ಗೊತ್ತು.

ಹನುಮಂತನ ಜನನವದಂತಹ ಅಂಜನಾದ್ರಿ ಪರ್ವತ ಮಹಿಮೆ ,ಈ ಪರ್ವತದಲ್ಲಿ ಅಡಗಿದೆ ಬೆಚ್ಚಿಬೀಳಿಸೋ ಅನೇಕ ರಹಸ್ಯ
ಅಂಜನಾದ್ರಿ ಪರ್ವತ ವೀರ, ಶೂರ ಪರಾಕ್ರಮಿ ಎಂದೆಲ್ಲಾ ಕರೆಸಿಕೊಳ್ಳುವ ಹನುಮ ಜನಿಸಿದ ಪಾವನ ಭೂಮಿ. ಇದು ಬರೀ ಊರಲ್ಲ, ಪ್ರವಾಸಿಗರಿಗೆ ನೋಡಿದಷ್ಟು ಮುಗಿಯದ ವಿಸ್ಮಯಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಬಂಡಾರ. ಗತಕಾಲದ ವೈಭವಗಳನ್ನು ಅಡಗಿಸಿಟ್ಟು ಕೊಂಡಿರುವ ಮತ್ತು ಹಲವು ನಂಬಿಕೆಗಳ , ಪೌರಾಣಿಕ ಘಟನೆಗಳನ್ನು ಮತ್ತು ಆಧ್ಯಾತ್ಮದ ಹುಡುಕಾಟದಲ್ಲಿರುವವರಿಗೆ ಶಾಂತಿಯ ತೋಟ. ಪ್ರಾಕೃತಿಕ ಸಿರಿವಂತಿಕೆಯ ತವರು ಅಂಜನಾದ್ರಿ ಬೆಟ್ಟ. ಈ ಪ್ರದೇಶದ ಹತ್ತಿರ ಸಮೀಪಿಸುತ್ತಿದ್ದಂತೆ ಮೊದಲು ನಮ್ಮ ಕಣ್ಣಿಗೆ ಕಾಣಿಸುವುದು ಹಚ್ಚ ಹಸಿರಿನಿಂದ ಸೊಂಪಾಗಿ ಬೆಳೆದು ನಿಂತಿರುವ ಗಿಡಮರಗಳು. ಜುಳುಜುಳು ಜೈಂಕಾರ ಹರಿಯುತ್ತಿರುವ ತುಂಗಭದ್ರಾ ನದಿ , ಈ ಪವಿತ್ರ ನದಿಯ ತಟದಲ್ಲಿ ತಲೆಯೆತ್ತಿ ನಿಂತಿದೆ ಅಂಜನಾದ್ರಿ ಪರ್ವತ. ನಿಜಕ್ಕೂ ಇಲ್ಲಿನ ಪರ್ವತ ಶ್ರೇಣಿಯನ್ನು ಕಾಣುವುದೇ ನಯನ ಮನೋಹರ.ಈ ಬೆಟ್ಟಗಳ ಸಾಲನ್ನು ನೋಡುತ್ತಾ ಹೋದರೆ ನಮಗೆ ಕಾಣಿಸುವುದು ಹೇಮಕೂಟ ಪರ್ವತ. ಮಾತಂಗ ಪರ್ವತ, ಋಶ್ಯಮೂಕ ಪರ್ವತ ಮತ್ತು ಅಂಜನಾದ್ರಿ ಪರ್ವತ.ಅಂಜನಾದ್ರಿ ಬೆಟ್ಟ ನಮ್ಮ ಕರುನಾಡಿನಲ್ಲಿ ಇದೆ ಎಂದು ಹೇಳುವುದೇ ನಮಗೊಂದು ಹೆಮ್ಮೆಯಾಗುತ್ತದೆ. ಇದುವೇ ಶಕ್ತಿವಂತ ಈ ಭೂಮಿಗೆ ಮೊದಲ ಬಾರಿಗೆ ಕಾಲಿಟ್ಟ ಪವಿತ್ರ ತಾಣ.

 

 

ಅಂದಿನಿಂದ ಇಂದಿನವರೆಗೂ ಈ ಪರ್ವತ ತನ್ನ ಪಾವಿತ್ರ್ಯತೆಯನ್ನು ಉಳಿಸಿ ಕೊಂಡು ಬಂದಿದೆ. ಜನ ಈ ಪರ್ವತವನ್ನು ಧಾರ್ಮಿಕ ತಾಣ ಎಂದು ನಂಬಿ ಸಾಗರೋಪಾದಿಯಲ್ಲಿ ಬರುತ್ತಾರೆ. ಆದರೆ ಈ ಪರ್ವತವನ್ನು ಏರುವುದು ಅಷ್ಟೇನೂ ಸುಲಭವಲ್ಲ. ಸಮುದ್ರ ಮಟ್ಟದಿಂದ ಸುಮಾರು 600 ಮೀಟರ್ ಎತ್ತರದಲ್ಲಿದೆ. ಈ ಬೆಟ್ಟಕ್ಕೆ ಪ್ರವೇಶಿಸುತ್ತಿದ್ದಂತೆ ನಮ್ಮನ್ನು ಸ್ವಾಗತಿಸುವುದು ಒಂದು ಸುಂದರವಾದ ಮಹಾದ್ವಾರ. ದ್ವಾರದಲ್ಲಿ ಅಂಜನಾದೇವಿ ತನ್ನ ಪ್ರಿಯಪುತ್ರ ಹನುಮನೊಂದಿಗೆ ಇರುವ ದೃಶ್ಯವನ್ನು ಕಾಣಬಹುದು. ಈ ಮಹಾದ್ವಾರವನ್ನು ಸಾಗಿದರೆ ಎದುರಾಗುತ್ತದೆ ನೂರಾರು ಕಲ್ಲಿನ ಮೆಟ್ಟಿಲುಗಳು. ಮನಸ್ಸಿನಲ್ಲಿ ಶ್ರೀ ರಾಮನ ನಾಮಸ್ಮರಣೆಯನ್ನು ಮಾಡುತ್ತಾ ಈ ಬೆಟ್ಟವನ್ನು ಎರುತ್ತಾರೆ ಭಕ್ತರು .ಕಷ್ಟಪಟ್ಟು ಅಷ್ಟೊಂದು ಮೆಟ್ಟಿಲುಗಳನ್ನು ಹತ್ತಿದರೆ ನಮಗೆ ದರ್ಶನ ಸಿಗುವುದು ಆಂಜನೇಯನ ಸುಂದರ ವಿಗ್ರಹ. ಇಲ್ಲಿ ಈ ಸ್ವಾಮಿಯನ್ನು ನೋಡುತ್ತಿದ್ದಂತೆ ಬೆಟ್ಟ ಹತ್ತಿ ಬಂದ ಭಕ್ತರ ಆಯಾಸವೆಲ್ಲ ಕ್ಷಣಮಾತ್ರದಲ್ಲಿ ದೂರವಾಗುತ್ತದೆ. ಅದಕ್ಕೆ ಕಾರಣ ಇಲ್ಲಿ ನೆಲೆಸಿರುವ ಭಗವಂತನ ಶಕ್ತಿ.

ಹಾಗೆಯೇ ಅರಸಿ ಬರುವವರಿಗೆ ಆತನ ಮೇಲೆಯೂ ಅಪಾರವಾದ ಭಕ್ತಿಯಿದೆ. ಈ ಕ್ಷೇತ್ರವನ್ನು ಮೊದಲ ಬಾರಿ ಹತ್ತುವಾಗ ಸುತ್ತಮುತ್ತಲಿನ ಪ್ರದೇಶ ಹಚ್ಚ ಹಸಿರಿನಿಂದ ಕಣ್ಮನ ಸೆಳೆಯುತ್ತದೆ. ಬೆಟ್ಟ ಹತ್ತಿದ ನಂತರ ಸುತ್ತ ಎತ್ತಕಡೆ ನೋಡಿದರೂ ವಿಶಾಲವಾದ ಬಂಡೆಗಳೇ ಕಾಣಿಸುತ್ತವೆ. ಆ ಪ್ರಕೃತಿ ಸೌಂದರ್ಯದ ಕಣ್ಮನವನ್ನು ಸೆಳೆದರೆ ಅಲ್ಲಿನ ಕೆಲವು ದೃಶ್ಯಗಳು ನಮ್ಮನ್ನು ಅಚ್ಚರಿಗೊಳಿಸುತ್ತವೆ. ಇಷ್ಟೆಲ್ಲಾ ಇರುವ ಈ ಪ್ರದೇಶ ಎಲ್ಲಿದೆ ? ಕರ್ನಾಟಕ ರಾಜ್ಯ ಕೊಪ್ಪಳ ಜಿಲ್ಲೆಯ,ಕೊಪ್ಪಳ ತಾಲೂಕಿನಲ್ಲಿದೆ ಅಂಜನಾದ್ರಿ ಬೆಟ್ಟ ಪುಣ್ಯಕ್ಷೇತ್ರ. ಇದನ್ನು ಹನುಮನಹಳ್ಳಿ ಅಥವಾ ಆನೆಗುಂದಿ ಎಂದು ಕೂಡ ಕರೆಯುತ್ತಾರೆ. ಇಲ್ಲಿಯೇ ಹನುಮನ ಜನನವಾಗಿದ್ದು.
ವೀರಪುತ್ರ ಹನುಮಂತ ಅಂಜನಾದೇವಿ ಮತ್ತು ವಾನರ ರಾಜ ಕೇಸರಿಯ ಮುದ್ದಿನ ಮಗ. ಹನುಮಂತನ ಬಾಲ್ಯದ ಲೀಲೆಗಳು ತುಂಬಾ ಚೇತೋಹಾರಿಯಾಗಿದೆ. ಚಿಕ್ಕವನಿದ್ದಾಗಲೇ ತನ್ನೊಂದಿಗೆ ಇದ್ದ ಅದೊಂದು ಶಕ್ತಿ ಹನುಮಂತನ ಹೊಸ ಹೊಸ ಸಾಹಸ ಮತ್ತು ರೋಮಾಂಚನ ಕೆಲಸಗಳಿಗೆ ಪ್ರೇರೇಪಿಸಿತು. ಆದರೆ ಅಷ್ಟೊಂದು ಬಲಶಾಲಿಯಾದ ಹನುಮನಿಗೆ ಅಂಜನಾದೇವಿ ಹೇಗೆ ಜನ್ಮ ನೀಡಲು ಸಾಧ್ಯವಾಯಿತು. ಅಲ್ಲಿಯೇ ಇರುವುದು ಕುತೂಹಲ ಮೂಲತಃ ಆಪ್ಸರೆಯಾಗಿದ್ದ ಅಂಜನಾ, ಒಮ್ಮೆ ಋಷಿ ಮುನಿಗಳ ಶಾಪಕ್ಕೆ ಗುರಿಯಾಗಿ ಭೂಮಿಯ ಮೇಲೆ ವಾನರ ಕುಲದಲ್ಲಿ ಜನ್ಮ ತಾಳಬೇಕಾಯಿತು ಹಾಗೆ ಒಂದು ಗಂಡು ಮಗುವಿಗೆ ಜನ್ಮವಿಟ್ಟರೆ ಮಾತ್ರ ಅವಳ ಶಾಪ ವಿಮೋಚನೆ ಯಾಗುವುದು. ಹೀಗಿರುವಾಗಲೇ ಕೇಸರಿಯೊಂದಿಗೆ ಅಂಜನಾದೇವಿಯ ವಿವಾಹವಾಗುತ್ತದೆ. ಗಂಡು ಮಗುವೇ ಆಗಿರಬೇಕು ಅಂತಹ ಶಕ್ತಿಶಾಲಿ ಮತ್ತು ಸಂಪೂರ್ಣ ಬಲಶಾಲಿಯಾಗಿ ಇರಬೇಕು ಎನ್ನುವುದು ಆಕೆಯ ಮಹದಾಸೆಯಾಗಿತ್ತು. ಈ ಕಾರಣದಿಂದಾಗಿಯೇ ಆಕೆ ಅಂತಹ ಪುತ್ರ ಸಂತಾನಕ್ಕಾಗಿ ಶಿವನ ಆರಾಧನೆಯಲ್ಲಿ ತಲ್ಲೀನಳಾಗಿದ್ದಳು.

 

 

ತನಗೆ ಆಗಬೇಕಿದ್ದ ಶಾಪವಿಮೋಚನೆ ಹಾಗೂ ಸಂತಾನ ಪ್ರಾಪ್ತಿಗಾಗಿ ನಿಷ್ಠೆಯಿಂದ ಶಿವನ ಪೂಜೆಗಳನ್ನು ಮಾಡುತ್ತಿದ್ದಳು. ತನಗೆ ಆಗಬೇಕಿದ್ದ ಶಾಪವಿಮೋಚನೆ ಹಾಗೂ ಸಂತಾನ ಪ್ರಾಪ್ತಿಗಾಗಿ ನಿಷ್ಠೆಯಿಂದ ಶಿವನ ಪೂಜಾ ಕೈಂಕರ್ಯಗಳನ್ನು ಮಾಡುತ್ತಿದ್ದ ಅಂಜನಾಳಿಗೆ ಒಂದು ದಿನ ಅವಳ ಇಷ್ಟಾರ್ಥ ಸಿದ್ಧಿಯಾಗುವ ದಿನ ಬಂದೇಬಿಟ್ಟಿತ್ತು. ಈಕೆಯ ಪೂಜೆಗೆ ಒಲಿದ ಮಹಾ ಶಿವ ತನ್ನಷ್ಟೇ ಬಲಶಾಲಿ ಮಹಾಮಹಿಮ, ಮಹಾಯೋಗಿ, ಸರ್ವ ಗುಣ ಸಂಪನ್ನನಾಗಿರುವ ಪುತ್ರನನ್ನು ಕರುಣಿಸುವುದಾಗಿ ವರವನ್ನು ನೀಡಿದನು. ವಾಯುಪುತ್ರ, ಪವನಸುತ, ಮಾರುತಿ ಎಂದೆಲ್ಲಾ ಕರೆಸಿಕೊಳ್ಳುವ ಹನುಮಂತ ಜನಿಸಿದ್ದು ವಾಯುದೇವನಿಂದ.
ಒಂದು ದಿನ ಅಂಜನಾದೇವಿ ಇದೇ ಬೆಟ್ಟದಲ್ಲಿ ವಾಯು ವಿಹಾರಕ್ಕೆಂದು ಹೋದಾಗ ಆಕೆಗೆ ಕಾನನದಲ್ಲಿ ವಾಯುದೇವ ಕಾಣಿಸಿಕೊಳ್ಳುತ್ತಾನೆ. ಅವನ ರೂಪಕ್ಕೆ ಮನಸೋತ ಅಂಜನಾದೇವಿ ಆತನೊಂದಿಗೆ ಸೇರುತ್ತಾಳೆ. ಹೀಗೆ ಅವರಿಬ್ಬರ ಮೇಲಿನ ಪ್ರೀತಿಯಿಂದಾಗಿ ಜನಿಸಿದ ಮಾರುತಿ. ಹಲವು ಪುರಾಣ ಗ್ರಂಥಗಳಲ್ಲಿ ಹನುಮಂತನ ಜನ್ಮ ವೃತ್ತಾಂತವನ್ನು ವಿಭಿನ್ನವಾಗಿ ಉಲ್ಲೇಖಿಸಲಾಗಿದೆ. ಇನ್ನೊಂದು ಕಥೆಯ ಪ್ರಕಾರ ಪುತ್ರ ಕಾಮೇಷ್ಠಿಯಾಗ ಮಾಡುವ ವೇಳೆ ದಾಶ್ರತನು ತಮ್ಮ ಪತ್ನಿಯರಿಗೆ ಕೊಡುತ್ತಿದ್ದ ಪ್ರಸಾದವನ್ನು ಕಾಗೆಯೊಂದು ಕಚ್ಚಿಕೊಂಡು ಹೋಯಿತು. ಇದನ್ನು ಅರಿತ ವಾಯುದೇವ ತಪ್ಪಸಿನ್ನಲ್ಲಿ ಮಗ್ನಳಾಗಿದ್ದ ಅಂಜನಾದೇವಿಯ ಕರಗಳಲ್ಲಿ ಆ ಪ್ರಸಾದವನ್ನು ಬೀಳುವಂತೆ ಮಾಡುತ್ತಾನೆ. ಆ ಪುಣ್ಯ ಪ್ರಸಾದವನ್ನು ಸ್ವೀಕರಿಸಿದ ಫಲವಾಗಿ ಅಂಜನಾದೇವಿ ಗರ್ಭವತಿಯಾಗುತ್ತಾಳೆ. ಆಂಜನೇಯನಿಗೆ ಜನ್ಮ ನೀಡುತ್ತಾಳೆ ಎನ್ನುವುದು ಮತ್ತೊಂದು ಕಥೆ.

 

ಈತ ಅಂಜನಾದೇವಿಯ ಮಗನಾದ ಕಾರಣ ಈ ದೈವಾಂಶ ಸಂಭೂತನಿಗೆ “ ಆಂಜನೇಯ ” ಎಂದು ಹೆಸರು ಬಂತು. ಒಟ್ಟಿನಲ್ಲಿ ಈ ವಾಯುಪುತ್ರನ ಜನನದ ಬಗ್ಗೆ ಇರುವ ಕಥೆಗಳು ಹತ್ತಾರು. ಆದರೆ ಈತ ದುಷ್ಟರನ್ನು ಸಂಹರಿಸಿ ಜನರನ್ನು ರಕ್ಷಿಸಿ ಕೋಟ್ಯಾನುಕೋಟಿ ಭಕ್ತರ ಪಾಲಿಗೆ ಆರಾಧ್ಯ ದೈವನ ಹನುಮಂತನ ಶಕ್ತಿಗೆ ಹನುಮಂತನ ಸಾಟಿ. ಈತನ ಧೈರ್ಯ, ಶೌರ್ಯ ಮತ್ತು ಶಕ್ತಿಯನ್ನು ಎದುರಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಅಂಜನಾದೇವಿ ವಾಸವಿದ್ದ ಇದೇ ಅಂಜನಾದ್ರಿ ಪರ್ವತದ ಈ ಗುಹೆಯಲ್ಲಿ. ಒಂದು ದಿನ ಅಂಜನಾದೇವಿ ಗುಹೆಯಲ್ಲಿ ತನ್ನ ಮಗುವನ್ನು ಬಿಟ್ಟು ಹಣ್ಣು ಹಂಪಲುಗಳನ್ನು ತರುವುದಕ್ಕೆ ಕಾಡಿಗೆ ಹೋಗಿರುತ್ತಾಳೆ. ಹನುಮಂತನಿಗೆ ಬಹಳ ಹಸಿವಾಗಿತ್ತು. ತಲೆಯೆತ್ತಿ ನೋಡಿದಾಗ ಪೂರ್ವದಿಕ್ಕಿನಲ್ಲಿ ಕೆಂಪಗೆ ಕಾಣುತ್ತಿದ್ದ ಒಂದು ವಸ್ತು ಕಣ್ಣಿಗೆ ಬೀಳುತ್ತದೆ. ಕೆಂಪಾಗಿ ಇದ್ದ ಸೂರ್ಯನನ್ನು ಹಣ್ಣೆಂದು ತಿಳಿದು ಅದನ್ನು ಹಿಡಿಯಲೆಂದು ಹನುಮಂತ ಆಗಸದತ್ತ ಹಾರಿಯೇ ಬಿಟ್ಟ.
ಸೂರ್ಯನ ಪ್ರಕರಣವಾದ ಕಿರಣದಿಂದ ಹೊರಹೊಮ್ಮುತ್ತಿದ್ದ ಶಾಖವು ಮುಖವನ್ನು ಸುಡುತ್ತಿದ್ದರು, ಹಟ ಬಿಡದೆ ಸೂರ್ಯನತ್ತ ಕೈಚಾಚಿದ ಈ ಬಾಲಕ ಸೂರ್ಯನನ್ನು ಇನ್ನೇನು ಇಡಿದೆ ಬಿಡಬಹುದೇನೋ ಎನ್ನುವ ಭಯ ಇಂದ್ರನಲ್ಲಿ ಹುಟ್ಟಿತ್ತು. ಆಗ ಇಂದ್ರ ತನ್ನ ವಜ್ರಾಯುಧದಿಂದ ಹನುಮಂತನಿಗೆ ಹೊಡೆಯುತ್ತಾನೆ. ಇದರ ಪರಿಣಾಮವಾಗಿ ಹನುಮಂತ ಗದ್ದಕ್ಕೆ ಗಾಯವಾಗಿ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಹನುಮಂತ ಪ್ರಜ್ಞೆ ತಪ್ಪಿ ಕೆಳಗೆ ಬೀಳುತ್ತಾನೆ. ಸಂಸ್ಕೃತದಲ್ಲಿ ಹನು ಎಂದರೆ ‘ ಗದ್ದ’ ಅಥವಾ ದವಡೆ ಮಂತ ಎಂದರೆ ‘ಉಳ್ಳವನು’ ಎಂದರ್ಥ. ಆದ್ದರಿಂದ ಮಾರುತಿಗೆ “ಹನುಮಂತ” ಎನ್ನುವ ಹೆಸರು ಬಂತು ಎಂದು ಹೇಳಲಾಗುತ್ತದೆ. ಈ ಅನಾಹುತವನ್ನು ಕಂಡ ವಾಯುದೇವ ಕೋಪೋದ್ರಿಕ್ತ ನಾಗುತ್ತಾನೆ. ಪ್ರಜ್ಞೆ ಇಲ್ಲದೆ ಬಿದ್ದಿದ್ದ ತನ್ನ ಮಗನೊಂದಿಗೆ ಬಂದು ಗುಹೆಯೊಳಗೆ ಸೇರಿಕೊಂಡು,ವಾಯುದೇವ ತನ್ನ ಚಲನೆಯನ್ನು ನಿಲ್ಲಿಸಿ ಬಿಡುತ್ತಾನೆ. ಈ ಕಾರಣದಿಂದಾಗಿ ಮೂರು ಲೋಕಗಳಲ್ಲಿ ಉಸಿರಾಡಲು ಗಾಳಿ ಇಲ್ಲದೆ ಈ ಲೋಕವೇ ತತ್ತರಿಸಿ ಹೋಯಿತು. ದೇವತೆಗಳೆಲ್ಲ ಬಂದು ವಾಯು ದೇವನನ್ನು ಸಂತೈಸಲು ಹರಸಾಹಸಪಟ್ಟರು.

 

 

ಹೀಗಾಗಿ ಅಲ್ಲಿದ್ದ ಪುಟಾಣಿ ಹನುಮಂತನಿಗೆ ಒಬ್ಬೊಬ್ಬ ದೇವತೆಯು ಕೂಡ ಒಂದೊಂದು ವರವನ್ನು ಕರುಣಿಸುತ್ತಾರೆ. ಬ್ರಹ್ಮ ಆಂಜನೇಯನಿಗೆ ಯಾವುದೇ ಶಸ್ತ್ರಾಸ್ತ್ರಗಳಿಂದ ಸಾವು ಬರದೇ ಇರಲಿ ಎಂದು ವರ ನೀಡುತ್ತಾನೆ. ಹಾಗೆಯೇ ಇಂದ್ರದೇವ ನಿನಗೆ ಇಷ್ಟವಾಗುವವರೆಗೂ ನೀನು ಈ ಭೂಮಿಯ ಮೇಲೆ ಬದುಕುತ್ತೀಯ ಎಂದು ಚಿರಂಜೀವಿಯಾಗುವ ವರವನ್ನು ನೀಡಿ ಆಶೀರ್ವದಿಸುತ್ತಾನೆ. ಇದೇ ಕಾರಣಕ್ಕೆ ಆಂಜನೇಯನನ್ನು ಚಿರಂಜೀವಿ ಎಂದು ಕರೆಯುವುದು. ಇನ್ನು ಸೂರ್ಯದೇವನ ಬಳಿ ಮಹತ್ವದ 9 ವಿದ್ಯೆಗಳು ಇರುತ್ತವೆ. ಅದರಲ್ಲಿ 5 ವಿದ್ಯೆಗಳನ್ನು ಸೂರ್ಯದೇವ ಆಂಜನೇಯನಿಗೆ ಕಲಿಸುತ್ತಾನೆ. ಹೀಗಾಗಿ ಆಂಜನೇಯ ಸಕಲ ಗುಣ ಸಂಪನ್ನನೂ ಅಗಿದ್ದು, ಸಾಹಸವನ್ನು ಮೆರೆಯುತ್ತಾನೆ. ಯಾರೇ ತಪ್ಪು ಮಾಡಿದವರು ಅವರನ್ನು ಶಿಕ್ಷಿಸುತ್ತಾನೆ.ಭಕ್ತರನ್ನು ಉದ್ಧರಿಸುತ್ತಾನೆ. ತಪ್ಪಿತಸ್ಥರು ಹನುಮ ನೀಡುತ್ತಿದ್ದ ಶಿಕ್ಷೆಗೆ ಹೆದರಿ ಮಹರ್ಷಿಗಳ ಆಶ್ರಮಕ್ಕೆ ತೆರಳಿದರೆ ಅಲ್ಲಿಗೂ ನುಗ್ಗಿ ಮುನಿಗಳ ತಪೋಭಂಗ ಮಾಡುತ್ತಾನೆ.
ಹೀಗಾಗಿ ಮುನಿವೃಂದ ಈ ರೀತಿಯಾಗಿ ಆಂಜನೇಯನಿಗೆ ಶಾಪ ನೀಡುತ್ತಾರೆ. “ನಿನ್ನ ಶಕ್ತಿಯ ಅರಿವು ನಿನಗೆ ತಿಳಿಯದೇ ಹೋಗಲಿ”ಎಂದು ದೇವಾನು ದೇವತೆಗಳಿಂದ ವರ ಪಡೆದು ಮುನಿಗಳ ಶಾಪಕ್ಕೆ ಗುರಿಯಾಗಿ ಆಂಜನೇಯ ಬೆಳೆಯುತ್ತಾನೆ. ಬಾಲ್ಯದಲ್ಲಿ ಹತ್ತು ಹಲವು ತುಂಟಾಟಗಳು ಕೀಟಲೆಗಳ ಮೂಲಕ ಎಲ್ಲರ ಮನ ಗೆಲ್ಲುತ್ತಾನೆ. ಇಂದಿಗೂ ಜನರ ಮನಸ್ಸಿನಲ್ಲಿ ಆರಾಧಿಸಲ್ಪಡುತ್ತಿದ್ದಾನೆ ಈ ಮಹಾಮಹಿಮ. ಈ ಮಹಾಮಹಿಮನ ಬಗ್ಗೆ ಇನ್ನಷ್ಟು ಹೇಳಲು ಹೋದರೆ ಇಲ್ಲಿ ಶ್ರೀರಾಮನನ್ನು ನೆನೆಯಲೇಬೇಕು. ಶ್ರೀ ರಾಮನ ಪರಮಭಕ್ತ ಆಂಜನೇಯ “ಜೈ ಶ್ರೀರಾಮ್” ಈ ಒಂದು ಪದ ಕೇಳಿದರೆ ಸಾಕು ಭಾರತೀಯರ ನರನಾಡಿಗಳಲ್ಲಿ ಭಕ್ತಿ ಉಕ್ಕಿ ಹರಿಯುತ್ತದೆ. ಮನಸ್ಸಿನಲ್ಲಿ ವಿದ್ಯುತ್ ಶಕ್ತಿಯ ಸಂಚಲನವಾಗುತ್ತದೆ. ಯಾಕೆಂದರೆ ಜೈ ಶ್ರೀರಾಮ್” ಎನ್ನುವ ಪದದಲ್ಲಿ ಅಂತಹದೊಂದು ಶಕ್ತಿ ವರ್ಣಿಸಲಸಾಧ್ಯ. ಶ್ರೀ ಆಂಜನೇಯ ತನ್ನ ಒಡೆಯ ಶ್ರೀ ರಾಮನಿಗಾಗಿ 7 ಸಾಗರವನ್ನು ಒಂದೇ ಬಾರಿಗೆ ಹಾರಿದ.ಈ ವಾಯುಪುತ್ರ ಲಕ್ಷ್ಮಣರಿಗಾಗಿ ಸಂಜೀವಿನಿ ಪರ್ವತವನ್ನೇ ಅಂಗೈಯಲ್ಲಿ ಹೊತ್ತು ತಂದವನು. ಈ ಮಾರುತಿ ತನ್ನ ಬಾಲದಿಂದ ಲಂಕೆಯನ್ನು ದಹಿಸಿ ಲಂಕಾಸುರ ರಾವಣನ ಹುಟ್ಟು ಅಡಗಿಸಿದವನು. ಆಂಜನೇಯ ನಿಜಕ್ಕೂ ಶ್ರೀ ರಾಮನ ಬಂಟ ಊರಿಗೆಲ್ಲಾ ನೆಂಟ.

ವಿಳಾಸ .ಬೆಂಗಳೂರಿನಿಂದ ಕಿಷ್ಕಿಂಧೆಗೆ 341 ಕಿಲೋಮೀಟರ್ ಹಾಗೂ ಗಂಗಾವತಿಯಿಂದ ಕೇವಲ ನಾಲ್ಕು ಕಿಲೋಮೀಟರ್ ಅಂತರವಿದೆ. ಶಿಲ್ಪಕಲಾ ಶ್ರೀಮಂತಿಕೆಯ ತವರಾದ ಹಂಪಿಗೆ ಈ ಕ್ಷೇತ್ರ ಸಮೀಪವಿರುವ ಕಾರಣ ಅಲ್ಲಿಗೆ ಬರುವ ವಿದೇಶಿಗರು ಈ ಸ್ಥಳದ ಸೌಂದರ್ಯದ ಸೊಬಗನ್ನು ಕಣ್ತುಂಬಿಕೊಳ್ಳದೇ ಹಿಂತಿರುಗುವುದಿಲ್ಲ. ಉತ್ತರ ಭಾರತದ ಋಷಿಮುನಿಗಳು ಈ ಬೆಟ್ಟದಲ್ಲಿ ಕೆಲವು ವರ್ಷಗಳ ಕಾಲ ನೆಲೆ ನಿಂತಿದ್ದರು ಎಂದು ಉಲ್ಲೇಖವಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top