fbpx
ಸಮಾಚಾರ

ಮಹಿಮಯುತ ಕ್ಷೇತ್ರ,ತಿಮ್ಮಪ್ಪನ ದರ್ಶನ ಮಾಡಿ ಈ ತಾಯಿಯ ದರ್ಶನ ಮಾಡಿಲ್ಲ ಅಂದ್ರೆ ಯಾತ್ರೆ ಪರಿಪೂರ್ಣವಾಗುವುದಿಲ್ಲವಂತೆ

ಇದು ಶ್ರೀನಿವಾಸನ ಪ್ರಿಯ ಪತ್ನಿ ನೆಲೆಸಿರುವ ದಿವ್ಯ ತಾಣ. ತಿರುಪತಿ ತಿಮ್ಮಪ್ಪನ ಕ್ಷೇತ್ರಕ್ಕೆ ಭೇಟಿ ಕೊಟ್ಟ ಭಕ್ತರು ವೆಂಕಟೇಶ್ವರನ ಅರ್ಧಾಂಗಿಯ ಸಾನಿಧ್ಯಕ್ಕೆ ಬರದೇ ಇದ್ದರೆ ಯಾತ್ರೆ ಪರಿಪೂರ್ಣವಾಗುವುದಿಲ್ಲ. ಅಷ್ಟಕ್ಕೂ ಆ ಮಹಿಮಾನ್ವಿತ ಕ್ಷೇತ್ರ ಯಾವುದು ? ಆ ದೇವಾಲಯ ಇರುವುದು ಎಲ್ಲಿ ? ಅದರ ಮಹತ್ವವೇನು ? ಬನ್ನಿ ತಿಳಿದುಕೊಳ್ಳೋಣ.

ಸುಂದರವಾದ ಪ್ರಕೃತಿಯ ನಡುವಿನ ಒಂದು ತಾಣದಲ್ಲಿ ನೆಲೆ ನಿಂತಿದ್ದಾಳೆ ವೈಕುಂಠದರಸಿ. ಭಕ್ತರು ಈಕೆಯ ಬಳಿ ಬಂದು ಸ್ವಚ್ಛ ಮನಸ್ಸಿನಿಂದ ಪೂಜಿಸಿದರೆ ಬೇಡಿದ ವರ ಕರುಣಿಸುತ್ತಾಳೆ. ತಿರುಮಲ ಯಾತ್ರೆ ಕೈಗೊಂಡ ಪ್ರತಿಯೊಬ್ಬರೂ ಕೂಡ ಈ ದೇವಿಯ ಕ್ಷೇತ್ರಕ್ಕೆ ಬಂದು ದರ್ಶನ ಪಡೆದರೆ ತಿರುಮಲ ಯಾತ್ರೆ ಸಂಪೂರ್ಣವಾಗುತ್ತದೆ ಎನ್ನುವುದು ಕೋಟ್ಯಾನುಕೋಟಿ ಭಕ್ತರ ನಂಬಿಕೆಯಾಗಿದೆ. ಲಕ್ಷ್ಮಿಯ ಇನ್ನೊಂದು ಸ್ವರೂಪವೇ ಪದ್ಮಾವತಿ. ತಿರುಪತಿ ತಿಮ್ಮಪ್ಪನ ಕ್ಷೇತ್ರದಿಂದ ಕೆಲವೇ ಕಿಲೋಮೀಟರ್ ದೂರದದಲ್ಲಿರುವ ಸ್ವರ್ಣಮುಖಿ ನದಿ ತೀರದಲ್ಲಿ ತಾಯಿ ನೆಲೆಗೊಂಡಿದ್ದಾಳೆ.12ನೇ ಶತಮಾನದಲ್ಲಿ ಈ ಸ್ಥಳದಲ್ಲಿ ಯಾದವ ರಾಜ, ಶ್ರೀ ಕೃಷ್ಣ ಬಲರಾಮರ ಮಂದಿರವನ್ನು ನಿರ್ಮಿಸಿದ. ಆ ಸಂದರ್ಭದಲ್ಲಿ ಈ ದೇವಸ್ಥಾನ ಅಷ್ಟೇನು ಪ್ರಸಿದ್ಧಿ ಪಡೆದಿರಲಿಲ್ಲ. ಆದರೆ 16 ಮತ್ತು 17ನೇ ಶತಮಾನದಲ್ಲಿ ಭಕ್ತರಾದ ಸುಂದರ ವರದರಾಜನ್ ಎಂಬುವವರು ಪದ್ಮಾವತಿ ದೇವಿಯ ಮಂದಿರವನ್ನು ಪ್ರತ್ಯೇಕವಾಗಿ ಇಲ್ಲಿ ನಿರ್ಮಿಸಿದ್ದರು. ಆ ಸಂದರ್ಭದಲ್ಲಿ ತಿರುಚನೂರು ಹೆಚ್ಚು ವೈಭವತೆಯನ್ನು ಪಡೆದುಕೊಂಡಿತ್ತು ಎನ್ನುತ್ತದೆ ಇತಿಹಾಸ.ಇಲ್ಲಿರುವ ಶಕ್ತಿ ಮಾತೆಯನ್ನು ಪದ್ಮಾವತಿ, ಅಲಮೇಲು ಮಂಗಮ್ಮ ಎಂದು ಕರೆಯಲಾಗುತ್ತದೆ. ಈ ಎಲ್ಲಾ ಹೆಸರುಗಳು ಮಹಾಲಕ್ಷ್ಮಿ ಗೆ ಇರುವ ಇತರೆ ನಾಮಗಳು. ಇಲ್ಲಿ ಪದ್ಮಾವತಿ ದೇವಿ ಆವಿರ್ಭವಿಸಿರುವ ಕಾರಣದಿಂದಾಗಿ ತಿರುಚನೂರು ಪ್ರದೇಶ ಅಲಮೇಲು ಮಂಗಪುರಂ ಎಂದು ಸಹ ಕರೆಯಲ್ಪಡುತ್ತದೆ . ಈ ಕ್ಷೇತ್ರದ ಇತಿಹಾಸವನ್ನು ನೋಡಿದರೆ ಕಾಂಚಿಪುರದ ಪಲ್ಲವರು, ತಂಜಾವೂರಿನ ಚೋಳರು ಮತ್ತು ಮಧುರೈ ಪಾಂಡ್ಯರು, ವಿಜಯನಗರದ ಅರಸರು ಮರಾಠರು, ವೆಂಕಟೇಶ್ವರ ಮತ್ತು ಪದ್ಮಾವತಿಯ ಭಕ್ತರಾಗಿ ಈ ದೇವಾಲಯಕ್ಕೆ ಹಲವು ಕಾಣಿಕೆಗಳನ್ನು ನೀಡಿರುತ್ತಾರೆ. ಇವರ ಸಾಕ್ಷಿಯಾಗಿ ನಿಂತಿದೆ ದೇವಾಲಯದ ವಾಸ್ತುಶಿಲ್ಪ ಹಾಗೂ ಕಲೆ.

1933 ರಲ್ಲಿ ಇಲ್ಲಿನ ಮೈಸೂರು ಸರ್ಕಾರ ವಿಶೇಷ ಕಾಯ್ದೆ ತಂದು ದೇವಸ್ಥಾನದ ಆಡಳಿತ ನಿರ್ವಹಣೆಯನ್ನು ತಿರುಮಲ ತಿರುಪತಿ ದೇವಸ್ಥಾನದ ಸಮಿತಿಗೆ ವಹಿಸಿತ್ತು. 1987 ರಲ್ಲಿ ಆಂಧ್ರಪ್ರದೇಶ ಸರ್ಕಾರ ಇದಕ್ಕೆ ಮಂಡಳಿಯನ್ನು ರಚಿಸಿದ್ದು, ಟಿಟಿಡಿ ದೇವಾಲಯದ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ ಶೈಕ್ಷಣಿಕ ,ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ. ತಿರುಮಲ ಕ್ಷೇತ್ರ ಮಾತ್ರವಲ್ಲದೆ ಪದ್ಮಾವತಿ ದೇವಾಲಯ ಸಂಪೂರ್ಣ ಕಾರ್ಯವೈಖರಿಯನ್ನು ಟಿಟಿಡಿ ಟ್ರಸ್ಟ್ ನೋಡಿಕೊಳ್ಳುತ್ತಿದೆ.

 

 

ಒಮ್ಮೆ ಮಹರ್ಷಿಗಳೆಲ್ಲಾ ಒಂದು ಕಡೆ ಸೇರುತ್ತಾರೆ. ಆ ವೇಳೆ ತ್ರಿಮೂರ್ತಿಗಳಲ್ಲಿ ಯಾರು ಶ್ರೇಷ್ಠರು ? ಎನ್ನುವ ವಿಷಯದ ಬಗ್ಗೆ ವಾಗ್ವಾದ ನಡೆಯುತ್ತದೆ. ಆಗ ಇದನ್ನು ತೀರ್ಮಾನಿಸುವ ಹೊಣೆಯನ್ನು ಬೃಗು ಮಹರ್ಷಿಗೆ ವಹಿಸಲಾಗುತ್ತದೆ.ಬೃಗು ಮಹರ್ಷಿ ಕೊಟ್ಟಿದ್ದ ಕರ್ತವ್ಯವನ್ನು ಪಾಲಿಸಲು ಮುಂದಾಗುತ್ತಾರೆ. ಹೀಗೆ ಮೊದಲು ಬ್ರಹ್ಮನು ಇದ್ದಲ್ಲಿಗೆ ಹೋಗುತ್ತಾರೆ. ಆ ಸಮಯದಲ್ಲಿ ಸರಸ್ವತಿ ಮಧುರವಾಗಿ ವೀಣಾವಾದನ ಮಾಡುತ್ತಿರುತ್ತಾಳೆ. ಬ್ರಹ್ಮದೇವನು ಸಂಗೀತದ ಗುಂಗಿನಲ್ಲೇ ಪರವಶರಾಗಿದ್ದಾನೆ. ಮಹರ್ಷಿ ಬಹಳ ಹೊತ್ತು ಕಾದರೂ ಬ್ರಹ್ಮನು ಮಹರ್ಷಿಯ ಕ್ಷೇಮ ಸಮಾಚಾರವನ್ನು ವಿಚಾರಿಸುವುದಿಲ್ಲ. ಇದರಿಂದ ಕುಪಿತನಾದ ಬೃಗು ಮಹರ್ಷಿ ಬ್ರಹ್ಮನಿಗೆ ಭೂಲೋಕದಲ್ಲಿ ಪೂಜೆ ಇಲ್ಲದಂತೆ ಆಗಲಿ ಎಂದು ಶಾಪ ಕೊಟ್ಟು ಅಲ್ಲಿಂದ ಹೊರಡುತ್ತಾನೆ.

ಇದರ ಬಳಿಕ ಬೃಗು ಋಷಿ ಶಿವನನ್ನು ನೋಡಲು ಕೈಲಾಸಕ್ಕೆ ತೆರಳುತ್ತಾನೆ. ಅಲ್ಲಿ ಶಿವನು ಪಾರ್ವತಿಯೊಂದಿಗೆ ಮಾತಿನಲ್ಲಿ ತಲ್ಲೀನನಾಗಿರುತ್ತಾನೆ. ಅಲ್ಲಿಗೆ ಬಂದ ಮಹರ್ಷಿಯನ್ನು ಗುರುತಿಸುವುದೇ ಇಲ್ಲ. ಋಷಿಯು ಇದನ್ನು ನೋಡಿ ಕ್ರೋಧಿತನಾಗಿ ನೀನು ಭೂಲೋಕದಲ್ಲಿ ಕೇವಲ ಶಿಲಾ ರೂಪದ ಲಿಂಗವಾಗಿ ಪೂಜಿಸಬೇಕು ಎಂದು ಶಾಪ ಕೊಟ್ಟು ಅಲ್ಲಿಂದ ಹೊರಟು ಬಿಡುತ್ತಾನೆ.
ನಂತರ ಬೃಗು ಮಹರ್ಷಿ ವಿಷ್ಣುವಿನ ಬಳಿ ಹೋಗುತ್ತಾರೆ. ಅಲ್ಲಿಯೂ ಕೂಡ ವಿಷ್ಣು ತನ್ನ ಪತ್ನಿಯ ಜೊತೆ ಸರಸದಲ್ಲಿ ತಲ್ಲೀನನಾಗಿರುತ್ತಾನೆ . ಬೃಗು ಮಹರ್ಷಿ ವಿಷ್ಣುವಿನಿಂದ ಕಡೆಗಣಿಸಲ್ಪಡುತ್ತಾರೆ. ಇದರಿಂದ ಕುಪಿತಗೊಂಡ ಬೃಗು ಋಷಿ ವಿಷ್ಣುವಿನ ಎದೆಯ ಮೇಲೆ ತಮ್ಮ ಪಾದವನ್ನು ಇಡುತ್ತಾರೆ. ವಿಷ್ಣುವಿನ ಹೃದಯದಲ್ಲಿ ಆತನ ಪತ್ನಿ ಮಹಾಲಕ್ಷ್ಮಿ ಸದಾ ನೆಲೆಸಿರುತ್ತಾಳೆ ಎನ್ನುವ ಪ್ರತೀತಿ ಇದೆ .ಆಗ ಕೂಡಲೇ ವಿಷ್ಣುದೇವ ಮಹರ್ಷಿಯ ತಪೋ ಶಕ್ತಿಯನ್ನು ತಿಳಿದು ಆತನ ಬಳಿ ಕ್ಷಮೆ ಯಾಚಿಸಿ, ಋಷಿಯನ್ನು ಸಮಾಧಾನ ಮಾಡಲು ಮುಂದಾಗುತ್ತಾನೆ. ವಿಷ್ಣುವು ಮಹರ್ಷಿಯ ಕಾಲನ್ನು ಹಿಡಿದು ನಿಧಾನವಾಗಿ ಒತ್ತಲು ಆರಂಭಿಸುತ್ತಾನೆ, ಹಾಗೆಯೇ ನಿಧಾನಕ್ಕೆ ಭೃಗು ಮಹರ್ಷಿಯ ಶಕ್ತಿಯ ಪ್ರತೀಕವಾಗಿ ಅವರ ಕಾಲಿನಲ್ಲಿದ್ದ ಮೂರನೇ ಕಣ್ಣನ್ನು ಮುಚ್ಚಿ ಬಿಡುತ್ತಾನೆ. ಇದರಿಂದ ಋಷಿಯ ಅಹಂ ಕೂಡಲೇ ನಶಿಸಿ ಹೋಗುತ್ತದೆ. ನಂತರ ಮಹರ್ಷಿಗೆ ತನ್ನ ತಪ್ಪಿನ ಅರಿವಾಗಿ ವಿಷ್ಣುವಿನ ಬಳಿ ಕ್ಷಮೆ ಯಾಚಿಸುತ್ತಾರೆ. ಆದರೆ ಮಹಾಲಕ್ಷ್ಮಿ ಮಾತ್ರ ವಿಷ್ಣು ಋಷಿಯ ಬಳಿ ಕ್ಷಮೆ ಕೋರಿದ್ದ ಕಾರಣ ಕುಪಿತಳಾಗುತ್ತಾಳೆ. ವೈಕುಂಠವನ್ನು ಬಿಟ್ಟು ಭೂಮಿಗೆ ಬರುತ್ತಾಳೆ. ಲಕ್ಷ್ಮಿಯನ್ನು ಹುಡುಕಿಕೊಂಡು ಭೂಲೋಕಕ್ಕೆ ಬರುತ್ತಾನೆ ವಿಷ್ಣು. ತನ್ನ ಪತ್ನಿಯ ವಿರಹದಿಂದ ಅನುಭವಿಸುತ್ತಿದ್ದ ನೋವನ್ನು ನೋಡಲಾರದೆ ಬ್ರಹ್ಮ ಮತ್ತು ಶಿವ ಇಬ್ಬರು ಹಸು ಮತ್ತು ಕರುವಿನ ರೂಪ ಪಡೆದು ಭೂಲೋಕಕ್ಕೆ ಬರುತ್ತಾರೆ. ಮತ್ತು ಆ ಕರು ಮತ್ತು ಹಸುಗಳು ಚೋಳರಾಜನ ಮನೆಯನ್ನು ಸೇರುತ್ತವೆ. ರಾಜ ಅವೆರಡನ್ನು ಮೇಯಿಸಲು ವೈಕುಂಟ ಬೆಟ್ಟಕ್ಕೆ ಬಿಡುತ್ತಾನೆ.

 

ವಿಷ್ಣುವನ್ನು ವೈಕುಂಠ ಬೆಟ್ಟದಲ್ಲಿ ಪತ್ತೆಹಚ್ಚಿದ ಹಸು ವೈಕುಂಠ ಒಡೆಯನಿಗೆ ಸದಾ ಹಾಲುಣಿಸುತ್ತಲೇ ಇರುತ್ತದೆ. ಅರಮನೆಯಲ್ಲಿದ್ದ ರಾಣಿಯು ಹಸು ಹಾಲು ಕೊಡದೆ ಇರುವ ಕಾರಣ ತುಂಬಾ ಕ್ರೋಧಗೊಂಡಿರುತ್ತಾಳೆ. ಯಾಕೆಂದರೆ ಹಸು ತನ್ನಲ್ಲಿದ್ದ ಹಾಲನ್ನು ವಿಷ್ಣುವಿಗೆ ನೀಡುತ್ತಿರುತ್ತದೆ. ಗೋಪಾಲಕರಿಗೆ ಹಸುವಿನ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸುತ್ತಾಳೆ. ಬೆಟ್ಟದಲ್ಲಿ ಒಂದು ಗೆದ್ದಲಿನ ಗೂಡಿಗೆ ಹಸು ಹಾಲು ಎರೆಯುತ್ತಿರುವುದನ್ನು ಗೋಪಾಲಕರು ನೋಡುತ್ತಾರೆ. ಇದರಿಂದ ಕೋಪಗೊಂಡ ಗೋಪಾಲಕರು ಆ ಗೂಡನ್ನು ಹೊಡೆಯಲು ಮುಂದಾಗುತ್ತಾರೆ. ಆಗ ಅ ಕೊಡಲಿ ಶ್ರೀನಿವಾಸನ ತಲೆಗೆ ತಗುಲಿ ಗಾಯ ಮಾಡುತ್ತದೆ. ರಕ್ತ ಸುರಿಯುತ್ತಿರುವುದನ್ನು ಕಂಡ ಗೋಪಾಲಕ ಭಯಬೀತ ನಾಗುತ್ತಾನೆ. ಈ ವೇಳೆ ವಿಷ್ಣು ಹೊರಬಂದು ಹಸುವನ್ನು ಕಾಪಾಡುತ್ತಾನೆ. ವಿಷ್ಣುದೇವ ರಕ್ತಸಿಕ್ತನಾಗಿದ್ದನ್ನು ಕಂಡ ಗೋಪಾಲಕ ಕ್ಷಮೆ ಕೇಳುತ್ತಾನೆ. ಇದರ ಬಳಿಕ ರಾಜನು ಸಹ ಆಲ್ಲಿಗೆ ಓಡೋಡಿ ಬರುತ್ತಾನೆ. ಆಗ ವಿಷ್ಣು ತನ್ನ ನಿಜ ರೂಪದಿಂದ ರಾಜನಿಗೆ ದರ್ಶನ ನೀಡುತ್ತಾನೆ.ಚೋಳ ರಾಜನಿಗೆ ದರ್ಶನ ಕೊಟ್ಟ ವಿಷ್ಣು ನೀನು ಮುಂದಿನ ಜನ್ಮದಲ್ಲಿ ಆಕಾಶ ರಾಜನಾಗಿ ಹುಟ್ಟಿ ಬಾ, ನಿನಗೆ ಪದ್ಮಾವತಿ ಎನ್ನುವ ಮಗಳು ಜನಿಸುತ್ತಾಳೆ. ಅವಳನ್ನು ನನಗೆ ವಿವಾಹ ಮಾಡಿ ಕೊಡು ಎಂದು ಹೇಳಿ ಅದೃಶ್ಯನಾಗಿ ಬಿಡುತ್ತಾನೆ. ನಂತರ ವಿಷ್ಣು ಶ್ರೀನಿವಾಸನ ರೂಪ ಪಡೆದು ವರಹಾ ಕ್ಷೇತ್ರದಲ್ಲಿ ಸ್ಥಿತನಾಗುತ್ತಾನೆ. ಹಲವು ವರ್ಷಗಳ ಬಳಿಕ ಆಕಾಶ ರಾಜನಾಗಿ ಜನ್ಮ ತಳೆದ ಬಳಿಕ ಹಲವು ವರ್ಷಗಳ ಕಾಲ ಆ ದಂಪತಿಗಳಿಗೆ ಸಂತಾನ ಭಾಗ್ಯ ಇರುವುದಿಲ್ಲ. ಆ ಬಳಿಕ ಇದೇ ಸ್ವರ್ಣಮುಖಿ ನದಿ ತಟದಲ್ಲಿ ರಾಜ ಯಜ್ಞಯಾಗಾದಿಗಳನ್ನು ನಡೆಸುತ್ತಾನೆ. ಅದೇ ವೇಳೆ ಕೊಳದಲ್ಲಿದ್ದ ಒಂದು ಕಮಲದ ಹೂವಿನಿಂದ ಒಂದು ಸುಂದರವಾದ ಹೆಣ್ಣು ಮಗುವಿನ ಜನನವಾಗುತ್ತದೆ.ಆ ಮುದ್ದಾದ ಹೆಣ್ಣು ಮಗುವೇ ಪದ್ಮಾವತಿ.

 

ಲಕ್ಷ್ಮಿಯ ಪ್ರತಿರೂಪವಾದ ಈ ಮಗು ಕಮಲದ ಹೂವಿನಿಂದ ಹುಟ್ಟಿ ಬಂದ ಕಾರಣ ಈಕೆಯನ್ನು ಪದ್ಮಾವತಿ ಎಂದೇ ಕರೆಯಲಾಗುತ್ತದೆ. ಕಮಲದ ಹೂವಿಗೆ ಪದ್ಮ ಎಂದು ಕೂಡ ಕರೆಯುತ್ತಾರೆ. ರಾಜನ ಭಕ್ತಿಗೆ ಪ್ರತಿಫಲವಾಗಿ ಪಡೆದ ಈ ಶಿಶುವಿಗೆ ಪದ್ಮಾವತಿ ಎಂದೇ ನಾಮಕರಣ ಮಾಡಲಾಗುತ್ತದೆ. ಪದ್ಮಾವತಿ ಕೊಳದ ನಡುವಿನಲ್ಲಿ ಜನಿಸಿದ್ದ ಕಾರಣಕ್ಕೆ ಈ ದೇವಾಲಯದ ಪುಷ್ಕರಣಿಯ ಮಧ್ಯಭಾಗದಲ್ಲಿ ಒಂದು ಸುಂದರವಾದ ಮಂಟಪವನ್ನು ಕಟ್ಟಲಾಗಿದೆ. ಪದ್ಮಾವತಿಯ ಜನನ ಮಂಟಪ ಎನ್ನುವುದು ಪ್ರತೀತಿ, ಇದೇ ಸ್ವರ್ಣಮುಖಿ ನದಿ ತೀರದಲ್ಲಿ ಪದ್ಮಾವತಿಯನ್ನು ವರಿಸುವ ಉದ್ದೇಶದಿಂದ ಶ್ರೀನಿವಾಸ ಧ್ಯಾನ ನಿರತನಾಗಿದ್ದ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ಈ ನದಿ ತೀರ ಅತಿ ಪವಿತ್ರವಾದದ್ದು, ಈ ಕಾರಣಕ್ಕಾಗಿ ಭಕ್ತರೂ ಇಲ್ಲಿನ ಪುಷ್ಕರಣಿಯ ನೀರನ್ನು ತೀರ್ಥದ ರೂಪದಲ್ಲಿ ಉಪಯೋಗಿಸುತ್ತಾರೆ.

ಆಕಾಶರಾಜ ವರವಾಗಿ ಪಡೆದ ಹೆಣ್ಣು ಮಗುವನ್ನು ಸದಾಚಾರದಿಂದ ಬೆಳೆಸಲಾಗುತ್ತದೆ, ಹೀಗಿರುವಾಗ ಸೌಂದರ್ಯವತಿ ಸಕಲ ಸದ್ಗುಣಗಳ ಒಡತಿಯಾಗಿದ್ದ ಪದ್ಮಾವತಿ ತನ್ನ ಅರಮನೆಯಲ್ಲಿದ್ದ ಸಖಿಯರೊಂದಿಗೆ ಅರಣ್ಯಕ್ಕೆ ತೆರಳಿ, ಅಲ್ಲಿ ಒಮ್ಮೆ ಆನೆಯ ಹಿಂಡೊಂದು ಪದ್ಮಾವತಿಯನ್ನು ಅಟ್ಟಿಸಿಕೊಂಡು ಬರುತ್ತದೆ. ಈ ವೇಳೆ ಶ್ರೀನಿವಾಸ ಆಕೆಯನ್ನು ರಕ್ಷಿಸುತ್ತಾನೆ. ಇದರ ಬಳಿಕ ಅವರಿಬ್ಬರಲ್ಲಿ ಪ್ರೀತಿ ಮೊಳಕೆಯೊಡೆಯುತ್ತದೆ. ಇದನ್ನು ತಿಳಿದ ರಾಜಾ ಹಾಗೂ ಎಲ್ಲಾ ಜ್ಯೋತಿಷ್ಯರು ಮತ್ತು ರಾಜಗುರುಗಳೊಂದಿಗೆ ಚರ್ಚಿಸಿ ಶ್ರೀನಿವಾಸನಿಗೆ ಪದ್ಮಾವತಿಯನ್ನು ಮದುವೆ ಮಾಡಿಕೊಡುವ ನಿರ್ಧಾರವನ್ನು ಮಾಡುತ್ತಾನೆ. ವಿಜೃಂಭಣೆಯಿಂದ ಶ್ರೀನಿವಾಸ ಮತ್ತು ಪದ್ಮಾವತಿಯ ವಿವಾಹ ನೆರವೇರುತ್ತದೆ.
ಲಕ್ಷ್ಮಿ ದೇವಿ ಮತ್ತೆ ವಿಷ್ಣುವಿಗೆ ಜೊತೆಯಾಗುತ್ತಾಳೆ ಮತ್ತು ಆತನ ಹೃದಯದಲ್ಲಿ ಸ್ಥಾನ ಪಡೆಯುತ್ತಾಳೆ. ಇದನ್ನು ಈ ಕ್ಷೇತ್ರದಲ್ಲಿ ಪ್ರತಿ ವರ್ಷವೂ ಶ್ರೀನಿವಾಸ ಕಲ್ಯಾಣ ಎಂದು ಆಚರಿಸಲಾಗುತ್ತದೆ. ಕಾರ್ತಿಕ ಮಾಸದಲ್ಲಿ ನಡೆಯುವ ಈ ಉತ್ಸವದ ಸಂದರ್ಭದಲ್ಲಿ ಪದ್ಮಾವತಿ ವಜ್ರ ,ವೈಡೂರ್ಯ, ಚಿನ್ನಾಭರಣ ಭೂಷಿತಲಾಗಿ ಕಂಗೊಳಿಸುತ್ತಿರುವ, ಈ ವೇಳೆ ಸ್ತ್ರೀಯರು ಕಲಶವನ್ನು ಹೊತ್ತು ಸಾಲುಸಾಲಾಗಿ ಜಗನ್ಮಾತೆಯ ಜೊತೆ ಮುಂದೆ ಸಾಗುವುದರೊಂದಿಗೆ ಹರಿಶಿಣ ,ಕುಂಕುಮ, ಬಳೆ ,ಬಿಚ್ಚಾಲೆ, ಸೀರೆ, ವಿವಿಧ ಆಭರಣಗಳನ್ನು ಮಾತಿಗೆ ಅರ್ಪಿಸಿ ಕೃತಾರ್ಥರಾಗುತ್ತಾರೆ. ನವರಾತ್ರಿಯ ಸಂದರ್ಭದಲ್ಲಿ ತಾಯಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಹಾಗೆಯೇ ಜೂನ್ ತಿಂಗಳಲ್ಲಿ ಐದು ದಿನಗಳ ಕಾಲ ಪದ್ಮಾವತಿ ಜನ್ಮ ತಾಳಿದಳು ಎನ್ನುವ ಪ್ರತೀತಿ ಇದೆ. ಹಾಗೂ ಇದೇ ಸ್ವರ್ಣಮುಖಿ ನದಿ ತೀರದಲ್ಲಿ ತೆಪ್ಪೋತ್ಸವ ನಡೆಯುತ್ತದೆ. ಆ ದೃಶ್ಯವನ್ನು ಕಣ್ತುಂಬಿಕೊಳ್ಳುವವರೇ ಪುಣ್ಯವಂತರು. ಪದ್ಮಾಸನರೂಡಳಾಗಿ, ಕೈಯಲ್ಲಿ ಕಮಲವನ್ನು ಹಿಡಿದು ಕುಳಿತಿರುವ ಪದ್ಮಾವತಿ ದೇವಿಯ ದೇವಾಲಯದಲ್ಲಿ ಹಲವಾರು ದೇವಾನು ದೇವತೆಗಳಿಗೆ ಪೂಜೆ ಸಲ್ಲುತ್ತದೆ. ದೇವತೆಗಳಿಂದ ಮಾತೆಯ ಪರಮ ಭಕ್ತರಾದ ಶ್ರೀ ಕೃಷ್ಣ, ಬಲರಾಮ, ಸುಂದರರಾಜ ಸ್ವಾಮಿ ಮತ್ತು ಸೂರ್ಯ ನಾರಾಯಣ ಸ್ವಾಮಿ. ಈ ಎಲ್ಲಾ ಭವ್ಯ ಅಲಂಕೃತ ದೇವತೆಗಳು ಭಕ್ತರನ್ನು ಭಕ್ತಿಯ ಭಾವದಲ್ಲಿ ಮಿಂದೇಳಿಸುತ್ತವೆ.ಪದ್ಮಾವತಿಯ ಸಾನಿಧ್ಯಕ್ಕೆ ಬರುವ ಭಕ್ತರು ಸುಪ್ರಭಾತ ಸೇವೆ ಸಹಸ್ರನಾಮಾರ್ಚನೆ, ಕಲ್ಯಾಣೋತ್ಸವ, ಉಯ್ಯಾಲೆ ಸೇವೆ, ಕುಂಕುಮಾರ್ಚನೆ ಹೀಗೆ ಹಲವು ವಿಶೇಷ ಸೇವೆಗಳನ್ನು ಸಮರ್ಪಿಸಿ ಪುನೀತರಾಗುತ್ತಾರೆ.

ವಿಳಾಸ – ಬೆಂಗಳೂರಿನಿಂದ ತಿರುಚನೂರ್ ಗೆ 250 ಕಿಲೋಮೀಟರ್ ಅಂತರವಿದೆ. ತಿರುಪತಿ ರೈಲ್ವೆ ನಿಲ್ದಾಣದಿಂದ 5 ಕಿಲೋ ಮೀಟರ್ ದೂರದಲ್ಲಿದೆ ತಿರುಚಾನೂರ್ ಪಟ್ಟಣವಿದೆ. ತಿರುಪತಿಯಿಂದ ನಿರಂತರ ಬಸ್ ಗಳ ಸೌಕರ್ಯವಿದೆ.ರಥೋತ್ಸವದ ಸಂದರ್ಭದಲ್ಲಿ ಮಹಾಮಾತೆಯನ್ನು ಆನೆಯ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡಲಾಗುತ್ತದೆ. ಆನೆಗೆ ಅತ್ಯಧಿಕ ಪ್ರಾತಿನಿಧ್ಯ ನೀಡಲಾಗಿದ್ದು, ಮಂದಿರದಲ್ಲಿರುವ ಬಾವುಟದ ಮೇಲೆ ಆನೆಯ ಚಿಹ್ನೆಯನ್ನು ಬಳಸಿಕೊಳ್ಳಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top