fbpx
ಸಮಾಚಾರ

ಮಂಡ್ಯ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕೇಂದ್ರದ ಪರಿಹಾರ- “ನನಗೆ ಕ್ರೆಡಿಟ್ ಬೇಡ” ಎಂದ ಸುಮಲತಾ

ಮಂಡ್ಯದ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ಕಳೆದ ವರ್ಷ ನಡೆದಿದ್ದ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕೇಂದ್ರ ಸರ್ಕಾರ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಆದರೆ, ಇದು ಸುಮಲತಾ ಹಾಗೂ ಜೆಡಿಎಸ್ ಬೆಂಬಲಿಗರ ನಡುವಣ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.

ನವೆಂಬರ್ 24ರಂದು ಖಾಸಗಿ ಬಸ್​ ನಾಲೆಗೆ ಉರುಳಿತ್ತು. ಈ ವೇಳೆ ಬಸ್​ ದುರಂತದಲ್ಲಿ 30 ಜನರು ಜಲಸಮಾಧಿಯಾಗಿದ್ದರು. ತಕ್ಷಣ ರಾಜ್ಯ ಸರ್ಕಾರ ಸಂತ್ರಸ್ತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿತ್ತು. ಅಲ್ಲದೆ, ಈಗ ಕೇಂದ್ರದಿಂದ 2 ಲಕ್ಷ ಹೆಚ್ಚುವರಿ ಮೊತ್ತ ಸಿಗುತ್ತಿದೆ. ಈ ವಿಚಾರವನ್ನು ಕುಮಾರಸ್ವಾಮಿ ಟ್ವಿಟ್ಟರ್​ನಲ್ಲಿ ತಿಳಿಸಿದ್ದರು.

ಸುಮಲತಾ ಅವರ ಪ್ರಯತ್ನದಿಂದಾಗಿ ಪರಿಹಾರ ಸಿಕ್ಕಿದೆ. ಸಂಸದೆಯಾದ ಕೆಲವೇ ದಿನಗಳಲ್ಲಿ ಪರಿಹಾರ ತಂದಿದ್ದಾರೆ. ಸಂಸದರಿಗೆ ಬಿಜೆಪಿ ಬೆಂಬಲ ಇರುವ ಕಾರಣ ಪ್ರಧಾನಿಯು ಪರಿಹಾರವನ್ನು ಬಿಡುಗಡೆ ಮಾಡಿದ್ದಾರೆ ಎಂದು ಸುಮಲತಾ ಬೆಂಬಲಿಗರು ಪೋಸ್ಟ್‌ ಹಾಕಿದ್ದಾರೆ.‌ ಆದರೆ, ಇದಕ್ಕೆ ಜೆಡಿಎಸ್ ಕಾರ್ಯಕರ್ತರು ಕಿಡಿಕಾರಿದ್ದಾರೆ. ಕೇಂದ್ರದಿಂದ ಪರಿಹಾರದ ಹಣ ಕೊಡಿಸಿದ್ದು, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಸುಮಲತಾ ಅಲ್ಲ ಎಂದು ವಾಗ್ವಾದಕ್ಕಿಳಿದಿದ್ದಾರೆ.

ಇಂದು ಜಿಲ್ಲೆಯ ಮಾಚಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ದುರಂತದ ಸಂಗತಿ. ಆ ಕುಟುಂಬಗಳಿಗೆ ಅನುದಾನ ತಲುಪಿರೋದು ಮುಖ್ಯ. ಯಾರು ಕೊಟ್ಟಿದ್ದಾರೆ, ಕೊಡಿಸಿದ್ದಾರೆ ಅನ್ನೋದು ಮುಖ್ಯವಲ್ಲ. ನಾನು ಕೊಟ್ಟಿದ್ದೀನಿ, ನೀವು ಕೊಟ್ಟಿಲ್ಲ ಅನ್ನೋದು ತುಂಬಾ ತಪ್ಪಾಗುತ್ತೆ. ಆ ರೀತಿ ತಪ್ಪು ಯಾರೂ ಮಾಡಬಾರದು ನಾನಂತೂ ಆ ತಪ್ಪು ಮಾಡೋದಿಲ್ಲ ಎಂದು ಹೇಳಿದ್ದಾರೆ.

ಯಾರೇ ಮಾಡಿರಲಿ. ಅದನ್ನ ಹೇಳಿಕೊಳ್ಳಬಾರದು. ಯಾರು ಬೇಕಾದರೂ ಇದರ ಕ್ರೆಡಿಟ್ ತೆಗೆದುಕೊಳ್ಳಲಿ. ನನಗೆ ಆ ಬಗ್ಗೆ ಬೇಜಾರ್ ಏನೂ ಇಲ್ಲ. ನನ್ನ ಕೆಲಸ ಈಗಷ್ಟೇ ಆರಂಭವಾಗಿದೆ ಅದನ್ನ ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುವ ನಂಬಿಕೆ ನನಗಿದೆ. ” ಎಂದು ಸುಮಲತಾ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top