fbpx
ಸಮಾಚಾರ

“ನನ್ನ ಹೆಸರಲ್ಲಿ ಗೌಡ ಇದ್ದ ಕಾರಣ ಸಿಎಂ, ಕೇಂದ್ರ ಸಚಿವ ಆದೆ” – ‘ಗೌಡ’ ಹೇಳಿಕೆಗೆ ನೆಟ್ಟಿಗರ ಆಕ್ರೋಶ.

‘ಗೌಡ’ ಎಂದು ಉಪನಾಮ ಸೇರಿಸಿಕೊಂಡ ಕಾರಣಕ್ಕೆ ಶಾಸಕನಾಗಿ ಗೆಲುವು ಸಾಧಿಸಿದೆ, ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವನೂ ಆದೆ ಎಂಬ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್‌ ಹಾಗೂ ಕೃಷಿಕ ಸಾಹಿತ್ಯಪರಿಷತ್ತು ಬೆಂಗಳೂರಿನ ಕನ್ನಡ ಸಾಹಿತ್ಯಪರಿಷತ್ತಿನಲ್ಲಿ ಆಯೋಜಿಸಿದ್ದ ‘ನಾಡಪ್ರಭು ಕೆಂಪೇಗೌಡ ಜಯಂತಿ’ ಹಾಗೂ ‘ಕೆಂಪೇಗೌಡರ ಯಲಹಂಕ ಸಂಸ್ಥಾನದ ಇತಿಹಾಸ ಮತ್ತು ಐತಿಹ್ಯದ ಬಗ್ಗೆ ವಿಚಾರ ಸಂಕಿರಣ’ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ‘ಗೌಡ’ಎಂಬ ಹೆಸರು ಇದ್ದಿದ್ದಕ್ಕೆ ನನಗೆ ಮುಖ್ಯಮಂತ್ರಿ ಪದವಿ ಹಾಗೂ ಕೇಂದ್ರ ಮಂತ್ರಿ ಸ್ಥಾನ ಸಿಕ್ಕಿತ್ತು ಎಂದು ಹೇಳಿದ್ದಾರೆ.

ನನ್ನ ಎಲ್ಲ ಸಟಿರ್ಫಿಕೇಟ್‌ಗಳು ಡಿ.ವಿ.ಸದಾನಂದ ಎಂಬ ಹೆಸರಿನಲ್ಲಿವೆ. 80ರ ದಶಕದಲ್ಲಿ ಮೊದಲ ಬಾರಿಗೆ ಪುತ್ತೂರಿನಿಂದ ಡಿ.ವಿ.ಸದಾನಂದ ಹೆಸರಿನಲ್ಲಿ ಚುನಾವಣೆಗೆ ಸ್ಪರ್ಧಿಸಿ ಒಂದು ಸಾವಿರ ಮತಗಳ ಅಂತರದಲ್ಲಿ ಸೋಲು ಅನುಭವಿಸಿದೆ. ನಮ್ಮ ಸಮುದಾಯದವರೆಲ್ಲರೂ ವಿರೋಧ ಪಕ್ಷದಲ್ಲಿದ್ದರು. ಏನಾದರೂ ಮಾಡಿ ಚುನಾವಣೆಯಲ್ಲಿ ಗೆಲ್ಲಬೇಕೆಂದು ತೀರ್ಮಾನಿಸಿದೆ. ಆಗ ನನ್ನ ಆಪ್ತರು ಹೆಸರಿನ ಜತೆಗೆ ಗೌಡ ಎಂದು ಸೇರಿಸಿಕೊಳ್ಳಲು ಸಲಹೆ ನೀಡಿದರು. ನಂತರದ ಬಂದ ಎಲ್ಲ ಚುನಾವಣೆಗಳಲ್ಲಿ ಡಿ.ವಿ.ಸದಾನಂದಗೌಡ ಎಂಬ ಹೆಸರಿನಲ್ಲಿ ಸ್ಪರ್ಧಿಸಿದೆ, ಗೆದ್ದೆ. ರಾಜ್ಯದ ಮುಖ್ಯಮಂತ್ರಿಯಾದೆ. ಈಗ ಕೇಂದ್ರ ಸಚಿವನಾಗಿದ್ದೇನೆ. ಇದು ಆ ‘ಗೌಡ’ ಎಂಬ ಶಬ್ದದ ಮಹತ್ವ. ಅದನ್ನು ಧೈರ್ಯವಾಗಿ ಹೇಳಿಕೊಳ್ಳುವ ತಾಕತ್ತನ್ನು ಒಕ್ಕಲಿಗ ಸಮುದಾಯ ತಮಗೆ ನೀಡಿದೆ. ರಾಜಕೀಯದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಸಮುದಾಯದ ಹೆಸರು ಕಾರಣವಾಗಿದೆ ಎಂದು ತಿಳಿಸಿದ್ದಾರೆ. ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top