fbpx
ಸಮಾಚಾರ

ಭಾರತ ಮೊದಲ ವಿಶ್ವಕಪ್ ಗೆದ್ದು ಇಂದಿಗೆ 36 ವರ್ಷ.

ಜೂನ್ 25, 1983, ಭಾರತೀಯ ಕ್ರಿಕೆಟ್‌ಗೆ ಹೊಸ ಭಾಷ್ಯ ಬರೆದ ದಿನವಿದು. ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನಡೆದ ಪ್ರುಡೆನ್ಶಿಯಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ತಂಡ ಮೊದಲ ಬಾರಿಗೆ ವಿಶ್ವ ಕಪ್ ಎತ್ತಿ ಹಿಡಿದು ಹೊಸ ಇತಿಹಾಸ ಸೃಷ್ಟಿಸಿತು. ಈ ಅವಿಸ್ಮರಣೀಯ ಗೆಲುವಿಗೆ ಇಂದು ಬರೋಬ್ಬರಿ 36 ವರ್ಷಗಳು ತುಂಬುತ್ತಿವೆ.

ಟೂರ್ನಿಯಲ್ಲಿ ಒಟ್ಟು 8 ತಂಡಗಳು ಪಾಲ್ಗೊಂಡಿದ್ದವು. ಜಿಂಬಾಬ್ವೆ ವಿಶ್ವಕಪ್‌ಗೆ ಪಾದಾರ್ಪಣೆ ಮಾಡಿತು. ಭಾರತ, ಇಂಗ್ಲೆಂಡ್‌, ಪಾಕಿಸ್ತಾನ, ವೆಸ್ಟ್‌ಇಂಡೀಸ್‌ ಮೀಸ್‌ಗೇರಿದವು. ಇಂಗ್ಲೆಂಡ್‌ ವಿರುದ್ಧ ಭಾರತ, ಪಾಕ್‌ ವಿರುದ್ಧ ವಿಂಡೀಸ್‌ ಗೆದ್ದು ಫೈನಲ್‌ಗೇರಿದವು. ಫೈನಲ್‌ನಲ್ಲಿ ಭಾರತ 43 ರನ್‌ಗಳಿಂದ ಗೆದ್ದು ಇತಿಹಾಸ ಬರೆಯಿತು.

ಫೈನಲ್‌ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ 54.4 ಓವರ್‌ಗಳಲ್ಲಿ 183 ರನ್‌ಗಳಿಗೆ ಅಲೌಟಾಗಿತ್ತು. ನಂತರ, ಚುರುಕಿನ ಬೌಲಿಂಗ್‌ ಮೂಲಕ ವಿಂಡೀಸ್‌ ತಂಡವನ್ನು 52 ಓವರ್‌ಗಳಲ್ಲಿ 140 ರನ್‌ಗಳಿಗೆ ಆಲೌಟ್‌ ಮಾಡಿತ್ತು. ಆಲ್‌ರೌಂಡ್‌ ಪ್ರದರ್ಶನ ನೀಡಿದ್ದ ಮೊಹಿಂದರ್‌ ಅಮರ್‌ನಾಥ್‌ (26 ರನ್‌ ಹಾಗೂ 12ಕ್ಕೆ3) ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸಂಕ್ಷಿಪ್ತ ಸ್ಕೋರ್:
ಭಾರತ 54.4 ಓವರ್‌ಗಳಲ್ಲಿ 183 ( ಕೃಷ್ಣಮಾಚಾರಿ ಶ್ರೀಕಾಂತ್ 38, ಮೊಹಿಂದರ್ ಅಮರನಾಥ್ 26, ಆಂಡಿ ರಾಬರ್ಟ್ಸ್ 3/32, ಮಾಲ್ಕಮ್ ಮಾರ್ಷಲ್ 2/24, ಮೈಕೆಲ್ ಹೋಲ್ಡಿಂಗ್ 2/26)

ವೆಸ್ಟ್ ಇಂಡೀಸ್ 52 ಓವರ್‌ಗಳಲ್ಲಿ 140 (ವಿವಿಯನ್ ರಿಚರ್ಡ್ಸ್ 33, ಜೆಫ್ ಡುಜೋನ್ 25 ; ಅಮರನಾಥ್ 3/12, ಮದನ್ ಲಾಲ್ 3/21)

2011ರ ವಿಶ್ವಕಪ್ ಶ್ರೇಷ್ಠ ತಂಡವೊಂದಕ್ಕೆ ದೊರೆತ ಗೆಲುವು. ಆದರೆ, 1983ರಲ್ಲಿ ಭಾರತ ಕ್ರಿಕೆಟ್ ವಿಚಾರದಲ್ಲಿ ಇನ್ನೂ ಎಳಸು. ಆಗ ಸತತ ಎರಡು ಬಾರಿ ವಿಶ್ವಕಪ್ ಗೆದ್ದು, ಮೂರನೆಯ ಟ್ರೋಫಿಯನ್ನು ಸುಲಭವಾಗಿ ಕೊಂಡೊಯ್ಯುವ ಲೆಕ್ಕಾಚಾರದಲ್ಲಿದ್ದ ಬಲಿಷ್ಠ ವೆಸ್ಟ್ ಇಂಡೀಸ್ ತಂಡಕ್ಕೆ ಆಘಾತ ನೀಡಿದ್ದು ಕಪಿಲ್ ದೇವ್ ನೇತೃತ್ವದ ತಂಡ.
ವಿಶ್ವಕಪ್ ಗೆಲ್ಲುವ ರೇಸ್‌ನಲ್ಲಿಯೇ ಇರದಿದ್ದ ಭಾರತ ತಂಡ, ಈ ಗೆಲುವಿನ ಬಳಿಕ ಸಾಕಷ್ಟು ಬದಲಾಯಿತು. ಭಾರತ ಕ್ರಿಕೆಟ್ ತಂಡಕ್ಕೆ ಒಂದು ಸ್ಪಷ್ಟ ರೂಪ ದಕ್ಕತೊಡಗಿತು.

ಮೂರನೇ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಜಯಿಸಬಹುದು ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದರೆ, ಕಪಿಲ್‌ ಬಳಗ ಟ್ರೋಫಿ ಜಯಿಸಿ ಕ್ರಿಕೆಟ್‌ ಜಗತ್ತನ್ನು ನಿಬ್ಬೆರಗಾಗಿಸಿತ್ತು. ಈ ಜಯ ಭಾರತದಲ್ಲಿ ಕ್ರಿಕೆಟ್‌ ಕ್ರೀಡೆಯ ದಿಕ್ಕು–ದೆಸೆಯನ್ನೇ ಬದಲಿಸಿತು ಎದರೆ ತಪ್ಪಾಗಲಾರದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top