fbpx
ಸಮಾಚಾರ

ಮೊದಲ ದಿನವೇ ಸಂಸತ್ ನಲ್ಲಿ ಸೂರ್ಯ ಪ್ರಜ್ವಲ

ಕರ್ನಾಟಕದ ಯುವ ಸಂಸದರಿಬ್ಬರು ಲೋಕಸಭೆಯಲ್ಲಿ ತಮ್ಮ ಮಾತುಗಳ ಮೂಲಕ ಸುದ್ದಿಯಾಗಿ ಭರವಸೆಯ ಯುವ ನಾಯಕರು ಎನಿಸಿಕೊಂಡಿದ್ದಾರೆ. ಅವರೇ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ತೇಜಸ್ವಿ ಸೂರ್ಯ.

ರಾಜ್ಯದಲ್ಲಿ ಅತಿ ಭ್ರಷ್ಟ ಸರ್ಕಾರ ಆಡಳಿತದಲ್ಲಿದೆ ಎಂದು ಕಾಂಗ್ರೆಸ್-ಜೆಡಿಎಸ್ ನ ಮೈತ್ರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಪ್ರಜ್ವಲ್ ರೇವಣ್ಣ ತಿರುಗೇಟು ನೀಡಿದ್ದಾರೆ.

ದೇಶ ಪ್ರಧಾನಿ ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಕಾಣುತ್ತಿದ್ದರೆ, ನಮ್ಮ ಕರ್ನಾಟಕ ರಾಜ್ಯದಲ್ಲಿ ಮಾತ್ರ ಅತ್ಯಂತ ಭ್ರಷ್ಟ, ನಿರಾಸಕ್ತಿಯುತ ಸರ್ಕಾರದಿಂದ ಕುಸಿಯುತ್ತಿದೆ ಎಂದು ನೂತನ ಸಂಸದ ತೇಜಸ್ವಿ ಸೂರ್ಯ ಲೋಕಸಭೆ ಸದನದಲ್ಲಿ ರಾಜ್ಯದ ಮೈತ್ರಿ ಸರ್ಕಾರವನ್ನು ಜರಿದಿದ್ದರು. ತೇಜಸ್ವಿ ಮಾತಿಗೆ ಪ್ರಜ್ವಲ್ ರೇವಣ್ಣ ತಿರುಗೇಟು ನೀಡಿದ್ದಾರೆ.

ತೇಜಸ್ವಿ ಭಾಷಣಕ್ಕೆ ಉತ್ತರ ನೀಡಲು ತಮ್ಮ ಭಾಷಣದ ಸರದಿಗಾಗಿ ಕಾಯುತ್ತಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಕರ್ನಾಟಕದಲ್ಲಿರುವುದು ಕಡು ಭ್ರಷ್ಟ ಸರ್ಕಾರ ಎಂಬ ಆರೋಪ ಶುದ್ಧ ಸುಳ್ಳು. ಲೋಕಸಭೆಯ ದಾರಿ ತಪ್ಪಿಸುವ ಯತ್ನ ಬೇಡ. ನಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡುವ ಮುನ್ನ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ನೀಡಿದ್ದ ಅಕ್ರಮ ಗಣಿಗಾರಿಕೆ ಕುರಿತ ವರದಿಯನ್ನೊಮ್ಮೆ ನೆನಪಿಸಿಕೊಳ್ಳಲಿ. ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿತ್ತು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ತೇಜಸ್ವಿ ಸೂರ್ಯ ಹೆಸರು ಹೇಳದೆಯೇ ತಿರುಗೇಟು ನೀಡಿದರು.

ಇದಕ್ಕೂ ಮುನ್ನ ಮಂಡ್ಯ ಮತ್ತು ರಾಜ್ಯದ ರೈತರ ಬವಣೆ, ಬರಗಾಲದ ಬಗ್ಗೆ ವಿವರಿಸಿದ ಅವರು, ಕಳೆದೊಂದು ವರ್ಷದಲ್ಲಿ 1600 ಮಂದಿ ರೈತರು ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾವೇರಿ ನೀರನ್ನು ಅವಲಂಬಿಸಿರುವ ಮಂಡ್ಯದಲ್ಲಿ ನೀರಿಲ್ಲ. ತಕ್ಷಣವೇ ಮಂಡ್ಯ ರೈತರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಕೆ.ಆರ್.ಎಸ್ ಜಲಾಶಯದಿಂದ ಮಂಡ್ಯಕ್ಕೆ 2 ಟಿಎಂಸಿ ನೀರು ಹರಿಸಲು ಸಕ್ಷಮ ಪ್ರಾಧಿಕಾರಗಳು ಆದೇಶ ನೀಡಬೇಕು ಎಂದು ಒತ್ತಾಯಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top