fbpx
ಸಮಾಚಾರ

ಕರ್ನಾಟಕ ಬಿಜೆಪಿ ಸಂಸದರ ವಿರುದ್ಧ ತಿರುಗಿಬಿದ್ದ ಚಕ್ರವರ್ತಿ ಸೂಲಿಬೆಲೆ

ಲೋಕಸಭೆ ಚುನಾವಣೆ ವೇಳೆ ಮೋದಿ ಗೆಲ್ಲಿಸುವ ಹೊಣೆ ಹೊತ್ತಂತೆ ವರ್ತಿಸಿದ ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಬಿಜೆಪಿಗರೇ ತಿರುಗಿ ಬಿದ್ದಿದ್ದಾರೆ. ನಾಲ್ಕು ಲಕ್ಷ ಮತಗಳ ಅಂತರದಿಂದ ಗೆದ್ದವರೂ ನಲವತ್ತೇ ಸಾವಿರ ಮತಗಳ ಅಂತರದಿಂದ ಗೆದ್ದವರು ಎಲ್ಲರೂ ಮೋದಿ ಮತಭಿಕ್ಷೆಯ ಫಲಾನುಭವಿಗಳೇ ಇದನ್ನು ಅರಿತುಕೊಂಡು ಸಂಸದರು ಕೆಲಸ ಮಾಡಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಬಿಜೆಪಿ ಸಂಸದರ ವಿರುದ್ಧ ಚಾಟಿ ಬೀಸಿದ್ದಾರೆ.

 


ಕೋಟೆನಾಡು ಚಿತ್ರದುರ್ಗದಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರೇ ಜನಸೇವಕರಾದ ಮೇಲೆ ಸಂಸದರು ಯಾವ ಲೆಕ್ಕ ಎಂದು ಪ್ರಶ್ನಿಸಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಆಸ್ಪತ್ರೆ ವಿಚಾರವಾಗಿ ಜನರು ಅನಂತಕುಮಾರ್ ಹೆಗಡೆ ಅವರನ್ನು ಭೇಟಿಯಾಗಲು ಬಂದಾಗ ಅವರು ತೋರಿಸಿರುವ ವರ್ತನೆ ಸರಿಯಲ್ಲ. ಕೊನೆಪಕ್ಷ ಜನರು ಜನಪ್ರತಿನಿಧಿ ಬಳಿ ಬಂದಾಗ ಪ್ರೀತಿಯಿಂದ ಮಾತನಾಡಿಸಿ, ಈ ವಿಚಾರವಾಗಿ ಸಿಎಂ ಜೊತೆ ಮಾತನಾಡುತ್ತೇನೆಂಬ ಭರವಸೆಯಾದರೂ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಕರ್ನಾಟಕದ ಸಂಸದರು ಯಾರು ಸಹ ತಮ್ಮ ವೈಯುಕ್ತಿಕ ವರ್ಚಸ್ಸಿನಿಂದ ಗೆದ್ದಿಲ್ಲ. ಪ್ರಧಾನಿ ಮೋದಿಯವರ ಅಭಿವೃದ್ಧಿ ಹಾಗು ಹಿಂದೂ ರಾಷ್ಟ್ರೀಯ ಚಿಂತನೆಗಳ ಆಧಾರದ ಮೇಲೆ ಗೆದ್ದಿದ್ದಾರೆ. ಮಹಾಘಟಬಂಧನ್ ಕಟ್ಟಿಕೊಂಡು ಕುಮಾರಸ್ವಾಮಿ ರಾಜ್ಯಕ್ಕೆ ಬಂದಾಗ ಬಿಜೆಪಿ ಸಂಸದರೆಲ್ಲರೂ ಗೆಲ್ಲುವ ಆಸೆಯನ್ನು ಬಿಟ್ಟಿದ್ದರು. ಕೇವಲ ಆರು ಅಥವಾ ಏಳು ಸೀಟು ಬರಬಹುದೆಂಬ ಲೆಕ್ಕಾಚಾರ ಶುರುವಾಗಿತ್ತು. ನಮ್ಮ ರಾಜ್ಯದಲ್ಲಿ ಮೋದಿ ಮುಖ ನೋಡಿ 25 ಸ್ಥಾನಗಳನ್ನು ಬಿಜೆಪಿಗೆ ನೀಡಿದ್ದಾರೆ. ಹೀಗಾಗಿ ತಮ್ಮದಲ್ಲದ ಗೆಲುವಿಗೆ ಧಿಮಾಕಿನಿಂದ ಸಂಭ್ರಮಿಸುವ ಬದಲು ಮಾಡಬೇಕಾಗಿರುವ ಕೆಲಸವನ್ನು ಮಾಡಬೇಕು.”

ಈ ಸಂಬಂಧ ತಮ್ಮ ಫೇಸ್ ಬುಕ್ ಪೋಸ್ಚ್ ನಲ್ಲಿ ಬರೆದುಕೊಂಡಿರುವ ಚಕ್ರವರ್ತಿ ಸೂಲಿಬೆಲೆ ಮೋದಿ ಒಬ್ಬರು ಇಲ್ಲದೇ ಹೋಗಿದ್ದರೆ ಕರ್ನಾಟಕದ ಬಹುತೇಕ ಸಂಸದರ ಪರಿಸ್ಥಿತಿ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಎಚ್ ಮುನಿಯಪ್ಪನವರಿಗಿಂತಲೂ ಭಿನ್ನವಾಗಿರುತ್ತಿರಲಿಲ್ಲ. ಸೋಲು ಹೀನಾಯವಾಗಿರುತ್ತಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗೆಯೆ ಜಾತಿ ಬೆಂಬಲದಿಂದ ಗೆದ್ದಿದ್ದೇನೆಂದರೆ ಮತದಾರರು ಒಪ್ಪುವುದಿಲ್ಲ ಎಂದು ಕೇಂದ್ರ ಸಚಿವ ಸದಾನಂದಗೌಡರಿಗೆ ಟಾಂಗ್ ನೀಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top