fbpx
ಸಮಾಚಾರ

ಯಾರ ಮಗನೇ ಆಗಲಿ, ನಿರ್ದಾಕ್ಷಿಣ್ಯ ಕ್ರಮ- ಬಿಜೆಪಿ ಶಾಸಕರು, ಸಂಸದರಿಗೆ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ

ಸರ್ಕಾರಿ ನೌಕರನ ಮೇಲೆ ಕ್ರಿಕೆಟ್ ಬ್ಯಾಟಿನಿಂದ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಬಿಜೆಪಿ ಶಾಸಕ ಆಕಾಶ್ ವಿಜಯವರ್ಗೀಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸಂಸದೀಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದಾಗ ಪ್ರಧಾನಿ ಮೋದಿ ಪಕ್ಷದ ಸಂಸದರಿಗೆ ಈ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ಯಾವುದೇ ರಾಜಕೀಯ ನಾಯಕ ಕಾನೂನು ಕೈಗೆತ್ತಿಕೊಳ್ಳುವುದನ್ನು ಬೆಂಬಲಿಸುವವರ ವಿರುದ್ದ ಬಿಜೆಪಿ ನಾಯಕತ್ವ ಕಠಿಣ ಕ್ರಮ ಜರುಗಿಸಬೇಕು ಎಂದು ಪ್ರಧಾನಿ ಮೋದಿ ಸಭೆಯಲ್ಲಿ ಸಲಹೆ ನೀಡಿದರು.

ಘಟನೆ ಕುರಿತು ತೀವ್ರ ಆಕ್ರೋಶ ಗೊಂಡಂತೆ ಕಂಡು ಬಂದ ಪ್ರಧಾನಿ, ಘಟನೆಯ ಹಿಂದೆ ಯಾವ ನಾಯಕನ ಪುತ್ರ ಇದ್ದಾನೆ ಎಂಬುದನ್ನು ತಾವು ಕೇರ್ ಮಾಡುವುದಿಲ್ಲ, ಇಂತಹ ಘಟನೆಗಳು ನಡೆಯಬಾರದು ಹಾಗೂ ಇಂತಹ ಕೃತ್ಯಗಳನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ. ಯಾವ ನಾಯಕನ ಮಗನೇ ಆಗಿರಲಿ, ಇಂತಹ ಕೃತ್ಯ ನಡೆಸುವವರನ್ನು ಸಹಿಸಲು ಆಗುವುದಿಲ್ಲ. ಪಕ್ಷಕ್ಕೆ ಕೆಟ್ಟ ಹೆಸರು ತರುವುದನ್ನು ಸಹಿಸುವುದಿಲ್ಲ.ಇದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ ಎಂದರು. ಎಂದು ಪ್ರಧಾನಿ ಮೋದಿ ಬಿಜೆಪಿ ಸಂಸದರಿಗೆ ಸೂಚಿಸಿದರೆಂದು ವರದಿಯಾಗಿದೆ.

ಏನಿದು ಘಟನೆ:
ಬಿಜೆಪಿ ಹಿರಿಯ ನಾಯಕ ಕೈಲಾಷ್‌ ವಿಜಯವರ್ಗೀಯ ಅವರ ಪುತ್ರ ಮಧ್ಯಪ್ರದೇಶದ ಇಂಧೋರ್‌ನ ಶಾಸಕ ಆಕಾಶ್‌ ವಿಜಯ್‌ ವರ್ಗೀಯ ಅವರು ಸಾರ್ವಜನಿಕರವಾಗಿ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಕ್ರಿಕೆಟ್‌ ಬ್ಯಾಟ್‌ನಿಂದ ಹಲ್ಲೆ ನಡೆಸಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಜೈಲಿನಿಂದ ಹೊರ ಬಂದ ಅವರಿಗೆ ಸಂಭ್ರಮಾಚರಣೆಯ ಸ್ವಾಗತವೂ ದೊರಕಿತ್ತು. ಈ ಘಟನೆ ಬಿಜೆಪಿಗೆ ತೀವ್ರ ಮುಜುಗರವನ್ನು ತಂದಿಟ್ಟಿತ್ತು, ವಿಪಕ್ಷಗಳು ವ್ಯಾಪಕ ಟೀಕಾ ಪ್ರಹಾರವನ್ನು ನಡೆಸಿದ್ದವು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top