fbpx
ಸಮಾಚಾರ

ಹೆಚ್ಚುತ್ತಿರುವ ತೆಲುಗು ಪ್ರಭಾವ: ತಮ್ಮ ಧರ್ಮದವರಿಗೆ 5 ವರ್ಷಗಳಿಂದ ಉಚಿತವಾಗಿ ಕನ್ನಡ ಕಲಿಸುತ್ತಿರುವ ಖಾಜಿಸಾಬ್.

ಆಂಧ್ರ ಪ್ರದೇಶದ ಗಡಿ ಭಾಗದಲ್ಲಿ ಇರುವ ಬಳ್ಳಾರಿ ಜಿಲ್ಲೆಯಲ್ಲಿ ತೆಲುಗು ಭಾಷೆಯ ಪ್ರಭಾವವೇ ಹೆಚ್ಚು. ಜನರಿಗೆ ಕನ್ನಡ ಮಾತನಾಡಲು ಬಂದರೂ ತೆಲುಗು ಭಾಷೆಯಲ್ಲಿ ವ್ಯವಹರಿಸುವವರೇ ಇಲ್ಲಿ ಅಧಿಕ. ಈ ಜಿಲ್ಲೆ ಕರ್ನಾಟಕಕ್ಕೆ ಸೇರಿದ್ದರೂ, ದಿನ ಕಳೆದಂತೆ ಇಲ್ಲಿ ಕನ್ನಡ ಭಾಷೆ ಕಣ್ಮರೆಯಾಗುತ್ತಿದೆ.

ಇದರಿಂದ ಬೇಸರಗೊಂಡಿರುವ ಮುಸ್ಲಿಮ್ ಧರ್ಮಗುರುಗಳೊಬ್ಬರು ತಮ್ಮ ಧರ್ಮದ ಜನರಿಗೆ ಕಳೆದ ಐದು ವರ್ಷಗಳಿಂದ ಉಚಿತವಾಗಿ ಕನ್ನಡ ಭಾಷೆ ಕಲಿಸುತ್ತಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಕನ್ನಡದ ಭಾಷಾಭಿಮಾನ ಮೆರೆಯುತ್ತಿದ್ದಾರೆ. ಬಳ್ಳಾರಿಯ ನಿವಾಸಿಯಾಗಿರುವ ಖಾಜಿಸಾಬ್ ಎಂಬುವವರು ಸ್ನಾತಕೋತ್ತರ ಇಂಗ್ಲಿಷ್ ಪದವಿಯನ್ನು ಹಾಗೂ ಅರೇಬಿಕ್ ಪದವಿಯನ್ನು ಪಡೆದಿರುವ ಅವರು, ಕನ್ನಡದ ಜತೆಗೆ, ಕೆಲವರಿಗೆ ಇಂಗ್ಲಿಷ್ ಅನ್ನು ಕೂಡ ಹೇಳಿಕೊಡುತ್ತಿದ್ದಾರೆ.

ವೇತನವನ್ನು ಬಯಸದೆ ಬಾಷಾ ಮತ್ತು ಆಫ್ರೀನ್ ಎಂಬ ನಿವೃತ್ತ ಶಿಕ್ಷಕರು ನಡೆಸುತ್ತಿರುವ ಕನ್ನಡ ಕಟ್ಟುವ ಕೆಲಸದಲ್ಲಿ ಖಾಜಿಸಾಬ್ ಅವರು ಕೂಡ ಕೈಜೋಡಿಸಿದ್ದಾರೆ. ವಾರದ ನಾಲ್ಕು ದಿನ (ಭಾನುವಾರ, ಸೋಮವಾರ, ಬುಧವಾರ, ಶುಕ್ರವಾರ) ಬೆಳಗ್ಗೆ 6-30ರಿಂದ 7-30ರವರೆಗೆ ಹಾಗೂ ಸಂಜೆ 5-30ರಿಂದ 6-30ರವರೆಗೆ ಕನ್ನಡ ತರಗತಿ ನಡೆಸಲಾಗುತ್ತದೆ. ಈ ತರಗತಿಗಳಲ್ಲಿ ಶಾಲಾ ಮಕ್ಕಳು, ಯುವಕರು, ವಯಸ್ಸಾದವರಾದಿ ಎಲ್ಲರೂ ಹಾಜರಾಗುತ್ತಿದ್ದಾರೆ.

ಮೊದಮೊದಲು ತಮ್ಮ ಮನೆಯಲ್ಲಿ ಖಾಜಿಸಾಬ್ ಕನ್ನಡ ಪಾಠ ಮಾಡುತ್ತಿದ್ದರು. ಕಳೆದ ವರ್ಷ ತಮ್ಮ ಸ್ವಂತ ಖರ್ಚಿನಲ್ಲಿ ತರಗತಿ ತೆರೆದು ಅಲ್ಲಿ ಕನ್ನಡ ಪಾಠ ಮಾಡುತ್ತಿದ್ದಾರೆ. ದಿನನಿತ್ಯ ಬಂದವರ ಹಾಜರಿ ಹಾಕಿಕೊಳ್ಳುತ್ತಾರೆ. ಕನ್ನಡ ಕಲಿಯಲು ಬಂದವರು ಎಷ್ಟರಮಟ್ಟಿಗೆ ಇದನ್ನು ಕಲಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಬಗ್ಗೆ ವಾರಕ್ಕೊಮ್ಮೆ ಪರಿಶೀಲನೆ ಕೂಡ ಮಾಡುತ್ತಾರೆ.

“ಬಳ್ಳಾರಿಯಲ್ಲಿ ಕನ್ನಡ ಕಣ್ಮರೆಯಾಗಿ ತೆಲುಗುಮಯವಾಗುತ್ತಿದೆ. ಹಾಗಾಗಿ ನಾವು ಇಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಬೇಕು. ಜೊತೆಗೆ ಹಿಂದೂ ಮುಸ್ಲಿಂ ಸಮುದಾಯದ ಜನರು ಕನ್ನಡದಲ್ಲಿ ಸಂವಹನ ನಡೆಸಲು ಎಂಬ ಉದ್ದೇಶದಿಂದ ಕನ್ನಡ ಪಾಠ ಹೇಳಿ ಕೊಡುತ್ತಿದ್ದೇನೆ. ಅನಕ್ಷರಸ್ಥರು ಇದೀಗ ಸಲೀಸಾಗಿ ಕನ್ನಡ ಓದುವುದು, ಬರೆಯುವುದನ್ನು ಕಲಿತುಕೊಂಡಿದ್ದಾರೆ. “ ಎಂದು ಖಾಜಿ ಸಾಬ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top