fbpx
ಸಮಾಚಾರ

ಅನರ್ಹರ ಮುಂದಿನ ಹೆಜ್ಜೆ ಏನು? ಉಪಚುನಾವಣೆ ಸ್ಪರ್ಧಿಸಬಹುದೇ? 2018ರಲ್ಲಿ ತಮಿಳುನಾಡಿನಲ್ಲಿ ಆಗಿದ್ದೇನು?

ದೋಸ್ತಿ ಸರಕಾರದ ವಿರುದ್ಧ ಬಂಡಾಯ ಸಾರಿದ್ದ ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ, ಅಥಣಿ ಕ್ಷೇತ್ರದ ಶಾಸಕ ಮಹೇಶ್‌ ಕುಮಟಳ್ಳಿ,ರಾಣೆಬೆನ್ನೂರು ಶಾಸಕ ಆರ್‌. ಶಂಕರ್‌ ಅವರನ್ನು ಪಕ್ಷಾಂತರ ನಿಷೇಧ ಕಾಯಿದೆಯಡಿ ವಿಧಾನಸಭಾ ಸ್ಪೀಕರ್‌ ಕೆ.ಆರ್‌. ರಮೇಶ್‌ ಕುಮಾರ್‌ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.

ಅನರ್ಹಗೊಂಡ ಶಾಸಕರು ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ಈ ವಿಧಾನಸಭೆ ಅವಧಿ ಇರುವವರೆಗೂ ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಆದರೆ ಇವರು ಕಾನೂನು ಹೋರಾಟ ನಡೆಸಬಹುದು ಎಂದು ರಮೇಶ್‌ ಕುಮಾರ್‌ ಸ್ಪಷ್ಟಪಡಿಸಿದರು.

ಸ್ಪೀಕರ್ ಆದೇಶ ಹೊರಬರುತ್ತಲೇ ಅನರ್ಹಗೊಂಡವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ತಮಿಳುನಾಡು ಮಾದರಿಯಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಅನರ್ಹತೆ ವಿಚಾರ ಪ್ರಶ್ನೆ ಮಾಡಿ ಅನರ್ಹಗೊಂಡಿರುವವರು ಸುಪ್ರೀಂ ಕೋರ್ಟ್ ಮೆಟ್ಟಿಲು ಏರುವುದು ಪಕ್ಕಾ ಆಗಿದೆ.

ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವಂತಿಲ್ಲ. ಆದರೆ ಬೇರೆ ಪಕ್ಷದಿಂದ ಸ್ಪರ್ಧಿಸಲು ಅವಕಾಶ ಇದೆ ಎಂದು ಕಾನೂನು ಪಂಡಿತರು ಹೇಳಿರುವುದು ಅನರ್ಹರಿಗೆ ಶಕ್ತಿ ತಂದಿದೆ.

ತಮಿಳುನಾಡಿನಲ್ಲಿ ಏನಾಗಿತ್ತು:
2018ರಲ್ಲಿ ಎಐಎಡಿಎಂಕೆ ಸರ್ಕಾರದ ವಿರುದ್ಧ ಬಂಡೆದ್ದು ಎಎಂಎಂಕೆ ಪಕ್ಷದ ಸಂಸ್ಥಾಪಕ ಟಿ.ಟಿ.ವಿ.ದಿನಕರನ್‌ ಪರ ವಾಲಿದ್ದ ತಮಿಳುನಾಡಿನ 18 ಶಾಸಕರನ್ನು ಅಲ್ಲಿನ ವಿಧಾನಸಭಾ ಸ್ಪೀಕರ್‌ ಅನರ್ಹಗೊಳಿಸಿದ್ದರು. ಇದನ್ನು ಮದ್ರಾಸ್‌ ಹೈಕೋರ್ಟ್‌ ಕೂಡ ಎತ್ತಿ ಹಿಡಿದಿತ್ತು. ಆದರೆ ಈ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ್ದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾವತ್‌, ಅನರ್ಹಗೊಂಡವರು ಉಪಚುನಾವಣೆ ಸ್ಪರ್ಧಿಸಲು ಅಡ್ಡಿಯಿಲ್ಲ ಎಂಬರ್ಥದ ವಿವರಣೆ ನೀಡಿದ್ದರು.

ಈ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಿ ಪುನರಾಯ್ಕೆಯಾಗಲು ಯಾವುದೇ ಅಡ್ಡಿಯಿಲ್ಲ ಎಂಬಂಥ ಮಾತನ್ನಾಡಿದ್ದರು. ಇದು ಸರಿಯೇ ಆಗಿದ್ದಲ್ಲಿ, ಇದೀಗ ಸ್ಪೀಕರ್‌ ತೀರ್ಪಿನಂತೆ ಅನರ್ಹಗೊಂಡ ಆರ್‌.ಶಂಕರ್‌, ರಮೇಶ್‌ ಜಾರಕಿಹೊಳಿ ಹಾಗೂ ಮಹೇಶ್‌ ಕುಮಟಳ್ಳಿ ಅವರುಗಳು ಉಪಚುನಾವಣೆ ಸ್ಪರ್ಧಿಸಲು ಯಾವುದೇ ಅಡ್ಡಿ ಉಂಟಾಗಲಾರದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top