fbpx
ಸಮಾಚಾರ

ಬಿಜೆಪಿ ಶಾಸಕ ಆರೋಪಿ ಉನ್ನಾವೋ ಗ್ಯಾಂಗ್ ರೇಪ್: ಸಂತ್ರಸ್ಥೆಯನ್ನೇ ಕೊಲ್ಲುವ ಯತ್ನ? ಶಾಸಕನ ವಿರುದ್ಧ ಕೊಲೆ ಯತ್ನ ಕೇಸ್ ದಾಖಲು!

ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದ ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಸಂಚರಿಸುತ್ತಿದ್ದ ಕಾರು ಭಾನುವಾರ ಅಪಘಾತಕ್ಕೀಡಾಗಿದೆ. ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಅಪಘಾತ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು, ಈ ಸಂಭಂದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ವಿರುದ್ಧ ಸೋಮವಾರ ಕೊಲೆ ಪ್ರಕರಣ ದಾಖಲಾಗಿದೆ.

ಬಿಜೆಪಿ ಶಾಸಕ ಕುಲದೀಪ್‌ ಸೆಂಗರ್‌ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಯುವತಿ, ಆಕೆಯ ವಕೀಲ ಹಾಗೂ ಇಬ್ಬರು ಸಾಕ್ಷಿಗಳು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾಕ್ಷಿಗಳು ಮೃತಪಟ್ಟಿದ್ದರು.. ರಾಜಕೀಯವಾಗಿಯೂ ತೀವ್ರ ಆರೋಪ-ಪ್ರತ್ಯಾರೋಪಕ್ಕೆ ಎಡೆಮಾಡಿಕೊಟ್ಟಿದ್ದ ಪ್ರಕರಣವು, ಈಗ ಅಪಘಾತದ ಹಿಂದಿನ ಕೈವಾಡದ ಬಗ್ಗೆ ಹಲವು ಸಂಶಯಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಇದರೊಂದಿಗೆ ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ಸೆಂಗರ್‌ ಆರೋಪಿಯಾಗಿರುವ ಈ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ.

ಈ ನಡುವೆ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಸಿಬಿಐನ ವಿಧಿವಿಜ್ಞಾನ ತಜ್ಞರ ತಂಡ ಅಪಘಾತ ಸ್ಥಳಕ್ಕೆ ಭೇಟಿ ನೀಡಿ, ಸಾಕ್ಷ್ಯ ಸಂಗ್ರಹಿಸಿದೆ. ಮತ್ತೊಂದು ತಂಡ ಗಾಯಾಳುಗಳಿಂದ ಹೇಳಿಕೆ ಪಡೆದಿದೆ. ಕಾರು ಅಪಘಾತ ಆಕಸ್ಮಿಕವಲ್ಲ. ಇಡೀ ಕುಟುಂಬ ನಾಶ ಮಾಡುವ ಪೂರ್ವಯೋಜಿತ ಕೃತ್ಯ ಎಂದು ಅತ್ಯಾಚಾರ ಸಂತ್ರಸ್ತೆ ಮನೆಯವರು ಆರೋಪಿಸಿದ್ದಾರೆ. ಅಪಘಾತದ ಹಿಂದೆ ಅತ್ಯಾಚಾರ ಪ್ರಕರಣದ ಆರೋಪಿಯಾದ ಬಿಜೆಪಿ ಶಾಸಕ ಕುಲದೀಪ್ ಕೈವಾಡ ಇದೆ. ಆದ್ದರಿಂದ ಸಿಬಿಐ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಲವಾರು ಆಗ್ರಹಿಸಿದ್ದಾರೆ.

ಏನಿದು ಪ್ರಕರಣ?
2017ರಲ್ಲಿ ಉನ್ನವೊನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಇದಾಗಿ, 2018ರಲ್ಲಿ ತಮ್ಮ ದೂರಿಗೆ ಪೊಲೀಸರು ಸ್ಪಂದಿಸುತ್ತಿಲ್ಲ, ಸರಕಾರ ಮೌನ ವಹಿಸಿದೆ ಎಂದು ಆರೋಪಿಸಿ ಸಂತ್ರಸ್ತ ಕುಟುಂಬದ ಸದಸ್ಯರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನಿವಾಸದ ಎದರು ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದಾಗ ಪ್ರಕರಣ ದೇಶವ್ಯಾಪಿ ಸುದ್ದಿಯಾಗಿತ್ತು. ಬಳಿಕ, ಆರೋಪಿ ಶಾಸಕ ಮತ್ತು ಅವರ ಸಹವರ್ತಿಗಳನ್ನು ಪೊಲೀಸರು ಬಂಧಿಸಿದ್ದರು. 2018ರಿಂದ ಕುಲದೀಪ್ ತನ್ನ ಸಹೋದರ ಅತುಲ್ ಸಿಂಗ್ ಜತೆ ಜೈಲಿನಲ್ಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top