fbpx
ಸಮಾಚಾರ

ಸಿದ್ದಾರ್ಥ್ ಸಾವಿನ ವಿಚಾರವಾಗಿ ಕೇಂದ್ರದ ವಿರುದ್ಧ ಕಿಡಿ ಕಾರಿದ ಮಮತಾ ದೀದಿ.

ಕಾಫಿ ಡೇ ಮಾಲೀಕ ವಿ.ಜಿ ಸಿದ್ಧಾರ್ಥ್ ಅವರ ಸಾವಿನ ಸುದ್ದಿ ತಿಳಿದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಈ ಬಗ್ಗೆ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸಿದ್ಧಾರ್ಥ ಅವರು ತಮ್ಮ ವ್ಯವಹಾರವನ್ನು ಶಾಂತಿಯುತವಾಗಿ ನಡೆಸಿಕೊಂಡು ಹೋಗಲು ಹಲವು ಏಜೆನ್ಸಿಗಳು ಅವಕಾಶ ನೀಡಲಿಲ್ಲ. ಏಜೆನ್ಸಿಗಳ ದೌರ್ಜನ್ಯದಿಂದಾಗಿ ಅವರು ಖಿನ್ನತೆಗೆ ಒಳಗಾಗಿದ್ದು ಅವರು ಬರೆದ ಪತ್ರದಲ್ಲಿ ವ್ಯಕ್ತವಾಗಿದೆ ಎಂದು ಪರೋಕ್ಷವಾಗಿ ಆದಾಯ ತೆರಿಗೆ ಇಲಾಖೆ ವಿರುದ್ಧ ಬ್ಯಾನರ್ಜಿ ಹರಿಹಾಯ್ದಿದ್ದಾರೆ.

 

 

. “ಕೇಂದ್ರ ಸರ್ಕಾರ ಶಾಂತಿಯುತವಾಗಿ ಆಡಳಿತ ನಡೆಸಿ, ದ್ವೇಷ ರಾಜಕಾರಣವನ್ನು ಬದಿಗಿಟ್ಟು ತನಿಖಾ ಸಂಸ್ಥೆಗಳನ್ನು ದೇಶದ ಭವಿಷ್ಯವನ್ನು ನಾಶಮಾಡದಂತೆ ನೋಡಿಕೊಳ್ಳಬೇಕಿದೆ. ದೇಶದಲ್ಲಿ ಉದ್ಯಮಿಗಳಿಗೆ ಉಂಟಾಗುತ್ತಿರುವ ಕಿರುಕುಳಗಳನ್ನು ತಡೆಯಲು ಏನಾದರೂ ಮಾಡಲೇಬೇಕಿದೆ. ರಾಜಕೀಯ ದ್ವೇಷ ಸಾಧನೆಗಾಗಿ ಕುದುರೆ ವ್ಯಾಪಾರ ಮತ್ತು ಕಿರುಕುಳ ನೀಡಲಾಗುತ್ತಿರುವ ವಿಚಾರ ಪ್ರತಿಪಕ್ಷಗಳಲ್ಲಿ ಆತಂಕ ಸೃಷ್ಟಿಸಿದೆ.”

“ಒಂದೆಡೆ ದೇಶದ ಆರ್ಥಿಕ ಬೆಳವಣಿಗೆ ತೀವ್ರ ಕುಸಿದಿದೆ. 2018-19ರ ಕೊನೆಯ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆ ದರ ಶೇ 5.8ಕ್ಕೆ ಕುಸಿದಿತ್ತು. ಇದು ಕಳೆದ 5 ವರ್ಷಗಳಲ್ಲೇ ಅತಿ ಕಡಿಮೆ. ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಅತ್ಯಧಿಕ ಎನ್ನುವಷ್ಟು ಹೆಚ್ಚಿದೆ. ಇನ್ನೊಂದೆಡೆ ಕೇಂದ್ರ ಸರಕಾರ ಶಸ್ತ್ರಾಸ್ತ್ರ ಕಾರ್ಖಾನೆಯಿಂದ ತೊಡಗಿ ಬಿಎಸ್‌ಎನ್‌ಎಲ್‌ ವರೆಗೆ, ಏರ್‌ ಇಂಡಿಯಾದಿಂದ ರೈಲ್ವೇ ತನಕ ಎಲ್ಲ ಪ್ರಮುಖ ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಬಂಡವಾಳ ಹಿಂತೆಗೆತಕ್ಕೆ ಮುಂದಾಗಿದೆ. ಒಟ್ಟಾರೆ ಅರ್ಥ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಜನಸಾಮಾನ್ಯರು ತೊಂದರೆಗೆ ಈಡಾಗಿದ್ದಾರೆ. ”

“ಕೈಗಾರಿಕೆ ಮತ್ತು ಕೃಷಿ ಹಾಗೂ ಉದ್ಯೋಗ ಸೃಷ್ಟಿ ಈ ದೇಶದ ಭವಿಷ್ಯ ಅಡಗಿದೆ. ಕೈಗಾರಿಕೆಯನ್ನು ನಾಶಗೊಂಡರೆ ಅದು ಆರ್ಥಿಕತೆ ಮತ್ತು ಉದ್ಯೋಗ ಬೆಳವಣಿಗೆ ಮೇಲೆ ಹೊಡೆತ ನೀಡಲಿದೆ. ಇದರ ಪರಿಣಾಮ ಲಕ್ಷಾಂತರ ಜನರು ಕೆಲಸವಿಲ್ಲದೆ ನಿರುದ್ಯೋಗಿಗಳಾಗುತ್ತಾರೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

“ಸರ್ಕಾರವು ಶಾಂತಿಯುತವಾಗಿ ಕೆಲಸ ನಿರ್ವಹಿಕೊಂಡು ಜನರು ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸಿಕೊಡಬೇಕು. ರಾಜಕೀಯ ದ್ವೇಷ ಹಾಗೂ ತನಿಖಾ ಸಂಸ್ಥೆಗಳು ದೇಶದ ಭವಿಷ್ಯವನ್ನು ನಾಶಗೊಳಿಸದಂತೆ ನೋಡಿಕೊಳ್ಳಬೇಕು ಎಂದು ನಾನು ಕೇಂದ್ರ ಸರ್ಕಾರಕ್ಕೆ ಮಾನವಿ ಮಾಡುತ್ತಿದ್ದೇನೆ. ಸಿದ್ಧಾರ್ಥ ಅವರ ಕುಟುಂಬ ಸದಸ್ಯರಿಗೆ ನನ್ನ ಭಾವಪೂರ್ಣ ಸಾಂತ್ವನಗಳು. ಈ ದುರದೃಷ್ಟಕರ ಸುದ್ದಿ ತಿಳಿದು ನನಗೆ ನಿಜಕ್ಕೂ ನೋವಾಗಿದೆ. ನಿಮ್ಮೆಲ್ಲರ ನೋವಿನಲ್ಲಿ ನಾನೂ ಭಾಗಿಯಾಗಿರುತ್ತೇನೆ.” ಎಂದು ಫೇಸ್‍ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಅಂದಹಾಗೆ ಸೋಮವಾರ ರಾತ್ರಿ ಜಪ್ಪಿನಮೊಗರು ಎಂಬಲ್ಲಿ ನೇತ್ರಾವತಿ ನದಿಗೆ ನಿರ್ಮಿಸಿರುವ ಸೇತುವೆ ಬಳಿ ಕಾಣೆಯಾಗಿದ್ದ ಸಿದ್ಧಾರ್ಥ್, ಸುಮಾರು 36 ಗಂಟೆಗಳ ಶೋಧ ಕಾರ್ಯದ ನಂತರ ಇಂದು ಬೆಳಗ್ಗೆ ಸುಮಾರು 6.30ರ ವೇಳೆಗೆ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳೀಯ ಮೀನುಗಾರರು ಮೀನು ಹಿಡಿಯಲು ಹೋದಾಗ ಮಂಗಳೂರು- ಉಳ್ಳಾಲ ನಡುವೆ ಇರುವ ನೇತ್ರಾವತಿ ನದಿ ಸಮೀಪದ ಹೊಯಿಗೆ ಬಜಾರ್ ಎಂಬ ಪ್ರದೇಶದಲ್ಲಿ ಸಿದ್ಧಾರ್ಥ್ ಶವ ದೊರೆತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top