fbpx
ಸಮಾಚಾರ

ದುರ್ವಿಧಿಯೇ -ಸಿದ್ದಾರ್ಥ್ ಅವರ ತಂದೆಗೆ ಗೊತ್ತಿಲ್ಲ ಮಗನ ಸಾವಿನ ಸುದ್ದಿ, ಅಂತ್ಯಕ್ರಿಯೆಯಲ್ಲೂ ಭಾಗವಹಿಸಲ್ಲ!

ಆತ್ಮಹತ್ಯೆಗೆ ಶರಣಾಗಿರುವ ಸಿದ್ಧಾರ್ಥ್ ಅವರ ತಂದೆ ಗಂಗಯ್ಯ ಹೆಗ್ಡೆ ಅವರು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಮಾ ಸ್ಥಿತಿಯಲ್ಲಿ ಇರುವ ಅವರಿಗೆ ಮಗನ ಸಾವಿನ ಬಗ್ಗೆ ತಿಳಿದೇ ಇಲ್ಲ.

ಗೋಪಾಲಗೌಡ ಆಸ್ಪತ್ರೆ ಮಾಲೀಕ ಸಂತೃಪ್ತ ಹೆಗ್ಡೆ ಅವರು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಸಂಬಂಧಿ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳು ಹಾಗೂ ಸಾರ್ವಜನಿಕರಿಗೆ ಸಿದ್ಧಾರ್ಥ್ ತಂದೆ ಕುರಿತು ಮಾಹಿತಿ ನೀಡದೇ ಗೌಪ್ಯವಾಗಿ ಇಟ್ಟಿದ್ದರು. ಆಸ್ಪತ್ರೆ ಸಿಬ್ಬಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ಗಂಗಯ್ಯ ಹೆಗಡೆ ಅವರು ಸಿದ್ದಾರ್ಥ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿದು ಬಂದಿದೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಸಿದ್ಧಾರ್ಥ ಅವರ ತಂದೆ ಗಂಗಯ್ಯ ಹೆಗ್ಡೆ ಅವರು ಮನೆಯಲ್ಲಿ ಕಾಲು ಜಾರಿ ಬಿದ್ದು ಕೋಮಾಗೆ ಜಾರಿದ್ದಾರೆ. ಗುರುವಾರವಷ್ಟೇ ಸಿದ್ದಾರ್ಥ ಮೈಸೂರಿಗೆ ಆಗಮಿಸಿ, ತಂದೆ ಆರೋಗ್ಯ ವಿಚಾರಿಸಿದ್ದರು. ಮತ್ತೆ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದರು.

ಅಂದಹಾಗೆ ಸೋಮವಾರ ರಾತ್ರಿ ಜಪ್ಪಿನಮೊಗರು ಎಂಬಲ್ಲಿ ನೇತ್ರಾವತಿ ನದಿಗೆ ನಿರ್ಮಿಸಿರುವ ಸೇತುವೆ ಬಳಿ ಕಾಣೆಯಾಗಿದ್ದ ಸಿದ್ಧಾರ್ಥ್, ಸುಮಾರು 36 ಗಂಟೆಗಳ ಶೋಧ ಕಾರ್ಯದ ನಂತರ ಇಂದು ಬೆಳಗ್ಗೆ ಸುಮಾರು 6.30ರ ವೇಳೆಗೆ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳೀಯ ಮೀನುಗಾರರು ಮೀನು ಹಿಡಿಯಲು ಹೋದಾಗ ಮಂಗಳೂರು- ಉಳ್ಳಾಲ ನಡುವೆ ಇರುವ ನೇತ್ರಾವತಿ ನದಿ ಸಮೀಪದ ಹೊಯಿಗೆ ಬಜಾರ್ ಎಂಬ ಪ್ರದೇಶದಲ್ಲಿ ಸಿದ್ಧಾರ್ಥ್ ಶವ ದೊರೆತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top