fbpx
ಸಮಾಚಾರ

ಇಂದು ಭಾರತ-ವಿಂಡೀಸ್‌ ಮೊದಲ ಟಿ20: ನಾಲ್ಕನೇ ಸ್ಥಾನಕ್ಕೆ ಕನ್ನಡಿಗರ ನಡುವೆಯೇ ಫೈಟ್.

ವಿಶ್ವಕಪ್ ಸೋಲಿನಿಂದ ಆಘಾತಗೊಂಡಿದ್ದ ಟೀಂ ಇಂಡಿಯಾಗೆ, ಸೋಲಿನ ಕಹಿ ಮರೆಯಲು ಕೆರಿಬಿಯನ್ ಪ್ರವಾಸ ಎದುರಾಗಿದೆ. ಇಂದು ಅಮೆರಿಕದ ಫ್ಲೋರಿಡಾದಲ್ಲಿ ಭಾರತ ಹಾಗೂ ವೆಸ್ಟ್‌ ಇಂಡೀಸ್‌ ನಡುವೆ ಮೊದಲ ಟಿ-20 ಕದನ ನಡೆಯಲಿದೆ.

 

 

ಈ ಸರಣಿಯೊಂದಿಗೆ ಟೀಂ ಇಂಡಿಯಾ 2020ರ ಐಸಿಸಿ ಟಿ20 ವಿಶ್ವಕಪ್‌ಗೆ ಅಧಿಕೃತವಾಗಿ ಸಿದ್ಧತೆ ಆರಂಭಿಸಲಿದೆ. ಬಿಸಿಸಿಐ ಆಯ್ಕೆಗಾರರು ಕೆಲ ಯುವ ಆಟಗಾರರನ್ನು ಗುರುತಿಸಿದ್ದು, ಆ ಆಟಗಾರರಿಗೆ ಈ ಸರಣಿಯಲ್ಲಿ ಅವಕಾಶ ನೀಡಲಾಗುತ್ತದೆ ಎಂದು ನಾಯಕ ವಿರಾಟ್‌ ಕೊಹ್ಲಿ ಪ್ರವಾಸಕ್ಕೆ ತೆರಳುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಈ ಸರಣಿ ಮೊದಲ ಹೆಜ್ಜೆಯಾಗಲಿದೆ.

ವಿಶ್ವಕಪ್ ಟೂರ್ನಿ ವೇಳೆಯಲ್ಲಿ ಗಾಯಗೊಂಡಿದ್ದ ಆರಂಭಿಕ ಆಟಗಾರ ಶಿಖರ್ ಧವನ್ ಭಾನುವಾರವೇ ಸೀಮಿತ ಓವರ್ ಗಳ ತಂಡಕ್ಕೆ ಮರಳಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಎರಡು ತಿಂಗಳ ಕಾಲ ರಜೆ ಹಿನ್ನೆಲೆಯಲ್ಲಿ ರಿಷಬ್ ಪಂಥ್, ವೆಸ್ಟ್ ಇಂಡೀಸ್ ವಿರುದ್ಧದ ಮೂರು ಮಾದರಿಯ ಸರಣಿಯಲ್ಲೂ ಪಾಲ್ಗೊಳ್ಳಲಿದ್ದಾರೆ.

ನಾಲ್ಕನೇ ಸ್ಥಾನಕ್ಕೆ ಕನ್ನಡಿಗರಲ್ಲೇ ಫೈಟ್:
ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಕಣಕ್ಕಿಳಿದರೆ, ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿ ಆಡಲಿದ್ದಾರೆ. ಆದರೆ 4, 5 ಸ್ಥಾನದಲ್ಲಿ ಯಾವ ಆಟಗಾರ ಆಡಲಿದ್ದಾನೆ ಎಂಬುದೆ ಕುತೂಹಲ. ಕನ್ನಡಿಗರಾದ ಕೆ ಎಲ್ ರಾಹುಲ್, ಹಾಗೂ ಮನೀಶ್ ಪಾಂಡೆ ಪ್ರಮುಖ ಅಸ್ತ್ರವಾದರೆ, ಶ್ರೇಯಸ್ ಐಯರ್ ಕೂಡ ರೇಸ್​​ನಲ್ಲಿದ್ದಾರೆ. ರಾಹುಲ್ ಮತ್ತು ಪಾಂಡೆ ಇಬ್ಬರೂ ಕೂಡ ಅದ್ಭುತ ಫಾರ್ಮ್ ನಲ್ಲಿರುವುದರಿಂದ ಇಬ್ಬರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬ ಕುತೂಹಲ ಏರ್ಪಟ್ಟದೆ. ಇನ್ನು ಇಬ್ಬರೂ ಅವಕಾಶ ಪಡೆದರೆ ಯಾರು ಯಾವ ಕ್ರಮಾಂಕದಲ್ಲಿ ಆಡುತ್ತಾರೆ? ಎಂಬ ಕುತೂಹಲ ಕೂಡ ಚಾಲ್ತಿಯಲ್ಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top