fbpx
ಸಮಾಚಾರ

ಮಾಜಿ ಸಚಿವ ಅರುಣ್‌ ಜೇಟ್ಲಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಬಿಜೆಪಿಯ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಅರುಣ್ ಜೇಟ್ಲಿ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯಕೀಯ ತಪಾಸಣೆ ಹಿನ್ನಲೆಯಲ್ಲಿ ಅರುಣ್ ಜೇಟ್ಲಿ ಅವರನ್ನು ನೆನ್ನೆ ಬೆಳಗ್ಗೆ 11 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. 66 ವರ್ಷದ ಅರುಣ್ ಜೇಟ್ಲಿ ಅವರನ್ನು ನೆಫ್ರಾಲಜಿಸ್ಟ್, ಹೃದ್ರೋಗ ತಜ್ಞರು ತಪಾಸಣೆ ಮಾಡುತ್ತಿದ್ದಾರೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಕೇಂದ್ರ ಆರೋಗ್ಯ ಸಚಿವ ಹರ್ಷವಧನ್, ಗೃಹ ಸಚಿವ ಅಮಿತ್ ಶಾ ಅವರು ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಇನ್ನು ಶುಕ್ರವಾರ ರಾತ್ರಿ ಏಮ್ಸ್ ಹೊರಡಿಸಿದ ವೈದ್ಯಕೀಯ ಬುಲೆಟಿನ್ ನಲ್ಲಿ ಅರುಣ್ ಜೇಟ್ಲಿಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಜೇಟ್ಲಿ ಅವರ ರಕ್ತದೊತ್ತಡ ಸಾಮಾನ್ಯವಾಗಿದೆ. ಅವರ ಆರೋಗ್ಯವನ್ನು ಆಸ್ಪತ್ರೆಯ ಹಿರಿಯ ವೈದ್ಯರ ತಂಡ ಮೇಲ್ವಿಚಾರಣೆ ಮಾಡುತ್ತಿದೆ. ಅರುಣ್ ಜೇಟ್ಲಿ ಹೃದಯ-ನರ ವಿಭಾಗದ ಐಸಿಯುನಲ್ಲಿದ್ದಾರೆ ಎಂದು ಆಸ್ಪತ್ರೆಯ ಮೂಲಗಳಿಂದ ಮಾಹಿತಿ ಲಭಿಸಿದೆ.

2019ರ ಜನವರಿಯಲ್ಲಿ ಜೇಟ್ಲಿ ಅಮೆರಿಕಾದಲ್ಲಿ ಎಡಗಾಲಿನಲ್ಲಿ ಆಗಿದ್ದ ಸಾಫ್ಟ್​ ಟಿಶ್ಯು ಕ್ಯಾನ್ಸರ್​ ಆಪರೇಷನ್​ಗೆ ಒಳಗಾಗಿದ್ದರು. ಮೋದಿ ಸರ್ಕಾರದ ಆರನೇ ಮತ್ತು ಕೊನೆಯ ಬಜೆಟ್​ ಮಂಡನೆ ಮಾಡಲೂ ಸಾಧ್ಯವಾಗದೇ ಪೀಯುಷ್​ ಗೋಯಲ್​ ಬಜೆಟ್​ ಮಂಡಿಸಿದ್ದರು. ಮೋದಿ ನೇತೃತ್ವದ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಎರಡನೇ ಬಾರಿ ಅಧಿಕಾರಕ್ಕೆ ಬಂದಾಗ ಜೇಟ್ಲಿ ಅವರೇ ಸಚಿವ ಸಂಪುಟದಿಂದ ದೂರ ಉಳಿಯುವ ನಿರ್ಧಾರವನ್ನು ತಿಳಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top