fbpx
ಸಮಾಚಾರ

ತಾತನ ಅಂತ್ಯಕ್ರಿಯೆಗೂ ತೆರಳದೆ ನೆರೆ ಪರಿಹಾರ ಕಾರ್ಯದಲ್ಲಿ ನಿರತರಾದ ವಿಜಯಪುರ ಜಿಲ್ಲಾಧಿಕಾರಿ!

ವಿಪರೀತ ಮಳೆ ಮತ್ತು ಭೀಕರ ಭೂಕುಸಿತದಿಂದಾಗಿ ಕಣ್ಣ ಎದುರೇ ಕುಸಿದು ಹೋದ ಉತ್ತರಕ ಕರ್ನಾಟಕ ಜನರ ಕಷ್ಟದ ಬಗ್ಗೆ ಎಂಥವರಿಗಾದರೂ ಕರುಣೆ ಹುಟ್ಟುತ್ತದೆ. ಮಳೆ ಪ್ರಮಾಣ ತಗ್ಗಿದ್ದರೂ ಪ್ರವಾಹದ ಪ್ರಭಾವ ಹಾಗೇ ಇದೆ. ಸಂತ್ರಸ್ತರ ನೋವಿಗೆ ಸ್ಪಂದಿಸಬೇಕಾದ ಸಕಾಲ ಇದಾಗಿದ್ದು, ತಮ್ಮ ನೋವನ್ನು ನುಂಗಿ ಸಂತ್ರಸ್ತರ ಪರ ನಿಲ್ಲುವ ಮೂಲಕ ವಿಜಯಪುರ ಜಿಲ್ಲಾಧಿಕಾರಿ ಮಾದರಿಯಾಗಿದ್ದಾರೆ.

ವೈ.ಎಸ್.ಪಾಟೀಲ್ ಅವರ ತಾಯಿಯ ತಂದೆ ಮಲ್ಲಪ್ಪ ನಾಯ್ಕರ್ (91) ಕಳೆದ ಶುಕ್ರವಾರ ರಾತ್ರಿ ಬೈಲಹೊಂಗಲ ತಾಲೂಕಿನ ನಾಗನೂರಿನಲ್ಲಿ ನಿಧನರಾಗಿದ್ದಾರೆ. ಅದೇ ವೇಳೆ ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ಭೀಮಾನದಿ ಅಪಾಯ ಮಟ್ಟ ಮೀರಿ ಹರಿದು ಅನೇಕ ಗ್ರಾಮಗಳಿಗೆ ನೀರು ನುಗ್ಗಿ ನೂರಾರು ಮಂದಿ ನಿರಾಶ್ರಿತರಾಗಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರು ತಮ್ಮನ್ನು ಸಾಕಿ ಬೆಳೆಸಿದ ಅಜ್ಜನ ಅಂತ್ಯಕ್ರಿಯೆಗೆ ತೆರಳದೆ ಪ್ರವಾಹ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಹಿಂದೆ 2009ರಲ್ಲಿ ಉತ್ತರ ಕರ್ನಾಟಕದಲ್ಲಿ ಜಲ ಪ್ರಳಯ ಉಂಟಾದಾಗ ವಿಜಯಪುರ ತಾಲೂಕಿನ ಸಾರವಾಡದಲ್ಲಿ ಡೋಣಿ ಪ್ರವಾಹಕ್ಕೆ ಸಿಲುಕಿದ್ದ ಇದ್ದಿಲು ತಯಾರಿಕೆ ಕಾರ್ಮಿಕರನ್ನು ಅಂದು ಉಪ ವಿಭಾಗಾಧಿಕಾರಿಯಾಗಿದ್ದ ಅವರು ಪ್ರಾಣದ ಹಂಗು ತೊರೆದು ತಾವೇ ಸ್ವತಃ ರಕ್ಷಣಾ ಕಾರ್ಯ ಕೈಗೊಂಡು ಮಾನವೀಯತೆ ಮೆರೆದಿದ್ದರು. ಈಗ ಅಜ್ಜನ ಅಂತ್ಯಕ್ರಿಯೆಗೂ ತೆರಳದೆ ಸಂತ್ರಸ್ತರ ರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ನಿಜಕ್ಕೂ ಶ್ಲಾಘನೀಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top