fbpx
ಸಮಾಚಾರ

ಹಲ್ಲೆ ಆದ ಕುರಿತು ಅಸಲಿ ಕಾರಣ ಬಿಚ್ಚಿಟ್ಟ ನಟ ಕೋಮಲ್

ನಟ ಕೋಮಲ್ ಮೇಲೆ ನಾಲ್ಕು ಜನ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಶ್ರೀರಾಮಪುರ ರೈಲ್ವೆ ಅಂಡರ್ ಪಾಸ್​​​ ಬಳಿ ನಡೆದಿದೆ. ಮಗಳನ್ನು ಟ್ಯೂಶನ್​ ಕ್ಲಾಸ್​ಗೆ ಬಿಟ್ಟು ಬರುತ್ತಿರುವ ವೇಳೆ ಈ ಘಟನೆ ನಡೆದಿದ್ದು, ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಲಾಗಿದೆ. ಸದ್ಯ ಕೋಮಲ್ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹಲ್ಲೆ ಮಾಡಿರುವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಗಲಾಟೆಯಲ್ಲಿ ಕೋಮಲ್ ಅವರ ಮುಖ ಹಾಗೂ ಮೂಗಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ನಟ ಕೋಮಲ್, ‘ಅವರು ಯಾರು? ನನ್ನ ಮೇಲೆ ಏಕೆ ಹಲ್ಲೆ ಮಾಡಿದರು? ಅವರ ಉದ್ದೇಶ ಏನು ಎಂಬುದು ಗೊತ್ತಿಲ್ಲ. ನಾನು ಸಿನಿಮಾ ಮಾಡುವುದೇ ತಪ್ಪಾ ಎಂದು ತಮ್ಮ ಅಸಹಾಯಕತೆ ಹೊರಹಾಕಿದ್ದಾರೆ.

‘ಅವರು ಯಾರು ಎಂಬುದು ನನಗೆ ಗೊತ್ತಿಲ್ಲ. ನನ್ನ ಮಗಳನ್ನು ಟ್ಯೂಷನ್ ​ಗೆ ಬಿಟ್ಟು ವಾಪಸು ಬರುವಾಗ ಏಕಾಏಕಿ ಒಬ್ಬ ದ್ವಿಚಕ್ರ ವಾಹನದಿಂದ ಹಿಂದೆ ಬಂದು ಅಡ್ಡಗಟ್ಟಿ ಅವಾಚ್ಯ ಪದಗಳಿಂದ ನಿಂದಿಸಿದ. ಅದನ್ನು ನಾನು ಪ್ರಶ್ನಿಸಿದೆ. ಮತ್ತಷ್ಟು ಜೋರಾಗಿ ಮಾತನಾಡಿದ. ಅದನ್ನು ಕೇಳಿ ನಾನು ಕಾರಿನಿಂದ ಕೆಳಗೆ ಇಳಿದೆ. ಇಳಿದ ತಕ್ಷಣ ನನ್ನ ಮೇಲೆ ಹಲ್ಲೆ ಮಾಡಲು ಶುರು ಮಾಡಿದರು. ಆಗ ಪಕ್ಕದಲ್ಲಿದ್ದ ಜನ ಅವರನ್ನು ಹಿಡಿದುಕೊಂಡರು. ಅಲ್ಲೇ ಪೊಲೀಸರು ಇದ್ದರು. ಬಳಿಕ ಠಾಣೆಗೆ ಕರೆದು ತಂದರು ಎಂದು ಕೋಮಲ್ ಹೇಳಿದ್ದಾರೆ.

ಕೋಮಲ್ ಮೇಲೆ ಹಲ್ಲೆ ನಡೆದ ಬಗ್ಗೆ ಮಾಹಿತಿ ಪಡೆದ ನಟ ಜಗ್ಗೇಶ್ ಅವರು ಕೂಡ ಪೊಲೀಸ್ ಠಾಣೆಗೆ ಆಗಮಿಸಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಕೋಮಲ್ ಅವರು ಗಾಯಗೊಂಡಿರುವುದರಿಂದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಆ ಬಳಿಕ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಘಟನೆ ನಿಖರ ಕಾರಣ ತಿಳಿದು ಬಂದಿಲ್ಲ, ಪೊಲೀಸರು ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top