fbpx
ಸಮಾಚಾರ

ಮುಂಬೈನಲ್ಲಿ ಕನ್ನಡ ಜಾಹೀರಾತು, ಕರ್ನಾಟಕದಲ್ಲಿ ಮರಾಠಿ ಜಾಹಿರಾತು: ವಿಭಿನ್ನವಾಗಿ ಒಗ್ಗಟ್ಟಿನ ಸಂದೇಶ ಸಾರಿದ ಕ್ಯಾಡ್​ಬರಿ.

ಭಾರತ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಇಂದು ಸಂಭ್ರಮದಿಂದಲೇ ಆಚರಿಸಿಕೊಂಡಿದೆ. ಈ ಸಂಭ್ರಮ ದಿನದಂದು ಸಂಬಂಧಗಳ ಮಹತ್ವವನ್ನು ಸಾರಿದ ಅದ್ಭುತ ಜಾಹೀರಾತೊಂದು ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

 

 

ದೇಶದ ಜನಪ್ರಿಯ ಚಾಕೊಲೇಟ್ ಕಂಪೆನಿ ಕ್ಯಾಡ್​ಬರಿ ಬಲವಾದ ಸಂದೇಶವುಳ್ಳ ಜಾಹೀರಾತನ್ನು ಆಗಸ್ಟ್​ 15ರಂದು ಹಲವು ಭಾಗದ ಪತ್ರಿಕೆಗಳಲ್ಲಿ ಪ್ರಕಟಿಸಿತು. ಈ ಜಾಹೀರಾತಿನಲ್ಲಿ ಒಗ್ಗಟ್ಟಿನಲ್ಲಿ ಸಿಹಿ ಇದೆ. ಸಿಹಿಯ ಸಂತಸ ಇದೆ ಎಂದು ತಿಳಿಸಲಾಗಿತ್ತು. ಇದರಲ್ಲೇನಿದೆ ವಿಶೇಷ ಅಂತೀರಾ. ಇಲ್ಲೇ ಇರೋದು ವಿಶೇಷತೆ.

ಇಲ್ಲಿ ಕನ್ನಡದಲ್ಲಿ ನೀಡಲಾದ ಶೀರ್ಷಿಕೆಯನ್ನು ಮುಂಬೈ ಭಾಗದ ಪತ್ರಿಕೆಗಳಲ್ಲಿ ಪ್ರಕಟಿಸಿದರೆ, ತೆಲುಗು ಜಾಹೀರಾತನ್ನು ದೆಹಲಿಯಲ್ಲಿ ನೀಡಲಾಗಿತ್ತು. ಹಾಗೆಯೇ ಕರ್ನಾಟಕದಲ್ಲಿ ಮರಾಠಿ ಭಾಷೆಯಲ್ಲಿ ಜಾಹೀರಾತು ಪ್ರಕಟಿಸಲಾಗಿತ್ತು. ಭಾಷೆ ಬದಲಾದರೂ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾರಲಾಗಿತ್ತು. ಈ ಮೂಲಕ ಎಲ್ಲರೂ ಜೊತೆಗೂಡಿದರೆ ಮಾತ್ರ ದೇಶ ಎಂಬ ಬಲವಾದ ಮತ್ತು ಸೂಕ್ಷ್ಮ ಸಂದೇಶವನ್ನು ನೀಡಲಾಗಿತ್ತು.

ಭಾಷೆಗಳ ಗೌರವ ಹಾಗೂ ದೇಶದ ವೈವಿದ್ಯತೆಯನ್ನು ಸಾರಿದ ಜಾಹೀರಾತು ಒಗ್ಗಟ್ಟಾಗಿ ಎಲ್ಲರೂ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸೋಣ ಎಂದು ತಿಳಿಸಲಾಗಿತ್ತು. ಇಂತಹ ಅತ್ಯುತ್ತಮ ಜಾಹೀರಾತಿನೊಂದಿಗೆ ಕ್ಯಾಡ್​ಬರಿ ಯುನಿಟಿ ಬಾರ್ ಹೆಸರಿನ ಹೊಸ ಪ್ರಾಡಕ್ಟ್​ ಬಿಡುಗಡೆ ಮಾಡಿದೆ. ಇಲ್ಲೂ ಕೂಡ ಒಗ್ಗಟ್ಟಿನ ಮೂಲಮಂತ್ರವನ್ನು ಕಂಪೆನಿ ತಿಳಿಸಿದ್ದು, ಚಾಕೊಲೇಟ್ ಬಾರ್​ನಲ್ಲಿ ಡಾರ್ಕ್​, ಬ್ರೌನಿ ಹಾಗೂ ಬಿಳಿ ಚಾಕೊಲೇಟ್​ನ್ನು ಬಳಸಲಾಗಿದೆ.

ಕ್ಯಾಡ್​ಬರಿ ಮೂರು ಫ್ಲೆವರ್​ನಲ್ಲಿ ಇಂತಹದೊಂದು ಚಾಕೊಲೇಟ್​ನ್ನು ಮೊದಲ ಬಾರಿ ಪರಿಚಯಿಸುತ್ತಿದ್ದು, ಇದೊಂದು ಸ್ಪೆಷಲ್ ಎಡಿಷನ್ ಚಾಕೊಲೇಟ್ ಎಂದು ಕಂಪೆನಿ ತಿಳಿಸಿದೆ. ಈ ಹಿಂದೆ ಕೂಡ ಹಲವು ಬಾರಿ ಕ್ಯಾಡ್​ಬರಿ ಸಂಬಂಧಗಳ ಮಹತ್ವ ಸಾರುವಂತಹ ಅನೇಕ ಜಾಹೀರಾತುಗಳನ್ನು ಬಿಡುಗಡೆ ಮಾಡಿತ್ತು. ಆದರೆ ಈ ಬಾರಿ ಭಾಷೆಯೊಂದಿಗೆ ದೇಶ ಪ್ರೇಮ ಸಾರಿದ ಜಾಹೀರಾತು ಜನಮನ್ನಣೆಗೆ ಪಾತ್ರವಾಗಿದೆ.

ಸದ್ಯ ಕಂಪೆನಿ ನೀಡಿದ ಜಾಹೀರಾತಿಗೆ ಸಿಹಿ ಪ್ರಿಯರು ಮನಸೋತಿದ್ದಾರೆ. ಅಲ್ಲದೆ ಸಿಹಿಯೊಂದಿಗೆ ನೀಡಿದ ಸಂದೇಶಕ್ಕೆ ಹಲವರು ಕಂಪೆನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top