fbpx
ಸಮಾಚಾರ

ನೆರೆ ಸಂತ್ರಸ್ತರಿಗೆ 35 ಲಕ್ಷ ನೆರವು ನೀಡಿದ ಶ್ರವಣಬೆಳಗೊಳ ಜೈನ ಮಠ.

ವಿಪರೀತ ಮಳೆ ಮತ್ತು ಭೀಕರ ಭೂಕುಸಿತದಿಂದಾಗಿ ಕಣ್ಣ ಎದುರೇ ಕುಸಿದು ಹೋದ ಉತ್ತರಕ ಕರ್ನಾಟಕ ಜನರ ಕಷ್ಟದ ಬಗ್ಗೆ ಎಂಥವರಿಗಾದರೂ ಕರುಣೆ ಹುಟ್ಟುತ್ತದೆ. ಇಡೀ ಕರ್ನಾಟಕದ ಎಲ್ಲ ಕಡೆಗಳಿಂದಲೂ ಉತ್ತರಕ ಕರ್ನಾಟಕ ಸಂತ್ರಸ್ತರಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ಸ್ಪಂದಿಸಿರುವ ಅನೇಕರು ಆಹಾರ,ಹಣ ಮತ್ತು ಅಗತ್ಯ ವಸ್ತುಗಳನ್ನು ನೀಡಿ ಒಂದೊಂದು ರೀತಿಯಲ್ಲಿ ನೆರೆ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ.

ಇದೀಗ ಉತ್ತರ ಕರ್ನಾಟಕ ಭಾಗದ ನೆರೆ ಪೀಡಿತ ಸಂತ್ರಸ್ತರಿಗೆ ನೆರವಾಗಲು ಶ್ರೀಕ್ಷೇತ್ರ ಶ್ರವಣಬೆಳಗೊಳ ಜೈನ ಮಠವು ಆಹಾರ ಸಾಮಗ್ರಿ, ಔಷದಿಯನ್ನು ಸರಬರಾಜು ಮಾಡಲು ರೂ. 25 ಲಕ್ಷ ಹಾಗೂ ಮುಖ್ಯ ಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ರೂ. 10 ಲಕ್ಷ ಸೇರಿ ಒಟ್ಟು ರೂ. 35 ಲಕ್ಷಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಶ್ರೀ ಮಠದ ಆಡಳಿತ ಮಂಡಳಿ ತಿಳಿಸಿದೆ.

ರಾಜ್ಯದಲ್ಲಿ ಈ ಹಿಂದೆಯೂ ಮಳೆಯಿಂದ ಅಪಾತ ಪ್ರಮಾಣದಲ್ಲಿ ಹಾನಿಯಾದ ಸಂದರ್ಭದಲ್ಲಿಯೂ ಶ್ರೀಕ್ಷೇತ್ರ ಶ್ರವಣಬೆಳಗೊಳ ಜೈನ ಮಠದ ವತಿಯಿಂದ ಪರಿಹಾರ ನಿಧಿಗೆ ದೇಣಿಗೆ ನೀಡಲಾಗಿತ್ತು.

ಪ್ರವಾಹದಲ್ಲಿ ಸಂಕಷ್ಟಕ್ಕೀಡಾಗಿರುವವರಿಗೆ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಸಾಂತ್ವನ ಹೇಳಿದ್ದು, ಹಾಸನ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಅಗತ್ಯವಿರುವ ಸಹಕಾರವನ್ನು ನೀಡುವುದಾಗಿ ತಿಳಿಸಿರುತ್ತಾರೆ ಹಾಗೂ ಪೂಜ್ಯಶ್ರೀಗಳು ಚಾತುರ್ಮಾಸ ವ್ರತದಲ್ಲಿದ್ದರೂ ನೆರೆ ಪೀಡಿತ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಲು ಚಿಂತನೆ ನಡೆಸಿದ್ದಾರೆ. ಈಗಾಗಲೇ ಶ್ರೀಗಳವರ ಸೂಚನೆಯಂತೆ ಅನೇಕ ಸಂಘ ಸಂಸ್ಥೆಗಳು ಸಂತ್ರಸ್ತರಿಗೆ ನೆರವಾಗುವ ಕಾರ್ಯದಲ್ಲಿ ನಿರತರಾಗಿದ್ದು, ಶ್ರೀಕ್ಷೇತ್ರದ ವತಿಯಿಂದ ರೂ. 35 ಲಕ್ಷ ಗಳ ಪರಿಹಾರ ಯೋಜನೆ ಕಾರ್ಯರೂಪಕ್ಕೆ ತರಲು ನಿಶ್ಚಯ ಮಾಡಿರುತ್ತಾರೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top