fbpx
ಸಮಾಚಾರ

ಅಂದು ತಾವೇ ಉದ್ಘಾಟಿಸಿದ ಸಿಬಿಐ ಕೇಂದ್ರ ಕಚೇರಿಯಲ್ಲಿಯೇ ಚಿದು ವಿಚಾರಣೆ.

ಐಎನ್‌ಎಕ್ಸ್‌ ಮೀಡಿಯಾ ಹೌಸ್‌ ಹಗರಣದಲ್ಲಿ ಸಿಲುಕಿರುವ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಬುಧವಾರ ರಾತ್ರಿ ಸಿನಿಮೀಯ ರೀತಿಯಲ್ಲಿ ಬಂಧನಕ್ಕೊಳಗಾದರು. ಚಿದಂಬರಂ ಅವರನ್ನು ಈಗ ಹೊಸದಿಲ್ಲಿಯ ಜೋರ್‌ಭಾಗ್‌ನಲ್ಲಿ ಸಿಬಿಐ ಮುಖ್ಯ ಕಚೇರಿಯಲ್ಲಿ ವಿಚಾರಣೆಗೆ ಕರೆದೊಯ್ಯಲಾಗಿದೆ. ಇಡೀ ರಾತ್ರಿ ಚಿದಂಬರಂ ಇಲ್ಲಿಯೇ ಕಳೆಯಬೇಕಾಗಿದೆ.

ದೆಹಲಿಯ ಲೋಧಿ ರಸ್ತೆಯಲ್ಲಿರುವ ಸಿಬಿಐನ ಕೇಂದ್ರ ಕಚೇರಿಯ ನೂತನ ಕಟ್ಟಡವನ್ನು 2011ರಲ್ಲಿ ಗೃಹ ಸಚಿವರಾಗಿದ್ದಾಗ ಚಿದಂಬರಂ ಅವರು ಉದ್ಘಾಟಿಸಿದ್ದರು. ಇದೀಗ ಚಿದಂಬರಂ ಅವರನ್ನು ಬಂಧಿಸಿ ಅದೇ ಕಚೇರಿಯ ಲಾಕಪ್‌ನಲ್ಲಿ ಅಧಿಕಾರಿಗಳು ಇಟ್ಟಿದ್ದಾರೆ. ಕೇಂದ್ರ ಕಚೇರಿಯ ಕೆಳ ಅಂತಸ್ತಿನ 5ನೇ ಸಂಖ್ಯೆಯ ಗೆಸ್ಟ್‌ಹೌಸ್‌ನಲ್ಲಿ ಚಿದು ಅವರನ್ನು ಇಡಲಾಗಿದೆ. ತಾವೇ ಉದ್ಘಾಟಿಸಿದ ಕಟ್ಟಡದಲ್ಲಿ ಚಿದು ಬಂಧಿತರಾಗುವಂತಾಗಿದೆ.

ಸಿಬಿಐಯ ನೂತನ ಕೇಂದ್ರ ಕಚೇರಿಯ ಉದ್ಘಾಟನೆ ಬಳಿಕ ಹವಾನಿಯಂತ್ರಿತ ಕೋಣೆಯನ್ನು ಹೊಂದಿರುವ ಕಟ್ಟಡವನ್ನು ಚಿದಂಬರಂ ಜೊತೆ ಎಲ್ಲಾ ಸಚಿವರು ವೀಕ್ಷಿಸಿದ್ದರು. ಅದರಲ್ಲಿಯೂ ಕೆಳ ಅಂತಸ್ತಿನಲ್ಲಿರುವ ಜೈಲುಕೋಣೆಯ ವ್ಯವಸ್ಥೆಯನ್ನು ಪರಿಶೀಲಿಸಿದ್ದರು. ಇದೀಗ ಸಿಬಿಐ ಕೇಂದ್ರ ಕಚೇರಿಯಲ್ಲಿರುವ ಗೆಸ್ಟ್ ಹೌಸ್ ನಂ.3 ಜೈಲುಕೋಣೆಯಲ್ಲಿ ಚಿದಂಬರಂ ರಾತ್ರಿ ಕಳೆದಿದ್ದಾರೆ ಎಂದು ವರದಿ ವಿವರಿಸಿದೆ.

ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಚಿದಂಬರಂ ಅವರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಜಾಮೀನು ಸಿಕ್ಕರೆ ಚಿದಂಬರಂ ಅವರು ಬಿಡುಗಡೆಯಾಗಲಿದ್ದಾರೆ. ನ್ಯಾಯಾಲಯವೇನಾದರೂ ಸಿಬಿಐ ವಶಕ್ಕೆ ನೀಡಿದರೆ, ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ನ್ಯಾಯಾಂಗ ಬಂಧನ ವಿಧಿಸಿದರೆ ಜೈಲಿಗೆ ಹೋಗಬೇಕಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top