fbpx
ಸಮಾಚಾರ

ಕಾರು ಗಾಜು ಒಡೆದ ಹುಚ್ಚ ವೆಂಕಟ್‌ಗೆ ಸಾರ್ವಜನಿಕರಿಂದ ಗೂಸಾ- ಪೊಲೀಸರಿಂದ ಬಂಧನ

ಚೆನ್ನೈನಲ್ಲಿ ಅಲೆದಾಡಿಕೊಂಡು ಸುದ್ದಿಯಾಗಿದ್ದ ನಟ ಹುಚ್ಚ ವೆಂಕಟ್, ಇದೀಗ ಮಡಿಕೇರಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಅದೇನಾಯ್ತೋ ಏನೋ ಗೊತ್ತಿಲ್ಲ, ಸಖತ್ ಗಲಾಟೆಯನ್ನೂ ಮಾಡಿಕೊಂಡಿದ್ದಾರೆ. ನಗರದ ಕೆಎಸ್ ಆರ್ ಟಿಸಿ ಡಿಪೋ ಬಳಿ ನಿಂತಿದ್ದ ಕಾರ್ ಮೇಲೆ ಸುಖಾಸುಮ್ಮನೆ ತಮ್ಮ ಸಿಟ್ಟು ತೋರಿಸಿದ್ದಾರೆ. ಕಾರ್ ನ ಗಾಜು ಒಡೆದು ಹಾಕಿ ರಂಪಾಟ ಮಾಡಿದ ಹುಚ್ಚ ವೆಂಕಟ್ ಗೆ, ಸ್ಥಳೀಯರು ಸಖತ್ತಾಗೇ ಪಾಠ ಕಲಿಸಿದ್ದಾರೆ. ರೊಚ್ಚಿಗೆದ್ದ ಸ್ಥಳೀಯರು ಹುಚ್ಚ ವೆಂಕಟ್ ಗೆ ಹಿಗ್ಗಾಮುಗ್ಗ ಗೂಸಾ ಕೊಟ್ಟಿದ್ದಾರೆ.

ಹುಚ್ಚ ವೆಂಕಟ್ ಮಡಿಕೇರಿ ನಗರದ ಡಿಪೋ ಬಳಿ ಕಾಣಿಸಿಕೊಂಡು, ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದರು. ಈ ವೇಳೆ ನಾಪೋಕ್ಲುವಿನ ದಿಲೀಪ್ ಎಂಬವರು ತಮ್ಮ ಕಾರನ್ನು ಡಿಪೋ ಬಳಿ ನಿಲ್ಲಿಸಿ ಸಮೀಪದ ಎಟಿಎಂಗೆ ಹೋಗಿದ್ದರು. ಎಟಿಎಂನಿಂದ ಹಿಂತಿರುಗುತ್ತಿದ್ದ ದಿಲೀಪ್ ಸಾಮಾನ್ಯವಾಗಿಯೇ ಹುಚ್ಚ ವೆಂಕಟ್ ಅವರನ್ನು ನೋಡಿದ್ದಾರೆ. ಇಷ್ಟಕ್ಕೆ ಕೆರಳಿದ ಹುಚ್ಚ ವೆಂಕಟ್ ‘ನನ್ನ ಯಾಕೆ ಗುರಾಯಿಸುತ್ತಿದ್ದೀಯಾ’ ಎಂದು ತಕರಾರು ಎತ್ತಿದ್ದಾರೆ.

ದಿಲೀಪ್ ಉತ್ತರಿಸಲು ಯತ್ನಿಸುತ್ತಿದ್ದಂತೆ ಹುಚ್ಚ ವೆಂಕಟ್ ಏಕಾಏಕಿ ದಾಳಿ ಮಾಡಲು ಆರಂಭಿಸಿದ್ದಾರೆ. ಮಾಧ್ಯಮದವರು ಸ್ಥಳಕ್ಕೆ ಹೋಗಿ ವರದಿ ಮಾಡುತ್ತಿದ್ದಾಗಲೂ ಹುಚ್ಚ ವೆಂಕಟ್ ದಿಲೀಪ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ದಿಲೀಪ್ ತಪ್ಪಿಸಿಕೊಳ್ಳುತ್ತಿದ್ದಂತೆ ಕಾರಿನತ್ತ ಆಗಮಿಸಿದ ಹುಚ್ಚ ವೆಂಕಟ್ ಸ್ಥಳದಲ್ಲಿದ್ದ ಕಲ್ಲಿನಿಂದ ಕಾರಿನ ಗ್ಲಾಸ್ ಒಡೆದಿದ್ದಾರೆ. ಅಷ್ಟೇ ಅಲ್ಲದೆ, ಕಾರಿನ ಮೇಲೆ ಕಾಲಿಟ್ಟು ದಿಲೀಪ್‍ರನ್ನು ಗದರಿಸಿದ್ದಾರೆ.

ಹುಚ್ಚ ವೆಂಕಟ್ ಹುಚ್ಚಾಟವನ್ನು ಗಮನಿಸುತ್ತಿದ್ದ ಸ್ಥಳೀಯರು ಕೋಪಗೊಂಡು, ಬುದ್ಧಿ ಹೇಳಲು ಮುಂದಾದರು. ಆದರೆ ಹುಚ್ಚ ವೆಂಕಟ್ ಸುಮ್ಮನಾಗದಿದ್ದಾಗ ಸುತ್ತುವರಿದ ಸಾರ್ವಜನಿಕರು ದಿಲೀಪ್ ಕೈಯಿಂದ ಹಲ್ಲೆ ನಡೆಸಿದ್ದಲ್ಲದೆ, ತಾವೂ ಕೂಡ ಥಳಿಸಿದ್ದಾರೆ. ಮಳೆಯ ನಡುವೆ ಬಿದ್ದ ಹೊಡೆತಕ್ಕೆ ತಣ್ಣಗಾಗದ ಹುಚ್ಚ ವೆಂಕಟ್ ಮತ್ತೆ ಗದರಿ ಅಚ್ಚರಿ ಮೂಡಿಸಿದರು. ಈ ಬಗ್ಗೆ ಸಾರ್ವಜನಿಕರು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಮಡಿಕೇರಿ ಪೊಲೀಸರು ಹುಚ್ಚ ವೆಂಕಟ್ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top