fbpx
ಸಮಾಚಾರ

ಕೇಂದ್ರಕ್ಕೆ ಸಿದ್ದು ಸರ್ಕಾರ ಸಲ್ಲಿಸಿದ್ದ ನಾಡಧ್ವಜದ ಪ್ರಸ್ತಾವನೆಯನ್ನು ಹಿಂಪಡೆದುಕೊಳ್ಳುತ್ತಾ ಬಿಎಸ್‌ವೈ ಸರ್ಕಾರ?

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಪ್ರತ್ಯೇಕ ನಾಡಧ್ವಜಕ್ಕಾಗಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಈಗಿನ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹಿಂಪಡೆದುಕೊಳ್ಳುತ್ತದೆಯೇ? ಎಂಬ ಮಾತುಗಳು ಕೇಳತೊಡಗಿವೆ.. ಏಕೆಂದರೆ ಈಗಿನ ಬಿಜೆಪಿ ನಾಯಕರುಗಳು ಒಬ್ಬರ ಹಿಂದೆ ಒಬ್ಬರು ನೀಡಿರುತ್ತಿರುವ ಹೇಳಿಕೆಗಳು ಈ ಅನುಮಗಳಿಗೆ ಎಡೆ ಮಾಡಿಕೊಡುತ್ತಿದೆ.

ಪ್ರಹ್ಲಾದ್ ಜೋಶಿ ಮತ್ತು ಸಿಟಿ ರವಿ ಅವರು ಪ್ರತ್ಯೇಕ ಕನ್ನಡ ಧ್ವಜಕ್ಕೆ ವಿರೋಧ ವ್ಯಕ್ತಪಡಿಸಿದ್ದು ತಮ್ಮ ಪಕ್ಷ ಕೂಡ ಪ್ರತ್ಯೇಕ ಧ್ವಜದ ಪ್ರಸ್ತಾವನೆಯನ್ನು ವಿರೋಧಿಸುತ್ತದೆ ಎಂದು ಹೇಳಿದ್ದಾರೆ. ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ಹೊಂದುವ ಸಂಬಂಧ ಸಿದ್ದರಾಮಯ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಕೇಂದ್ರ ಸರ್ಕಾರ ಯಾವುದೇ ನಿರ್ಣಯ ಕೈಗೊಳ್ಳದೇ ಇರುವುದರ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, ‘ರಾಷ್ಟ್ರಕ್ಕೊಂದೇ ಧ್ವಜ, ಪ್ರತ್ಯೇಕ ಧ್ವಜ ಹೊಂದುವ ಅಗತ್ಯವಿಲ್ಲ’ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ನಾಡಧ್ವಜ ಪ್ರಸ್ತಾವನೆಯನ್ನು ಹಿಂಪಡೆಯುವ ಸೂಚನೆ ನೀಡಿದ್ದಾರೆ.,

ಸಿಟಿ ರವಿ ಹೇಳಿದ್ದೇನು?
ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸಿಟಿ ರವಿ ಪ್ರತ್ಯೇಕ ಧ್ವಜ ಹೊಂದಲು ಸಾಧ್ಯವಿಲ್ಲ ಎಂದಿದ್ದರು. ದೇಶಕ್ಕೊಂದೇ ಧ್ವಜ ಅದು ತ್ರಿವರ್ಣ ಧ್ವಜ. ರಾಷ್ಟ್ರ ಧ್ವಜಕ್ಕೆ ಪರ್ಯಾಯ ಧ್ವಜ ಹೊಂದಲು ಸಾಧ್ಯವಿಲ್ಲ. ಕನ್ನಡದ ಧ್ವಜ ಸಾಂಸ್ಕೃತಿಕ ಧ್ವಜ. ಆದರೆ ದೇಶಕ್ಕೆ ಸಾಂವಿಧಾನಿಕ ವಾಗಿ ಹೊಂದಿರುವುದು ತ್ರಿವರ್ಣ ಧ್ವಜವೊಂದೆ ಎಂದಿದ್ದರು.

ಪ್ರಹ್ಲಾದ್ ಜೋಶಿ ಹೇಳಿದ್ದೇನು?
ಹುಬ್ಬಳ್ಳಿಯಲ್ಲಿ ಮಾತನಾಡಿದ ಜೋಶಿ “ದೇಶದಲ್ಲಿ ನಾವೆಲ್ಲಾ ಒಂದು ಎಂಬ ಭಾವನೆ ಇರಬೇಕು. ರಾಷ್ಟ್ರಧ್ವಜ ಇರಬೇಕಾದರೇ ಪ್ರತಿಯೊಂದು ರಾಜ್ಯಕ್ಕೂ ಪ್ರತ್ಯೇಕ ಧ್ವಜ ನೀಡುವ ಪ್ರಾಧಾನ್ಯತೆ ಸಂವಿದಾನದಲ್ಲಿ ಇಲ್ಲ. ರಾಜ್ಯಗಳಿಗೆ ಪ್ರತ್ಯೇಕ ಧ್ವಜ ನೀಡಿದರೆ ಆಗ ರಾಷ್ಟ್ರ ಧ್ವಜ ದೊಡ್ಡದು, ನಾಡಧ್ವಜ ದೊಡ್ಡದು ಎಂಬ ವಿವಾದಗಳು ಶುರುವಾಗುತ್ತವೆ. ಹಾಗಾಗಿ ನಮ್ಮ ರಾಜ್ಯಕ್ಕೆ ಪ್ರತ್ಯೇಕ ಧ್ವಜದ ಅವಶ್ಯಕತೆಯಿಲ್ಲ.. ರಾಜ್ಯೋತ್ಸವಕ್ಕೂ ರಾಷ್ಟ್ರ ಧ್ವಜವನ್ನೇ ಹಾರಿಸಬೇಕು,. ಒಂದು ರಾಷ್ಟ್ರ, ಒಂದು ಧ್ವಜ, ಒಂದು ಲಾಂಛನ ಎಂಬುದು ನಮ್ಮ ನಿಲುವು” ಎಂದು ಜೋಶಿ ಹೇಳಿದರು.

ಪ್ರಹ್ಲಾದ್ ಜೋಶಿ ಅವರ ಹೇಳಿಕೆಗೆ ರಾಜ್ಯಾದ್ಯಂತ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಜೋಶಿ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top