fbpx
ಸಮಾಚಾರ

ಕೆ.ಜಿ.ಎಫ್​-2 ಶೂಟಿಂಗ್ ಗೆ ತಡೆಯಾಜ್ಞೆ: ಸೆಪ್ಟೆಂಬರ್ 5ಕ್ಕೆ ವಿಚಾರಣೆ ಮುಂದೂಡಿಕೆ

ಪರಿಸರ ಹಾನಿ ಆರೋಪದ ಮೇರೆಗೆ ‘ಕೆ.ಜಿ.ಎಫ್. ಚಾಪ್ಟರ್‌–2’ ಸಿನಿಮಾ ಚಿತ್ರೀಕರಣಕ್ಕೆ ನೀಡಿರುವ ತಡೆಯಾಜ್ಞೆಯ ವಿಚಾರಣೆಯನ್ನು ಜೆಎಂಎಫ್‌ಸಿ ನ್ಯಾಯಾಧೀಶ ಕಿರಣ್‌ ಅವರು ಸೆಪ್ಟೆಂಬರ್‌ 5ಕ್ಕೆ ಮುಂದೂಡಿದ್ದಾರೆ.

ಚಿತ್ರ ತಂಡದ ವಕೀಲ ಎಚ್‌.ಶಾಂತಿಭೂಷಣ್‌ ಅವರು ಶನಿವಾರ ವಾದ ಮಂಡಿಸಿ ಚಿತ್ರೀಕರಣದ ವೇಳೆ ಕಾನೂನು ಉಲ್ಲಂಘನೆಯಾಗಿಲ್ಲ. ಎಲ್ಲ ಅನುಮತಿಗಳನ್ನು ಪಡೆಯಲಾಗಿದೆ. ಪೊಲೀಸ್ ಇಲಾಖೆಗೆ ₹ 1,20,500 ಪಾವತಿಸಲಾಗಿದೆ. ಅರ್ಜಿದಾರರು ಹಣ ಕೀಳುವುದಕ್ಕಾಗಿ ಈ ರೀತಿಯ ತಂತ್ರ ನಡೆಸಿದ್ದಾರೆ ಎಂದು ದೂರಿದರು. ನಿಷೇಧಿತ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿಲ್ಲ. ಚಿತ್ರ ನಿರ್ಮಾಣದ ವೇಳೆ ನಿತ್ಯ 1000ಕ್ಕೂ ಹೆಚ್ಚು ಜನರಿಗೆ ಕೆಲಸ ಸಿಕ್ಕಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅರ್ಜಿದಾರ ಶ್ರೀನಿವಾಸ್‌ ಪರವಾಗಿ ವಕೀಲ ಜಗನ್ನಾಥ್‌ ಅವರು ವಾದ ಮಂಡಿಸಲು ಸಿದ್ಧರಾಗಿದ್ದರು. ಆಗ ವಿಚಾರಣೆಯನ್ನು ಮಂದೂಡಲಾಯಿತು.

ಕೋಲಾರದ ಸೈನಡ್​ ಗುಡ್ಡದ ಮೇಲೆ ರಾಕಿಂಗ್ ಸ್ಟಾರ್​ ಯಶ್​ ಅಭಿನಯದ ಕೆ.ಜಿ.ಎಫ್​ ಪಾರ್ಟ್​-2 ಸಿನಿಮಾ ಚಿತ್ರಿಕರಣ ಮಾಡಲಾಗುತ್ತಿದೆ. ಚಿತ್ರದ ಶೂಟಿಂಗ್​ಗಾಗಿ ಬೃಹತ್​ ಗಾತ್ರದ ಸೆಟ್​ಗಳನ್ನು ನಿರ್ಮಿಸಲಾಗಿತ್ತು. ಆದರೆ, ಇತ್ತೀಚೆಗೆ ಸುರಿದ ಭಾರೀ ಮಳೆಗೆ ಶೂಟಿಂಗ್​ಗಾಗಿ ನಿರ್ಮಿಸಲಾಗಿದ್ದ ಸೆಟ್​ ನಾಶವಾಗಿದೆ. ಇದರಿಂದಾಗಿ ಅಲ್ಲಿನ ಗಿಡ, ಮರಗಳಿಗೆ ಹಾನಿಯಾಗಿದ್ದು, ಆ ಭಾಗದ ಜನರಿಗೆ ತೊಂದರೆಯುಂಟಾಗಿದೆ ಎಂದು ರಾಷ್ಟ್ರೀಯ ಪ್ರಜಾ ಚಕ್ರವ್ಯೂಹ ಪಕ್ಷದ ಅಧ್ಯಕ್ಷ್ಯ ಶ್ರೀನಿವಾಸ್ ಸಿವಿಲ್​ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆ ಕೋರ್ಟ್ ತಡೆಯಾಜ್ಞೆ ನೀಡಿತ್ತು.

ಈ ಮಧ್ಯೆ ನ್ಯಾಯಾಲಯದ ತಡೆಯಾಜ್ಞೆ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರ ನಿರ್ಮಾಪಕ ವಿಜಯ್ ಕಿರಗಂದೂರು, ಆದೇಶ ನೋಡಿ ನ್ಯಾಯಾಲಯಕ್ಕೆ ಸೂಕ್ತ ಉತ್ತರ ನೀಡಲಾಗುವುದು. ಈಗಾಗಲೇ ಶೇಕಡಾ 60 ರಷ್ಟು ಚಿತ್ರೀಕರಣ ಮುಗಿದಿದ್ದು, ಈ ಹಿಂದೆ ಈ ರೀತಿಯ ತೊಂದರೆ ಆಗಿರಲಿಲ್ಲ ಎಂದು ತಿಳಿಸಿದ್ದಾರೆ.

ಕೆಜಿಎಫ್ -2ರಲ್ಲಿ ಅಧೀರನ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಸೇರಿದಂತೆ ಮತ್ತಿತರ ನಟರು ಅಭಿನಯಿಸುತ್ತಿದ್ದು, ಗಾಂಧಿನಗರದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈಗ ನ್ಯಾಯಾಲಯ ನೀಡಿರುವ ಆದೇಶದಿಂದ ಚಿತ್ರೀಕರಣ ವಿಳಂಬವಾಗುತ್ತದೆಯಾ? ಎಂಬ ಪ್ರಶ್ನೆ ಮೂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top