fbpx
ಸಮಾಚಾರ

“ಅಣ್ಣ ನನ್ನನ್ನು ಕ್ಷಮಿಸಿಬಿಡಿ” ಡಿ.ಕೆ. ಶಿವಕುಮಾರ್ ಬಳಿ ಕ್ಷಮೆಯಾಚಿಸಿದ ಶ್ರೀರಾಮುಲು!

ಇಡಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಕಣ್ಣೀರಿಟ್ಟ ವಿಚಾರಕ್ಕೆ ಆರೋಗ್ಯ ಮಂತ್ರಿ ಬಿ.ಶ್ರೀರಾಮುಲು ಪ್ರತಿಕ್ರಿಯಿಸಿ, ಅವರ ಕಣ್ಣೀರಿಗೆ ಮರುಗಿದ್ದಾರೆ. ನನ್ನಿಂದ ನೋವಾಗಿದ್ದರೆ ಕ್ಷಮಿಸಿ ಎಂದು ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಹೊನ್ನೂರು ಗ್ರಾಮದಲ್ಲಿ ಮಾತನಾಡಿದ ಶ್ರೀ ರಾಮುಲು ರಾಜಕೀಯವಾಗಿ ಡಿ.ಕೆ ಶಿವಕುಮಾರ್​ ನನ್ನನ್ನು ಕೆಣಕುವಂತೆ ಮಾತನಾಡ್ತಾ ಇದ್ರು, ನಾನೂ ಸಹ ಅವರನ್ನು ಕೆಣಕುವಂತೆ ಮಾತನಾಡ್ತಾ ಇದ್ದೆ, ನನ್ನದು ಕೇವಲ ರಾಜಕೀಯವಾದ ಮಾತುಗಳೇ ಹೊರತು ವೈಯಕ್ತಿಕವಾಗಿ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ನಾನು ಮಾತನಾಡಿಲ್ಲ

“ನನ್ನ ಮಾತಿನಿಂದ ನೋವಾಗಿದ್ದರೆ ಡಿಕೆಶಿ ಅಣ್ಣನವರೇ ಕ್ಷಮಿಸಿ. ಕೈ ಮುಗಿದು ಕೇಳುತ್ತೇನೆ ನನ್ನನ್ನು ಕ್ಷಮಿಸಿ. ನನ್ನ ಭಾಷೆ ರಾಜಕಾರಣಕ್ಕೆ ಸೀಮಿತವೇ ಹೊರತು ವೈಯಕ್ತಿಕ ಅಲ್ಲ. ಡಿಕೆಶಿ ಅಣ್ಣನಿಗೆ ರಾಜಕೀಯವಾಗಿ ಮಾತ್ರ ಮಾತನಾಡಿದ್ದು,” ಎಂದು ಶ್ರೀರಾಮುಲು ಹೇಳಿದ್ದಾರೆ.

ಕೇವಲ ರಾಜಕಾರಣಕ್ಕೆ ಸೀಮಿತವಾಗಿತ್ತು, ವೈಯಕ್ತಿಕವಾಗಿ ನಾನು ಮಾತನಾಡಿಲ್ಲ. ಕಾನೂನು ಏನು ಕೆಲಸ ಮಾಡಬೇಕೋ ಅದು ಮಾಡುತ್ತೆ. ಅವರು ಕಷ್ಟದಲ್ಲಿರುವಾಗ ಕಣ್ಣೀರು ಹಾಕುವ ವೇಳೆ ಚುಚ್ಚು ಮಾತನಾಡಿದರೆ ನೋವಾಗುತ್ತೆ. ಇದರಿಂದ ಅವರ ಕುಟುಂಬಕ್ಕೂ ನೋವಾಗುತ್ತೆ. ಕಷ್ಟದಲ್ಲಿರುವವರಿಗೆ ನಾನು ಯಾವತ್ತೂ ಟೀಕೆ ಮಾಡಲ್ಲ, ಬೇರೆಯವರು ಕೂಡ ಕಷ್ಟದಲ್ಲಿರುವವರನ್ನು ನೋಡಿ ಟೀಕಿಸಬಾರದು. ಅದು ತಪ್ಪು. ನನ್ನ ಮಾತನ್ನು ಡಿಕೆಶಿ ಅವರು ರಾಜಕೀಯವಾಗಿ ಮಾತ್ರ ತೆಗೆದುಕೊಳ್ಳಬೇಕು, ವೈಯಕ್ತಿಕವಾಗಿ ನೋಡಬಾರದು ಎಂದು ಮರುಗಿದರು.

ಅಂದಹಾಗೆ ಡಿಕೆಶಿ ವಿಚಾರಣೆಗೆ ಹಾಜರಾದ ಬೆನ್ನಲ್ಲೇ ಮಾತನಾಡಿದ್ದ ಶ್ರೀರಾಮುಲು, “ಡಿಕೆಶಿ ​ ರಾಜಕಾರಣಿ ಹೊರತಾಗಿ ಓರ್ವ ಉದ್ಯಮಿ. ಐಟಿ ದಾಳಿ ವೇಳೆ ಅವರು ಪೇಪರ್​ ಹರಿದು ಹಾಕಿರುವ ಘಟನೆ ಎಲ್ಲರಿಗೂ ನೆನಪಿದೆ. ಈ ಕುರಿತು ತನಿಖೆ ನಡೆಯುತ್ತಿದೆ. ತಪ್ಪಾಗಿದ್ದರೆ ಶಿಕ್ಷೆಯಾಗಲಿ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಕಾನೂನಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ,” ಎಂದು ಹೇಳಿದ್ದರು. ವಿಚಾರಣೆಗೆ ಒಳಪಟ್ಟಿರುವ ಡಿಕೆ ಶಿವಕುಮಾರ್​ ಅವರು ಸೋಮವಾರ ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದರು. ಈ ವೇಳೆ ‘ಉಪ್ಪು ತಿಂದವರು ನೀಡು ಕುಡಿಯಲೇ ಬೇಕು’ ಎನ್ನುವ ಶ್ರೀರಾಮುಲು ಹೇಳಿಕೆಯನ್ನು ಉಲ್ಲೇಖಿಸಿದ್ದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top