fbpx
ಸಮಾಚಾರ

ಮನೆ ಬಾಗಿಲಿಗೆ ಮದ್ಯ ಪೂರೈಕೆ ಯೋಜನೆ: ಅಬಕಾರಿ ಸಚಿವರ ವಿರುದ್ಧ ಸಿಎಂ BSY ಗರಂ

ಕುಡುಕರು ಇನ್ಮುಂದೆ ಬಾರುಗಳನ್ನು ಹುಡುಕಿಕೊಂಡು ದೂರ ಹೋಗುವ ಅಗತ್ಯವಿಲ್ಲ! ಯಾಕೆಂದರೆ ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡಲು ಸರ್ಕಾರವೇ ಚಿಂತನೆ ನಡೆಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮದ್ಯದ ಅಂಗಡಿ ದೂರ ಇರುವುದರಿಂದ ಕುಡುಕರಿಗೆ ಸಮಸ್ಯೆಯಾಗದಂತೆ ಸಂಚಾರಿ ಮಳಿಗೆಗಳ ಮೂಲಕ ಮನೆ ಬಾಗಿಲಿಗೆ ಮದ್ಯ ಪೂರೈಸುವ ಚಿಂತನೆ ಇಲಾಖೆ ಮುಂದಿದೆ ಎಂದು ಅಬಕಾರಿ ಸಚಿವ ಎಚ್ ನಾಗೇಶ್ ಹೇಳಿದ್ದಾರೆ.

ಕುಡಿದು ವಾಹನ ಚಲಾಯಿಸಿದರೆ 10 ಸಾವಿರ ರೂ. ದಂಡ ತೆತ್ತಬೇಕು. ಇದನ್ನು ತಪ್ಪಿಸಲು ಈ ಯೋಜನೆ ಸಹಕಾರಿಯಾಗಲಿದೆ ಎಂಬುದು ಸಚಿವ ಎಚ್​ನಾಗೇಶ್ ಅವರದ್ದು! ಹೌದು, ಹೀಗೊಂದು ಯೋಜನೆ ರೂಪಿಸಲು ಅವರು ಚಿಂತನೆ ನಡೆಸಿದ್ದು, ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ್ದಾರೆ.

ಇಂದು ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊಬೈಲ್ ವೈನ್ ಶಾಪ್‍ಗಳಿಗೆ ಸರ್ಕಾರ ಚಿಂತನೆ ಮಾಡಿದೆ. ಎಲ್ಲೆಲ್ಲಿ ವೈನ್ ಶಾಪ್‍ಗಳಿವೆ. ಅಲ್ಲಿ ಸಂಚಾರಿ ವೈನ್ ಶಾಪ್‍ಗಳ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಆದಾಯ ಬರುತ್ತೆ ಎಂಬುದು ಸರ್ಕಾರದ ಚಿಂತನೆ. ತಾಂಡಾಗಳಲ್ಲಿ ಸಂಚಾರಿ ವೈನ್ ಶಾಪ್‍ಗಳ ವ್ಯವಸ್ಥೆ ಮಾಡಲು ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು.

ಗುಣಮಟ್ಟದ ಮದ್ಯ ಕೊಡಬೇಕು ಅನ್ನೋದು ನಮ್ಮ ಉದ್ದೇಶ. 2018-19 ರಲ್ಲಿ 19,750 ಸಾವಿರ ಕೋಟಿ ರೂ ಸಂಗ್ರಹ ಗುರಿ ನಿಗದಿ ಪಡಿಸಲಾಗಿತ್ತು. 19,943 ಕೋಟಿ ಗುರಿ ಸಾಧಿಸಿದ್ದೇವೆ. 2019-20 ನೇ ಸಾಲಿನಲ್ಲಿ 21 ಸಾವಿರ ಕೋಟಿ ಗುರಿ ನಿಗದಿ ಪಡಿಸಿದ್ದೇವೆ. ಪಾರ್ಟಿಗಳಲ್ಲಿ ಬೇರೆ ಕಡೆಯಿಂದ ಮದ್ಯ ತಂದು ಉಪಯೋಗಿಸುತ್ತಾರೆ. ಆಗಾಗಿ ಅಂತಹಾ ಪಾರ್ಟಿಗಳ ಮೇಲೆ ನಮ್ಮ ಅಧಿಕಾರಿಗಳು ದಾಳಿ ಮಾಡುತ್ತಾರೆ. ಗಾಂಜಾ ಮತ್ತು ಮಾದಕವಸ್ತುಗಳ ಬಳಕೆಗೆ ಕಡಿವಾಣ ಹಾಕುತ್ತೇವೆ ಎಂದು ಹೇಳಿದರು.

”ಕೆಎಂಎಫ್‌ ಹಾಲಿನ ಮಾದರಿಯಲ್ಲಿ ಬೇಡಿಕೆ ಆಧರಿಸಿ ಮನೆಮನೆಗಳಿಗೆ ಮದ್ಯ ಪೂರೈಸುವ ಪ್ರಸ್ತಾವನೆ ಇದೆ. ಆದರೆ, ಈ ಕುರಿತು ಇನ್ನೂ ಸ್ಪಷ್ಟ ತೀರ್ಮಾನಕ್ಕೆ ಬಂದಿಲ್ಲ. ಸಿಎಂ ಜತೆ ಚರ್ಚಿಸಿ, ಸಾರ್ವಜನಿಕ ಅಭಿಪ್ರಾಯ ಪಡೆಯಲಾಗುವುದು,” ಎಂದು ನಾಗೇಶ್‌ ಹೇಳಿದರು.

ಇದೆ ವೇಳೆ ಮದ್ಯ ನಿಷೇಧದ ಬಗ್ಗೆ ಮಾತನಾಡಿದ ಅವರು “ಮದ್ಯಪಾನ ನಿಷೇಧಿಸಬೇಕೆಂದು ಮಹಿಳೆಯರು, ಕೆಲ ಸ್ವಾಮೀಜಿಗಳು ಒತ್ತಾಯ ಮಾಡುತ್ತಾರೆ ಅದು ಒಳ್ಳೆಯ ದೃಷ್ಠಿಯಿಂದ ಅವರು ಹೇಳಿದ್ದಾರೆ.ಆದರೆ ರಾಜ್ಯಕ್ಕೆ ಆದಾಯ ಬೇಕಲ್ಲ ? ಯಾರೋ ಕೆಲವರು ಮಹಿಳೆಯರು ಹೇಳಿದ್ದಾರೆ ಎಂದು ಮದ್ಯಪಾನ ನಿಷೇಧ ಮಾಡಲು ಸಾದ್ಯವಿಲ್ಲ ಎಂದು ಸಚಿವ ಎಚ್ ನಾಗೇಶ್ ಸ್ಪಷ್ಟಪಡಿಸಿದರು.

ಬಿಎಸ್​ವೈ ಆಕ್ರೋಶ:
ಅಬಕಾರಿ ಸಚಿವ ನಾಗೇಶ್ ಹೇಳಿಕೆಗೆ ಮುಖ್ಯಮಂತ್ರಿ ಬಿಎಸ್​​ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗೇಶ್​ಗೆ ಕರೆ ಮಾಡಿದ ಬಿಎಸ್​ವೈ ಕ್ಲಾಸ್​ ತೆಗೆದುಕೊಂಡಿದ್ದಾರಂತೆ.

“ನಿಮಗೆ ಬಾಯಿಗೆ ಬಂದಂತೆ ಮಾತಾಡಲು ಹೇಳಿದ್ದು ಯಾರು? ನಿಮ್ಮ ಚಿಂತನೆ ನಿಮ್ಮಲ್ಲೇ ಇಟ್ಟುಕೊಳ್ಳಿ. ನಿಮ್ಮ ಹೇಳಿಕೆ ವಿವಾದದಿಂದ ಕೂಡಿದೆ. ಮೊದಲೆ ನೆರೆ ಪರಿಹಾರ ಕೊಟ್ಟಿಲ್ಲ ಎಂದು ವಿಪಕ್ಷಗಳು ಮುಗಿ ಬಿದ್ದಿವೆ. ಈ ಮಧ್ಯೆ ರೀತಿ ಹೇಳಿಕೆ ಕೊಟ್ಟಿದ್ದು ಯಾಕೆ? ಜನ, ವಿಪಕ್ಷಗಳು ನಿಮ್ಮ ಹೇಳಿಕೆಗೆ ಉಗಿಯುತ್ತಾರೆ. ಕೂಡಲೆ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿ,” ಎಂದು ನಾಗೇಶ್​ಗೆ ಬಿಎಸ್​ವೈ ಸೂಚಿಸಿದ್ದಾರೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top