fbpx
ಸಮಾಚಾರ

ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ವಿಧಿವಶ: ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಸಂತಾಪ

ಹಿರಿಯ ವಕೀಲ ಹಾಗೂ ಕೇಂದ್ರದ ಮಾಜಿ ಸಚಿವ ರಾಮ್ ಜೇಠ್ಮಲಾನಿ ಅವರು ಇಂದು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಜೇಠ್ಮಲಾನಿಯವರು ಕಳೆದ ಎರಡು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ ದೆಹಲಿಯ ನಿವಾಸದಲ್ಲಿ ನಿಧನರಾಗಿದ್ದಾರೆ.

ಸೆಪ್ಟೆಂಬರ್ 14, 1923 ರಂದು ಸಿಂಧ್ ಪ್ರಾಂತ್ಯದ ಶಿಖಾರ್‌ಪುರದಲ್ಲಿ ಜನಿಸಿದ ರಾಮ್ ಜೆಠ್ಮಲಾನಿ ಅವರು ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ವಕೀಲರಲ್ಲಿ ಒಬ್ಬರಾಗಿದ್ದರು ಮತ್ತು ಅಟಲ್ ಬಿಹಾರಿ ವಾಜಪೇಯಿ ಕ್ಯಾಬಿನೆಟ್‌ನಲ್ಲಿ ಕಾನೂನು ಸಚಿವರು ಮತ್ತು ನಗರಾಭಿವೃದ್ಧಿ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಅವರು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 75 ವರ್ಷಗಳಿಗಿಂತ ಹೆಚ್ಚು ಕಾಲ ಕಾನೂನು ವೃತ್ತಿಯನ್ನು ಮಾಡಿದ ನಂತರ, ಜೆಥ್ಮಲಾನಿ ಎರಡು ವರ್ಷಗಳ ಹಿಂದೆಯೇ ನಿವೃತ್ತಿ ಘೋಷಿಸಿದ್ದರು.

 

 

ಜೇಠ್ಮಲಾನಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ರಾಜಕೀಯ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ರಾಷ್ಟ್ರಪತಿ ಕೋವಿಂದ್, ಜೇಠ್ಮಲಾನಿ ಅವರ ನಿಧನ ನಿಜಕ್ಕೂ ನೋವು ತಂದಿದೆ. ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಯಾವುದೇ ಮುಲಾಜಿಲ್ಲದೇ ಹೇಳುತ್ತಿದ್ದ ಅವರ ಗುಣ ಅಪರೂಪವಾದದ್ದು. ಅವರ ನಿಧನದಿಂದಾಗಿ ದೇಶ ಶ್ರೇಷ್ಠ ನ್ಯಾಯಶಾಸ್ತ್ರಜ್ಞನನ್ನು ಕಳೆದುಕೊಂಡಿದೆ ಎಂದು ಕೋವಿಂದ್ ಟ್ವೀಟ್ ಮಾಡಿದ್ದಾರೆ.

 

 

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ತಮ್ಮ ಬುದ್ದಿಯಿಂದಲೇ ಮಾತನಾಡುತ್ತಿದ್ದ ಪಂಡಿತನನ್ನು ದೇಶ ಕಳೆದುಕೊಂಡಿದ್ದು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸರ್ಕಾರವನ್ನು ಖಂಡಿಸುತ್ತಿದ್ದ ಅವರ ಕಾರ್ಯ ವೈಖರಿ ಹಲವರಿಗೆ ಆದರ್ಶವಾಗಿತ್ತು. ಸಾಕಷ್ಚು ಜನರಿಗೆ ರಾಮ್ ಜೇಠ್ಮಲಾನಿ ಸಹಾಯ ಮಾಡಿದ್ದು, ಇದು ಅವರ ಜೀವನದ ಅಂಗವೇ ಆಗಿತ್ತು. ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ ಎಂದು ಟ್ವೀಟ್ ಮಾಡಿದ್ದಾರೆ.

 

 

ಜೆಠ್ಮಲಾನಿ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ‘ಹಿರಿಯ ವಕೀಲ ರಾಮ್ ಜೆಠ್ಮಲಾನಿ ಜಿ ಅವರ ನಿಧನದಿಂದ ತೀವ್ರ ದುಃಖಿತವಾಗಿದೆ. ಸ್ವತಃ ಅವರು ಒಂದು ಸಂಸ್ಥೆಯಾಗಿದ್ದರು, ಅವರು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕ್ರಿಮಿನಲ್ ಕಾನೂನನ್ನು ರೂಪಿಸಿದರು. ಅವರ ಅನುಪಸ್ಥಿತಿಯನ್ನು ಎಂದಿಗೂ ತುಂಬಲು ಸಾಧ್ಯವಿಲ್ಲ ಮತ್ತು ಅವರ ಹೆಸರು ಕಾನೂನು ಇತಿಹಾಸದಲ್ಲಿ ಸುವರ್ಣ ಪದಗಳಲ್ಲಿ ಬರೆಯಲಾಗುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top